ಬೆಂಗಳೂರು,ಆ.13- ಸರ್ಕಾರಿ ಜಮೀನು ಕಬಳಿಸುವ ಭೂಗಳ್ಳರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ತಿದ್ದುಪಡಿ ಮಾಡಿರುವ ಕಾಯ್ದೆ ಈ ತಿಂಗಳ ಅಂತ್ಯದೊಳಗೆ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಪರಿಷತ್‌ಗೆ ತಿಳಿಸಿದರು.
ಸದಸ್ಯ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಇದುವರೆಗೂ ಸರ್ಕಾರಿ ಜಮೀನು ಕಬಳಿಸಿದವರು ಕಾನೂನಿನಿಂದ ತಪ್ಪಿಸಿಕೊಳ್ಳುತ್ತಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ತರುವುದು ಸೇರಿದಂತೆ ಹಲವು ದಾರಿಗಳಿಂದ ನುಣುಚಿಕೊಳ್ಳುತ್ತಿದ್ದರು. ನೂತನ ಕಾಯ್ದೆಯಲ್ಲಿ ಹಲವಾರು ಕಠಿಣ ಕಾನೂನು ಕ್ರಮಗಳನ್ನು ಸೇರ್ಪಡೆ ಮಾಡಿದ್ದೇವೆ ಎಂದು ಹೇಳಿದರು.
ಇನ್ನು ಮುಂದೆ ಯಾರೇ ಆಗಲಿ ಸರ್ಕಾರಿ ಜಮೀನು ಕಬಳಿಸಿರುವುದು ಅಥವಾ ಕಬಳಿಸುವವರಿಗೆ ಪ್ರತ್ಯಕ್ಷವಾಗಿ , ಪರೋಕ್ಷವಾಗಿ ಸಹಾಯ ಮಾಡಿದ ಅಧಿಕಾರಿಗಳ ಮೇಲೂ ಕಾನೂನು ಕ್ರಮ ಜರುಗಿಸಲು ಹೊಸ ಕಾನೂನಿನಲ್ಲಿ ಅವಕಾಶವಿದೆ. ಸರ್ಕಾರಿ ಜಮೀನು ಅಕ್ರಮವಾಗಿ ಕಬಳಿಸದ್ದನ್ನು ರದ್ದುಪಡಿಸುವ ಅಧಿಕಾರವನ್ನು ಜಿಲ್ಲಾ ನೋಂದಣಿ ಅಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಕೆಲವು ಪ್ರಭಾವಿಗಳು ಸರ್ಕಾರಿ ಜಮೀನನ್ನು ಭೂ ಕಬಳಿಕೆ ಮಾಡಿಕೊಂಡು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದರು. ಹೈಕೋರ್ಟ್ ಇಲ್ಲವೇ ಸುಪ್ರೀಂಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತರುತ್ತಿದ್ದರು. ಜಮೀನು ಮಾಲೀಕ ಕಾನೂನು ಹೋರಾಟ ನಡೆಸಲು ಸಾಧ್ಯವಾಗದೆ ತನಗೆ ಅರ್ಧ ಪರಿಹಾರ ಸಿಕ್ಕರೆ ಸಾಕು ಎಂಬ ತೀರ್ಮಾನಕ್ಕೆ ಬರುತ್ತಿದ್ದ. ಈ ಎಲ್ಲ ಅಕ್ರಮಗಳನ್ನು ತಡೆಗಟ್ಟಲು ನಾವು ಹೊಸ ನಿಯಮವನ್ನು ರೂಪಿಸಿದ್ದೇವೆ. ಇದರ ಕರಡು ಸಿದ್ದವಾಗಿದ್ದು, ಇನ್ನು ಮುಂದೆ ಭೂ ಕಬಳಿಕೆ ಅಷ್ಟು ಸರಳವಾಗಿರುವುದಿಲ್ಲ. ಎಷ್ಟೇ ಒತ್ತಡ ಬಂದರೂ ನಿಯಮವನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿದರು.