ಬೆಂಗಳೂರು,ಆ.13- ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಹೇಳಿದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ನಿರ್ವಹಣೆಗಾಗಿ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಮೈದಾನದ ಸುತ್ತ ಎಲ್ಲಾ ಘಟನೆಗಳನ್ನು ಸೂಕವಾಗಿ ನಿಗಾವಹಿಸಲು ಸಿಸಿಟಿವಿ ಕ್ಯಾಮೆರಾ ಮತ್ತು ಬ್ಯಾಗೇಜ್ ಸ್ಕ್ಯಾನರ್, ಡಿಎಫ್‌ಎಂಡಿ ಮತ್ತು ಹೆಚ್‌ಹೆಚ್‌ಎಂಡಿ ಗಳನ್ನು ಅಳವಡಿಸಲಾಗಿರುತ್ತದೆ ಎಂದು ವಿವರಿಸಿದರು.ಮೈದಾನದ ಭದ್ರತೆ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಕಳೆದ 15 ದಿನಗಳಿಂದ ಪೊಲೀಸರನ್ನು ಕಣ್ಗಾವಲು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ನಗರದ ಎಲ್ಲಾ ಹೋಟೆಲ್, ಲಾಡ್ಜ್ ಗಳು, ತಂಗುದಾಣಗಳು ಹಾಗೂ ಇನ್ನೀತರೆ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ವಾಸ್ತವ್ಯ ಹೂಡುವವರ ಮೇಲೆಯೂ ಸೂಕ್ತ ನಿಗಾವಹಿಸಲಾಗಿದೆ ಎಂದು ಹೇಳಿದರು.
ಆ.15 ರಂದು ಸಮಾರಂಭಕ್ಕೆ ಆಗಮಿಸುವವರು ಬೆಳಗ್ಗೆ 8.30 ರೊಳಗೆ ಮೈದಾನದೊಳಗೆ ಪ್ರವೇಶಿಸತಕ್ಕದ್ದು. ಸಾರ್ವಜನಿಕರು, ಹಸಿರು ಬಣ್ಣದ ಪಾಸ್ ಹೊಂದಿರುವವರು ಮಣಿಪಾಲ್ ಸೆಂಟರ್ ಕಡೆಯಿಂದ ಕಬ್ಬನ್ ರಸ್ತೆ ಮೂಲಕ ಗೇಟ್ ನಂ. 5 ರಲ್ಲಿ ಆಗಮಿಸಲು ಸೂಚಿಸಲಾಗಿದೆ. ಯಾವುದಾದರೂ ಅನುಮಾನಾಸ್ಪದ ವಸ್ತುಗಳು, ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೇ ಸಮವಸ್ತ್ರದಲ್ಲಿರುವ ಪೊಲೀಸರಿಗೆ ತಿಳಿಸಬೇಕು.
ಸಮಾರಂಭಕ್ಕೆ ಆಗಮಿಸುವವರು ಭದ್ರತೆಯ ಅಂಗವಾಗಿ ಗೇಟ್‌ಗಳ ಬಳಿ ತಪಾಸಣೆಗೆ ಒಳಗಾಗಿ ಪೊಲೀಸರೊಂದಿಗೆ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ.ವಸ್ತುಗಳು ನಿಷೇಧ: ಮೈದಾನದೊಳಗೆ ಸಿಗರೇಟ್, ಬೆಂಕಿಪೊಟ್ಟಣ, ಕರಪತ್ರಗಳು, ಬಣ್ಣದ ದ್ರಾವಣಗಳು, ವಿಡಿಯೋ ಮತ್ತು ಸ್ಟೀಲ್ ಕ್ಯಾಮೆರಾಗಳು, ನೀರಿನ ಬಾಟಲ್‌ಗಳು, ಶಸಾ್ತ್ರಸ್ತ್ರ ಗಳು, ಹರಿತವಾದ ಆಯುಧ, ಚಾಕು-ಚೂರಿ, ಕಪ್ಪು ಕರವಸ್ತ್ರಗಳು, ತಿಂಡಿ ತಿನಿಸುಗಳು, ಮದ್ಯದ ಬಾಟೆಲ್‌ಗಳು, ಮಾದಕ ವಸ್ತುಗಳು, ಪಟಾಕಿ ಮತ್ತು ಸ್ಪೋಟಕ ವಸ್ತುಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಮೈದಾನದೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ಆಯುಕ್ತರು ವಿವರಣೆ ನೀಡಿದರು.
ಪ್ರಥಮ ಬಾರಿಗೆ ಇ-ಪಾಸ್ ವ್ಯವಸ್ಥೆ “
ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ 79 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಯಿಂದ ಪ್ರಥಮ ಭಾರಿಗೆ ಇ-ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ.ಕಾರ್ಯಕ್ರಮ ವೀಕ್ಷಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ಸೇವಾ ಸಿಂಧು ವೆಬ್‌ಸೈಟ್‌ನಿಂದ ಇ-ಪಾಸ್ ಅನ್ನು ಪಡೆಯಬಹುದಾಗಿದೆ.
ಇ-ಪಾಸ್ ಪಡೆಯಲು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್‌ನ ವಿವರಗಳನ್ನು ನಮೂದಿಸಿ ನೊಂದಾಯಿಸಿಕೊಳ್ಳಬೇಕು ಮತ್ತು ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ ನಿಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ ಬರುವ ಓಟಿಪಿ ಯನ್ನು ಅಳವಡಿಸಿ ಇ-ಪಾಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.
ವಿಶೇಷ ಸೂಚನೆ:
ಆ.15 ರಂದು ಮಾತ್ರ ಇ-ಪಾಸ್ ಮಾನ್ಯವಾಗಿರುತ್ತದೆ. ಅಂದು ಬೆಳಗ್ಗೆ 8.15ಕ್ಕಿಂತ ಮೊದಲು ಗೇಟ್ ನಂ.4 ರ ಬಳಿ ಆವರಣದ ಒಳಗೆ ಪ್ರವೇಶಿಸಬೇಕು. ಪ್ರತಿ ಇ-ಪಾಸ್ ಒಬ್ಬರಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ.ಕಾರ್ಯಕ್ರಮದ ಸಮಯದಲ್ಲಿ ಇ-ಪಾಸ್‌ನ ಮುದ್ರಿತ ಪ್ರತಿ ಅಥವಾ ಡಿಜಿಟಲ್ (ಮೊಬೈಲ್) ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು.
ಆರು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಇ-ಪಾಸ್ ಅವಶ್ಯವಿಲ್ಲ. ಇ-ಪಾಸ್ ವರ್ಗಾಹಿಸುವಂತಿಲ್ಲ. ಇ-ಪಾಸ್‌ಗಳು ಒಟ್ಟು 3 ಸಾವಿರ ಸಂಖ್ಯೆಗೆ ಸೀಮಿತವಾಗಿರುವುದರಿಂದ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಮೂಲ ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಇ-ಪಾಸ್ ಹೊಂದಿದವರಿಗೆ ಪಾರ್ಕಿಂಗ್ ಸೌಲಭ್ಯ ಒದಗಿಸಲಾಗುವುದಿಲ್ಲ. ಪಾರ್ಕಿಂಗ್ ವ್ಯವಸ್ಥೆಗೆ ಪಾಸ್‌ದಾರರೇ ವಾಬ್ದಾರರಾಗಿರುತ್ತಾರೆಂದು ಪೊಲೀಸ್ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.