ಬೆಂಗಳೂರು,ಆ.13– ರಾಜ್ಯದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 1 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‌ಗೆ ತಿಳಿಸಿದರು.
ಸದಸ್ಯ ನವೀನ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ದ್ವಿಚಕ್ರ ವಾಹನ , ಬಸ್, ಕಾರು, ಟ್ರ್ಯಾಕ್ಟರ್ ಮತ್ತಿತರ ವಾಹನಗಳ ಅಪಘಾತದಿಂದ ದೇಶಾದ್ಯಂತ 1,25,000 ಜನ ಸಾವನ್ನಪ್ಪಿದರೆ, ರಾಜ್ಯದಲ್ಲಿ 8 ಸಾವಿರ ಜನ ಸಾಯುತ್ತಾರೆ ಎಂದು ಹೇಳಿದರು.
ಅಪಘಾತಗಳ ಪ್ರಕರಣಗಳನ್ನು ತಡೆಗಟ್ಟಲು ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಕಟ್ಟುನಿಟ್ಟಿನ ದಂಡ ವಿಧಿಸುವುದು, ಡಿಎಲ್ ರದ್ದುಪಡಿಸುವುದು, ಕಾನೂನು ಕ್ರಮಗಳಂತಹ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ಅಪಘಾತಗಳು ಕಡಿಮೆಯಾಗುತ್ತಿಲ್ಲ ಎಂದು ವಿಷಾದಿಸಿದರು.
ಶಾಲಾಕಾಲೇಜುಗಳಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿಗಳಿಂದ ಜಾಗೃತಿ ಅಭಿಯಾನ, ಮದ್ಯಪಾನ ಮಾಡಿ ವಾಹನ ಚಾಲನೆ ನಿಷೇಧ, ವೀಲ್ಹಿಂಗ್ ಮಾಡಿದವರ ಡಿಎಲ್ ರದ್ದು ಸೇರಿದಂತೆ ಹತ್ತಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾವು ಎಷ್ಟೇ ಕಾನೂನು ಕ್ರಮ ವಿಧಿಸಿದರೂ ಜನರಲ್ಲಿ ಜಾಗೃತಿ ಬರದೆ ಇದ್ದರೆ ನಾವೇನು ಮಾಡಲು ಸಾಧ್ಯ? ಎಂದರು.
ರಾಜ್ಯದಲ್ಲಿ 1,30,000 ದ್ವಿಚಕ್ರ ವಾಹನಗಳು, 1,25,000 ಮೋಟಾರ್ ವಾಹನಗಳು, 28 ಲಕ್ಷ ಸಾರಿಗೆ ಬಸ್‌ಗಳಿವೆ ಎಂದು ಮಾಹಿತಿ ನೀಡಿದರು. ಸದಸ್ಯ ಸುನೀಲ್ ವಲ್ಯಾಪುರೆ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ತಿಂಗಳ ಅಂತ್ಯಕ್ಕೆ ಸುಮಾರು 175 ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿ ಮಾಡಲು ನಿರ್ಧರಿಸಿದ್ದೇವೆ ಎಂದರು.
ಕೆಎಸ್‌ಆರ್‌ಟಿಸಿಯಿಂದ 100 ಬಸ್‌ಗಳು, ಕಲ್ಯಾಣ ಕರ್ನಾಟಕಕ್ಕೆ 65 ಹಾಗೂ ಕಿತ್ತೂರು ಕರ್ನಾಟಕಕ್ಕೆ 15 ವಿದ್ಯುತ್ ಚಾಲಿತ ಬಸ್‌ಗಳು ಸಂಚಾರ ಮಾಡಲಿವೆ. ಈ ಭಾಗಕ್ಕೆ ಹೆಚ್ಚಿನ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ ಟೆಂಡರ್‌ನಲ್ಲಿ ಭಾಗವಹಿಸಿರಲಿಲ್ಲ ಎಂದು ಮಾಹಿತಿ ನೀಡಿದರು.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-08-2025)
- ಡಿಸೆಂಬರ್ ತಿಂಗಳ ಒಳಗೆ 2ಲಕ್ಷ ಪೋಡಿ ವಿತರಣೆ : ಸಚಿವ ಕೃಷ್ಣಭೈರೇಗೌಡ
- ಬೀದಿನಾಯಿಗಳಿಗೆ ಬಾಡೂಟ ಹಾಕುವ ಯೋಜನೆ ಸ್ಥಗಿತ ಸಾಧ್ಯತೆ
- ಸ್ವಾತಂತ್ರ್ಯೋತ್ಸವಕ್ಕೆ ಬಿಗಿ ಬಂದೋಬಸ್ತ್, ಮಾಣಿಕ್ ಷಾ ಪರೇಡ್ ಮೈದಾನ ಪ್ರವೇಶಕ್ಕೆ ಇದೇ ಮೊದಲ ಬಾರಿಗೆ ಇ-ಪಾಸ್ ವ್ಯವಸ್ಥೆ
- ಮುಜರಾಯಿ ದೇಗುಲಗಳಲ್ಲಿ ಆ.15 ರಿಂದ ಪ್ಲಾಸ್ಟಿಕ್ ಬಳಕೆ ನಿಷೇಧ