ಬೆಂಗಳೂರು,ಆ.15- ನಗರದ ಚಿನ್ನಯ್ಯಪಾಳ್ಯದ ಮನೆಯೊಂದರಲ್ಲಿ ಉಂಟಾದ ಸ್ಫೋಟಕ್ಕೆ ನಿಖರ ಕಾರಣ ಸದ್ಯಕ್ಕೆ ಕಂಡುಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆಯೊಂದರಲ್ಲಿ ಉಂಟಾದ ಸ್ಪೋಟದಿಂದಾಗಿ ಒಬ್ಬ ಬಾಲಕ ಮೃತಪಟ್ಟು, ಒಂಭತ್ತು ಮಂದಿ ಗಾಯಗೊಂಡಿದ್ದು ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವಿವರಿಸಿದರು.
ಸ್ಥಳದಲ್ಲಿ ಕಾರ್ಯಾಚರಣೆ ಕೈಗೊಂಡಿರುವ ತಾಂತ್ರಿಕ ತಂಡಗಳು ವರದಿ ನೀಡಿದ ನಂತರ ಸ್ಪೋಟಕ್ಕೆ ನಿಖರ ಕಾರಣ ಗೊತ್ತಾಗಲಿದೆ ಎಂದು ಆಯುಕ್ತರು ತಿಳಿಸಿದರು. ಏಳೆಂಟು ಮನೆಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಮತ್ತೆ ಆರೇಳು ಮನೆಗಳ ಕಿಟಕಿ ಗ್ಲಾಸ್‌ಗಳು ಒಡೆದುಹೋಗಿವೆ. ಕೆಲವು ಮನೆಗಳ ಗೋಡೆಗಳು ಸಹ ಬಿದ್ದುಹೋಗಿವೆ. ಈ ಪ್ರದೇಶ ಬಹಳ ಇಕ್ಕಟ್ಟಿನ ಪ್ರದೇಶವಾಗಿದ್ದು, ಮನೆಗಳು ಒಂದಕ್ಕೊಂದು ಹೊಂದಿಕೊಂಡಿರುವುದರಿಂದ ಹೆಚ್ಚಿನ ಅನಾಹುತವಾಗಿದೆ ಎಂದರು.
ಸ್ಥಳಕ್ಕೆ ಐದಾರು ತಂಡಗಳು ಬಂದಿದ್ದು ಕಾರ್ಯಾಚರಣೆ ಕೈಗೊಂಡಿವೆ. ಕಟ್ಟಡಗಳ ಅವಶೇಷಗಳನ್ನು ತೆಗೆದ ನಂತರ ಸ್ಪೋಟಕ್ಕೆ ಕಾರಣ ತಿಳಿದುಬರಲಿದೆ. ಅಲ್ಲಿಯವರೆಗೂ ನಾವು ಏನನ್ನೂ ಹೇಳಲು ಆಗುವುದಿಲ್ಲ ಎಂದು ಆಯುಕ್ತರು ತಿಳಿಸಿದರು.
ಬೆಳಗ್ಗೆ ಸ್ಫೋಟ ಉಂಟಾದ ನಂತರ ನಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮುಂದಿನ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.ಸ್ಥಳದಲ್ಲಿ ಪೂರ್ವವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್.ಎಸ್, ಡಿಸಿಪಿ ಸಾರಾ ಫಾತಿಮಾ ಹಾಗೂ ಇನ್ನಿತರ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.