ನವದೆಹಲಿ,ಆ.15- ಸ್ವಾತಂತ್ರ್ಯ ದಿನಚಾರಣೆಯ ಹಿನ್ನಲೆಯಲ್ಲಿ ದೇಶದ ಯುವಕರಿಗೆ ಶುಭ ಸುದ್ದಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಧಾನಮಂತ್ರಿ ವಿಕ್ಷಿತ್ ಭಾರತ್ ರೋಜ್ಗಾರ್ ಯೋಜನೆಯನ್ನು ಘೋಷಿಸಿದ್ದು, ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವವರಿಗೆ ಕೇಂದ್ರದಿಂದ 15,000 ರೂ.ಗಳನ್ನು ನೀಡಲಾಗುವುದು ಎಂದು ಪ್ರಕಟಿಸಿದ್ದಾರೆ.
79ನೇ ಸ್ವಾತಂತ್ರ್ಯ ದಿನದಂದು ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೇಲೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, 1 ಲಕ್ಷ ಕೋಟಿ ರೂಪಾಯಿಗಳ ಈ ಯೋಜನೆ ತಕ್ಷಣದಿಂದ ಜಾರಿಗೆ ಬರಲಿದೆ. ಈ ಯೋಜನೆಯು 3.5 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂದರು.
ಇಂದು ಆಗಸ್ಟ್ 15, ಇಂದೇ ನನ್ನ ದೇಶದ ಯುವಕರಿಗೆ 1 ಲಕ್ಷ ಕೋಟಿ ಮೊತ್ತದ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಇಂದಿನಿಂದ ಪ್ರಧಾನಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ ಜಾರಿಯಾಗುತ್ತಿದೆ. ಇದರಡಿ ಪ್ರೈವೆಟ್ ಸೆಕ್ಟರ್‌ನಲ್ಲಿ ಮೊದಲ ಉದ್ಯೋಗ ಪಡೆದುಕೊಳ್ಳುವವರಿಗೆ ಸರ್ಕಾರದ ವತಿಯಿಂದ 15 ಸಾವಿರ ರೂ. ನೀಡಲಾಗುವುದು. ಇನ್ನು ಹೆಚ್ಚು ಹೊಸ ಉದ್ಯೋಗ ಸೃಷ್ಟಿಸಿ ಅವಕಾಶ ನೀಡಲಾಗುವುದು ಎಂದು ಹೇಳಿದರು.
3.5 ಕೋಟಿ ಯುವಕರಿಗೆ ಉದ್ಯೋಗಾವಕಾಶ
ಪ್ರಧಾನಮಂತ್ರಿ ವಿಕಾಸಿತ್ ಭಾರತ್ ರೋಜ್‌ಗಾರ್ ಯೋಜನೆಯು ಯುವಕರಿಗೆ ಹೊಸ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ದೇಶದ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ, ಯುವಕರಿಗೆ ಸ್ವಾವಲಂಬನೆಯ ದಾರಿಯನ್ನು ತೆರೆಯಲಿದೆ. ಈ ಯೋಜನೆಯ ಮೂಲಕ ಸುಮಾರು 3.5 ಕೋಟಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲಾಗುವುದು ಎಂದರು.
ಈ ಘೋಷಣೆಯು ದೇಶದ ಯುವಜನರಲ್ಲಿ ಹೊಸ ಆಶೆಯನ್ನು ಮೂಡಿಸಿದ್ದು, ಭಾರತದ ಯುವಶಕ್ತಿಯ ಸಾಮಥ್ರ್ಯವನ್ನು ಎತ್ತಿಹಿಡಿಯುವ ಸಂದೇಶವಾಗಿದೆ. ರೈತರು, ಮಹಿಳೆಯರು, ಮತ್ತು ಮಧ್ಯಮ ವರ್ಗದವರ ಜೊತೆಗೆ ಯುವಕರಿಗೆ ಸಶಕ್ತಿಕರಣದ ಮೂಲಕ ಭಾರತದ ಆರ್ಥಿಕತೆಯನ್ನು ಜಾಗತಿಕವಾಗಿ ಬಲಪಡಿಸುವ ಜೊತೆಗೆ, ಯುವಕರಿಗೆ ಉಜ್ವಲ ಭವಿಷ್ಯ ನೀಡಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಉದ್ಯೋಗ-ಸಂಬಂಧಿತ ಪ್ರೋತ್ಸಾಹಕ (ಇಎಲ್‌ಐ) ಯೋಜನೆಯನ್ನು ಅನುಮೋದಿಸಿದೆ ಎಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಕಳೆದ ತಿಂಗಳಷ್ಟೇ ತಿಳಿಸಿತ್ತು.
