Thursday, August 14, 2025
Homeರಾಜ್ಯಹೆಚ್ಚುತ್ತಿರುವ ಕೋಮುಗಲಭೆಗಳ ಕುರಿತು ವಿಧಾನ ಪರಿಷತ್‌ನಲ್ಲಿ ಗಂಭೀರ ಚರ್ಚೆ

ಹೆಚ್ಚುತ್ತಿರುವ ಕೋಮುಗಲಭೆಗಳ ಕುರಿತು ವಿಧಾನ ಪರಿಷತ್‌ನಲ್ಲಿ ಗಂಭೀರ ಚರ್ಚೆ

Serious discussion in the Legislative Council on the increasing communal riots

ಬೆಂಗಳೂರು,ಆ.14- ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮುಗಲಭೆ ಹಾಗೂ ಅದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ವಿಧಾನಪರಿಷತ್‌ನಲ್ಲಿ ಗಂಭೀರವಾದ ಚರ್ಚೆ ನಡೆಯಿತು. ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕಿಶೋರ್‌ ಅವರು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ರಾಜ್ಯದಲ್ಲಿ ಕೋಮುಸೌಹಾರ್ದತೆ ಮೂಡಿಸುವ ವಿಶೇಷ ಕಾರ್ಯಪಡೆ(ಎಸ್‌‍ಎಎಫ್‌) ಕುರಿತು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಗೃಹಸಚಿವರು, ಸರ್ಕಾರ ತೆಗೆದುಕೊಂಡಿರುವ ಕ್ರಮಗಳು, ವಿಶೇಷ ಕಾರ್ಯಪಡೆ, ಕೋಮುಸೌಹಾರ್ದತೆ ಮರುಕಳಿಸಲು ಬೇಕಾದ ವಾತಾವರಣ ಸೃಷ್ಟಿ, ಕಾನೂನು ಸುವ್ಯವಸ್ಥೆ ಇತ್ಯಾದಿ ಕ್ರಮಗಳ ಬಗ್ಗೆ ಸುದೀರ್ಘ ಮಾಹಿತಿ ನೀಡಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಗೃಹಸಚಿವರ ಉತ್ತರಕ್ಕೆ ತೃಪ್ತರಾಗದೆ ಸೌಹಾರ್ದ ವಾತಾವರಣ ಹದಗೆಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸದಸ್ಯ ಕಿಶೋರ್‌ ಕುಮಾರ್‌ ಮಾತನಾಡಿ, ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹಸಚಿವರು ಹೇಳುತ್ತಿದ್ದಾರೆ. ಮಂಗಳೂರಿನಲ್ಲಿ ಕೆಲ ತಿಂಗಳ ಹಿಂದೆ ಸುಹಾಸ್‌‍ ಶೆಟ್ಟಿ ಕೊಲೆಯಾಯಿತು. ಆದರೆ ಸಚಿವರು ಕೊಲೆಯಾದವರ ಮನೆಗೆ ಮನೆಗೆ ಹೋಗಲಿಲ್ಲ. ಅವರ ತಂದೆತಾಯಿಗಳನ್ನು, ಸಂಬಂಧಿಕರನ್ನು ಭೇಟಿಯಾಗಿ ಸ್ವಾಂತನವನ್ನು ಹೇಳಿಲ್ಲ. ಆದರೆ ಕೆಲ ದಿನಗಳ ಹಿಂದೆ ಅನ್ಯಕೋಮಿನ ವ್ಯಕ್ತಿಯೊಬ್ಬ ಸತ್ತಿದ್ದಕ್ಕೆ ಅಲ್ಲಿ ಹೋಗಿ ಬಂದಿದ್ದೀರಿ. ನೀವು ಯಾವುದೋ ಜಾತಿ ಅಥವಾ ಧರ್ಮಕ್ಕೆ ಸೀಮಿತರಾದ ಸಚಿವರಲ್ಲ. ಆರು ಕೋಟಿ ಕನ್ನಡಿಗರ ಗೃಹಸಚಿವರು. ಪ್ರತಿಯೊಬ್ಬರ ರಕ್ಷಣೆ ನಿಮ ಕರ್ತವ್ಯ ಎಂದು ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್‌‍ನ ಐವಾನ್‌ ಡಿಸೋಜ ಕರಾವಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಯಾರು ಕಾರಣ ಎಂಬುದು ಎಲ್ಲರಿಗೂ ಗೊತ್ತಿದೆ. ಗೃಹಸಚಿವರು ತಾರತಮ್ಯ ಮಾಡದೆ ಕ್ರಮ ಕೈಗೊಂಡಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.

