ಬೆಂಗಳೂರು, ಆ.15- ನಿನ್ನೆಯವರೆಗೂ ಸ್ವತಂತ್ರ ಹಕ್ಕಿಯಾಗಿದ್ದ ಕೊಲೆ ಆರೋಪಿ ನಟ ದರ್ಶನ್, ಸ್ವಾತಂತ್ರ್ಯ ದಿನಾಚರಣೆಯಂದೇ ಸ್ವತಂತ್ರ ಕಳೆದುಕೊಂಡು ಜೈಲು ಹಕ್ಕಿಯಾಗಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದರ್ಶನ್, ಪವಿತ್ರಾಗೌಡ, ಪ್ರದ್ಯುಷ್, ನಾಗರಾಜು, ಲಕ್ಷ್ಮಣ್ ಅವರು ನಿನ್ನೆ ಸುಪ್ರೀಂಕೋರ್ಟ್ ಜಾಮೀನು ರದ್ದು ಪಡಿಸಿದ್ದ ಬಳಿಕ ಸಂಜೆಯ ವೇಳೆಗೆ ಜೈಲು ಪಾಲಾಗಿದ್ದರು.
ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಕಾನೂನಿನ ಮುಂದೆ ಎಲ್ಲರೂ ಒಂದೆ. ಜೈಲಿನಲ್ಲಿ ಯಾರಾದರೂ ವಿಶೇಷ ಸೌಲಭ್ಯ ಕೇಳಿದರೆ, ನಾವು ವಿಶೇಷ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಹೀಗಾಗಿ ರಾಜ್ಯದ ಪೊಲೀಸರು ತರಾತುರಿಯಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೆ ಕಲುಹಿಸಿದ್ದರು. ಜೈಲಿನಲ್ಲಿನ ಮೆನು ಪ್ರಕಾರವೇ ಮಾಡಲಾಗಿದ್ದ ಚಪಾತಿ ಹಾಗೂ ಅನ್ನಸಾಂಬಾರ್ನ್ನು ದರ್ಶನ್ ಹಾಗೂ ಸಹ ಆರೋಪಿಗಳು ಸೇವಿಸಿದ್ದಾರೆ. ಇಂದು ಬೆಳಗ್ಗೆ ಆರೋಪಿಗಳಿಗೆ ಉಪ್ಪಿಟ್ಟು ನೀಡಲಾಗಿದೆ. ದರ್ಶನ್ ಮತ್ತು ಗ್ಯಾಂಗ್ ಯಾವುದೇ ತಕರಾರು ಮಾಡದೆ ಜೈಲಿನ ಆಹಾರವನ್ನು ಸೇವಿಸಿರುವುದಾಗಿ ಹೇಳಲಾಗಿದೆ.
ಮಹಿಳಾ ಬ್ಯಾರಕ್ನಲ್ಲಿರುವ ಪವಿತ್ರಾಗೌಡ ಯಾವುದೇ ಆಹಾರ ಸೇವಿಸದೆ, ಯಾರೊಂದಿಗೂ ಮಾತನಾಡದೆ, ಅಂತರ್ಮುಖಿಯಾಗಿದ್ದರು. ನಿನ್ನೆ ಬಂಧನದ ವೇಳೆ ಯಾವುದೇ ಅಳುಕು ತೋರಿಸಿಕೊಳ್ಳದೇ ದಿಟ್ಟವಾಗಿ ಜೈಲಿಗೆ ಹೋದ ಪವಿತ್ರಾಗೌಡ ಸೆರೆಮನೆ ಸೇರುತ್ತಿದ್ದಂತೆ ಕಂಗಾಲಾಗಿದ್ದರು ಎಂದು ತಿಳಿದು ಬಂದಿದೆ.