ಜುಲೈ 25ರಂದು ಬಿಡುಗಡೆಯಾದ ಹೇಳಿಕೆಯಲ್ಲಿ, ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ (ಒಗಿಃಖಙ) ಎರಡು ವರ್ಷಗಳಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುವ ಗುರಿ ಹೊಂದಿದ್ದು, ಈ ಪೈಕಿ 1.92 ಕೋಟಿ ಫಲಾನುಭವಿಗಳು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವವರಾಗಿರುತ್ತಾರೆ ಎಂದು ಹೇಳಿದೆ. ಈ ಹೆಸರು ವಿಕ್ಷಿತ್ ಭಾರತ್ ಉಪಕ್ರಮದ ಕಡೆಗೆ ಯೋಜನೆಯ ಒಟ್ಟಾರೆ ಉದ್ದೇಶಗಳಿಗೆ ಹೊಂದಿಕೆಯಾಗುತ್ತದೆ ಮತ್ತು ದೇಶದಲ್ಲಿ ಸಮಗ್ರ ಮತ್ತು ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಉದ್ಯೋಗದಾತರಿಗೆ ಬೆಂಬಲ :
ಈ ಯೋಜನೆಯು ಎರಡು ಭಾಗಗಳನ್ನು ಒಳಗೊಂಡಿದೆ, ಭಾಗ ಎ ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಕೇಂದ್ರೀಕೃತವಾಗಿದೆ ಮತ್ತು ಭಾಗ ಬಿ ಉದ್ಯೋಗದಾತರ ಮೇಲೆ ಕೇಂದ್ರೀಕೃತವಾಗಿದೆ. ಉದ್ಯೋಗಿಗಳ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯಲ್ಲಿ ನೋಂದಾಯಿಸಿಕೊಂಡ ಮೊದಲ ಬಾರಿಗೆ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು, ಭಾಗ ಎ ಒಂದು ತಿಂಗಳ ಇಪಿಎಫ್ ವೇತನವನ್ನು ಎರಡು ಕಂತುಗಳಲ್ಲಿ 15,000 ರೂ.ಗಳವರೆಗೆ ನೀಡುತ್ತದೆ.
1 ಲಕ್ಷ ರೂ.ವರೆಗೆ ಸಂಬಳ ಪಡೆಯುವ ಉದ್ಯೋಗಿಗಳು ಅರ್ಹರಾಗಿರುತ್ತಾರೆ. ಮೊದಲ ಕಂತನ್ನು ಆರು ತಿಂಗಳ ಸೇವೆಯ ನಂತರ ಪಾವತಿಸಲಾಗುವುದು ಮತ್ತು ಎರಡನೇ ಕಂತನ್ನು 12 ತಿಂಗಳ ಸೇವೆಯ ನಂತರ ಮತ್ತು ಉದ್ಯೋಗಿ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ನಂತರ ಪಾವತಿಸಲಾಗುವುದು.
ಉಳಿತಾಯ ಅಭ್ಯಾಸವನ್ನು ಉತ್ತೇಜಿಸಲು, ಪ್ರೋತ್ಸಾಹದ ಒಂದು ಭಾಗವನ್ನು ಉಳಿತಾಯ ಸಾಧನ ಅಥವಾ ಠೇವಣಿ ಖಾತೆಯಲ್ಲಿ ನಿಗದಿತ ಅವಧಿಗೆ ಇಡಲಾಗುತ್ತದೆ ಮತ್ತು ನಂತರದ ದಿನಾಂಕದಂದು ಉದ್ಯೋಗಿ ಅದನ್ನು ಹಿಂಪಡೆಯಬಹುದು ಎಂದು ಸಚಿವಾಲಯ ತಿಳಿಸಿದೆ.
ಮೊದಲ ಬಾರಿಗೆ ಉದ್ಯೋಗಿಗಳಿಗೆ ಎಲ್ಲಾ ಪಾವತಿಗಳನ್ನು ಆಧಾರ್ ಬ್ರಿಡ್ಜ್ ಪಾವತಿ ವ್ಯವಸ್ಥೆ ಬಳಸಿಕೊಂಡು ನೇರ ಪ್ರಯೋಜನ ವರ್ಗಾವಣೆ ವಿಧಾನದ ಮೂಲಕ ಮಾಡಲಾಗುತ್ತದೆ.
ಭಾಗ ಬಿ ಎಲ್ಲಾ ವಲಯಗಳಲ್ಲಿ ಹೆಚ್ಚುವರಿ ಉದ್ಯೋಗ ಸೃಷ್ಟಿಯನ್ನು ಒಳಗೊಳ್ಳುತ್ತದೆ, ಉತ್ಪಾದನಾ ವಲಯದ ಮೇಲೆ ವಿಶೇಷ ಗಮನ ಹರಿಸಲಾಗುತ್ತದೆ. 1 ಲಕ್ಷ ರೂ.ವರೆಗಿನ ಸಂಬಳ ಪಡೆಯುವ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತರು ಪ್ರೋತ್ಸಾಹ ಧನವನ್ನು ಪಡೆಯುತ್ತಾರೆ. ಕನಿಷ್ಠ ಆರು ತಿಂಗಳ ಕಾಲ ನಿರಂತರ ಉದ್ಯೋಗ ಹೊಂದಿರುವ ಪ್ರತಿ ಹೆಚ್ಚುವರಿ ಉದ್ಯೋಗಿಗೆ ಎರಡು ವರ್ಷಗಳವರೆಗೆ ಕೇಂದ್ರವು ಉದ್ಯೋಗದಾತರಿಗೆ ತಿಂಗಳಿಗೆ ರೂ 3,000 ವರೆಗೆ ಪ್ರೋತ್ಸಾಹ ಧನ ನೀಡುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹ ಧನವನ್ನು ಮೂರನೇ ಮತ್ತು ನಾಲ್ಕನೇ ವರ್ಷಗಳವರೆಗೆ ವಿಸ್ತರಿಸಲಾಗುವುದು.
ಇಪಿಎಫ್‌ಒದಲ್ಲಿ ನೋಂದಾಯಿಸಲಾದ ಸಂಸ್ಥೆಗಳು ಕನಿಷ್ಠ ಆರು ತಿಂಗಳವರೆಗೆ ನಿರಂತರ ಆಧಾರದ ಮೇಲೆ ಕನಿಷ್ಠ ಇಬ್ಬರು ಹೆಚ್ಚುವರಿ ಉದ್ಯೋಗಿಗಳನ್ನು (50 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ) ಅಥವಾ ಐದು ಹೆಚ್ಚುವರಿ ಉದ್ಯೋಗಿಗಳನ್ನು (50 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಉದ್ಯೋಗದಾತರಿಗೆ) ನೇಮಿಸಿಕೊಳ್ಳಬೇಕಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.