ಈ ಹಂತದಲ್ಲಿ ಕಾಂಗ್ರೆಸ್‌‍ನ ಬಿ.ಕೆ.ಹರಿಪ್ರಸಾದ್‌ ಅವರು ಮಾತನಾಡಿ, ರೌಡಿಶೀಟರ್‌ ಹಿನ್ನೆಲೆಯುಳ್ಳ ವ್ಯಕ್ತಿ ಸತ್ತರೆ ಅಥವಾ ಅನ್ಯ ಕಾರಣಗಳಿಂದ ಕೊಲೆಯಾದರೆ ಗೃಹಸಚಿವರು ಅಲ್ಲಿಗೆ ಹೋಗಬೇಕೆ? ಎಂದು ಪ್ರಶ್ನೆ ಮಾಡಿದರು. ಕೊಲೆ ಮಾಡುವವರು ಯಾರೋ? ಸಾಯುವವರೋ ಇನ್ಯಾರೋ ? ಇವರಿಗೆ ಕುಮಕ್ಕು ಕೊಡುವ ಸಂಘಟನೆಗಳನ್ನು ಮೊದಲು ನಿಗ್ರಹಿಸಿ. ಯಾವುದೇ ಜಾತಿ, ಧರ್ಮ ನೋಡದೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಈ ವೇಳೆ ಸಿ.ಟಿ.ರವಿ ಅವರು ಕೆಲವು ಧರ್ಮಗಳಿಗೆ ದೇವರು ಯಾರು? ಸಂಪ್ರದಾಯ ಯಾವುದು? ಎಂಬುದೇ ಗೊತ್ತಿರುವುದಿಲ್ಲ. ಕೇವಲ ತಮ ಧರ್ಮವೇ ಶ್ರೇಷ್ಠ. ಉಳಿದ ಧರ್ಮಗಳು ನಗಣ್ಯ ಎಂಬ ಮಾನಸಿಕ ಸ್ಥಿತಿಯಲ್ಲಿದ್ದಾರೆ.

ಇಂಥವರ ಮೇಲೂ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು. ಬಿಜೆಪಿಯ ಭಾರತಿ ಶೆಟ್ಟಿ ಮಾತನಾಡಿ, ಕೋಮುಸೌಹಾರ್ದತೆಯನ್ನು ಕೆಲವರು ದುರುದ್ದೇಶಪೂರ್ವಕವಾಗಿ ಹಾಳುಗೆಡುತ್ತಾರೆ. ಇದಕ್ಕಾಗಿಯೇ ಸಂಘಟನೆಗಳಿವೆ. ಮೊದಲು ಇವರನ್ನು ಹತ್ತಿಕ್ಕಿ ಎಂದು ಒತ್ತಾಯಿಸಿದರು. ನಂತರ ಉತ್ತರಿಸಿದ ಪರಮೇಶ್ವರ್‌, ನಮ ಸರ್ಕಾರ ಬಂದ ಮೇಲೆ ಕೋಮು ತಡೆ ವಿಶೇಷ ಕಾರ್ಯಪಡೆ ರಚನೆ ಮಾಡಿದ್ದೇವೆ. ಹಿಂದೆ ಇದ್ದಂಥ ವಾತಾವರಣ ಈಗ ಇಲ್ಲ. ಮಂಗಳೂರು ಸೇರಿದಂತೆ ಇಡೀ ಕರಾವಳಿ ಪ್ರದೇಶ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳುವುದಿಲ್ಲ.

ಕೊಲೆ, ಸುಲಿಗೆ, ಅತ್ಯಾಚಾರ ರಾಜ್ಯದಲ್ಲಿ ನಡೆದೇ ಇಲ್ಲ ಎಂದು ಹೇಳಿದರೂ ನಂಬುವುದಿಲ್ಲ. ಕೆಲವು ಕಡೆ ಘಟನೆಗಳು ನಡೆದಿವೆ. ಅದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಹಿಂದಿನ ದಿನಗಳಿಗೆ ಹೋಲಿಸಿದರೆ ಪರಿಸ್ಥಿತಿ ಉತ್ತಮವಾಗಿದೆ. ಬಂಡವಾಳ ಹೂಡಲು ಅನೇಕ ಉದ್ಯಮಿಗಳು ಮುಂದಕ್ಕೆ ಬರುತ್ತಿದ್ದಾರೆ.

ಇಡೀ ದೇಶದಲ್ಲೇ ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದ ಜಿಡಿಪಿ ಬೆಳವಣಿಗೆಯಲ್ಲಿ ಮಂಗಳೂರು ಶೇ.6ರಷ್ಟು ಕೊಡುಗೆ ನೀಡುತ್ತದೆ. ಇದೆಲ್ಲವೂ ಉತ್ತಮ ವಾತಾವರಣದ ಬೆಳವಣಿಗೆಯಲ್ಲವೇ ಎಂದು ಪ್ರತಿಪಕ್ಷಗಳನ್ನು ಪ್ರಶ್ನೆ ಮಾಡಿದರು.

RELATED ARTICLES

Latest News