ದರ್ಶನ್, ಪ್ರದ್ಯುಷ್, ನಾಗರಾಜು, ಲಕ್ಷ್ಮಣ್ ಅವರನ್ನು ಒಂದೇ ಬ್ಯಾರಕ್ನಲ್ಲಿಡಲಾಗಿದ್ದು, ಪ್ರದ್ಯುಷ್ ಯಾರೊಂದಿಗೂ ಮಾತನಾಡದೇ ಅಳುತ್ತಾ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ನಾಗರಾಜು, ಲಕ್ಷ್ಮಣ್ ಅವರೊಂದಿಗೆ ಮಾತನಾಡುತ್ತಾ ದರ್ಶನ್ ಸಹಜವಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಕೊಲೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದರ್ಶನ್ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರೌಡಿ ಶೀಟರ್ಗಳ ಜೊತೆ ಐಷರಾಮಿ ಸೌಲಭ್ಯಗಳನ್ನು ಅನುಭವಿಸಿದ್ದು, ವೈರಲ್ ಆಗಿತ್ತು. ಸುಪ್ರೀಂಕೋರ್ಟ್ ನಿನ್ನೆ ಜಾಮೀನು ರದ್ದು ಪಡಿಸುವಾಗ ಈ ಅಂಶವನ್ನು ಪರಿಗಣಿಸಿ ಯಾವುದೇ ವಿಶೇಷ ಸೌಲಭ್ಯಗಳನ್ನು ಒದಗಿಸುವಂತಿಲ್ಲ ಎಂದು ಸೂಚನೆ ನೀಡಿತ್ತು ಮತ್ತು ಈ ತೀರ್ಪನ್ನು ದೇಶದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಮತ್ತು ಬಂಧೀಖಾನೆ ಇಲಾಖೆಗೆ ರವಾನಿಸುವಂತೆ ಆದೇಶಿಸಿತ್ತು. ಹೀಗಾಗಿ ಸುಪ್ರೀಂಕೋರ್ಟಿನ ತೀರ್ಪು ಬೆಂಚ್ ಮಾರ್ಕ್ ಆಗಿದ್ದು, ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಬಿ. ದಯಾನಂದ್ ಸಭೆ:
ರೇಣುಕಾಸ್ವಾಮಿ ಕೊಲೆ ಪ್ರಕರಣ ತನಿಖೆ ಮತ್ತು ಆರೋಪಿಗಳ ಬಂಧನದ ವೇಳೆ ಹಿರಿಯ ಐಪಿಎಸ್ ಅಧಿಕಾರಿ ಬಿ. ದಯಾನಂದ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದರು. ಈಗ ಅವರು ಬಂಧೀಖಾನೆ ಹಾಗೂ ಸುಧಾರಣಾ ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ದರ್ಶನ್ ಜಾತಕಕ್ಕೆ ದಯಾನಂದ್ ಅವರು ಪದೇ ಪದೇ ಪ್ರವೇಶಿಸುತ್ತಿರುವುದು ಕಾಕತಾಳೀಯವಾಗಿದೆ. ಈ ಹಿಂದೆ ಜೈಲಿನಲ್ಲಿ ದರ್ಶನ್ಗೆ ವಿಶೇಷ ಸೌಲಭ್ಯ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಗ ಪೊಲೀಸ್ ಅಯುಕ್ತರಾಗಿದ್ದ ದಯಾನಂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಈಗ ಖುದ್ದು ಅವರೇ ಜೈಲಿನ ಉಸ್ತುವಾರಿ ಆಗಿರುವುದರಿಂದ ಹಿಂದಿನ ಲೋಪಗಳು ಪುನರಾವರ್ತನೆಯಾಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ಸುಪ್ರೀಂಕೋರ್ಟಿನ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಬಂಧೀಖಾನೆ ಇಲಾಖೆಯ ಅದರಲ್ಲೂ ಬೆಂಗಳೂರು ಕೇಂದ್ರ ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ದಯಾನಂದ್ ಸಭೆ ನಡೆಸಿದ್ದಾರೆ.
ಜೈಲಿನಲ್ಲಿರುವ ಖೈದಿಗಳ ಸಂದರ್ಶನಕ್ಕೆ ಆಗಮಿಸುವವರನ್ನು ತೀವ್ರ ತಪಾಸಣೆಗೊಳಪಡಿಸಬೇಕು. ಯಾವುದೇ ಅನಪೇಕ್ಷಿತ ಮತ್ತು ನಿಷೇಧಿತ ವಸ್ತುಗಳು ಜೈಲಿನ ಒಳಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.ಮನೆಯೂಟ ಸೇರಿದಂತೆ ಯಾವುದೇ ವಿಶೇಷ ಸೌಲಭ್ಯಗಳು ದರ್ಶನ್ ಮತ್ತು ಗ್ಯಾಂಗ್ಗೆ ಸಿಗಬಾರದು. ಸಾಮಾನ್ಯ ಖೈದಿಗಳಂತೆಯೇ ಪರಿಗಣಿಸಬೇಕು. ಜೈಲಿನಲ್ಲಿ ಮೊಬೈಲ್ ಇತರ ಸಂಪರ್ಕ ಸಾಧನಗಳ ಅಕ್ರಮ ಬಳಕೆ ಕಂಡು ಬಂದರೆ ಜೈಲಿನ ಅಧೀಕ್ಷಕರನ್ನೇ ಸುಪ್ರೀಂಕೋರ್ಟ್ ಸೂಚನೆಯಂತೆ ಹೊಣೆ ಮಾಡುವುದಾಗಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.