ಬೆಂಗಳೂರು,ಆ.15-ಟಾರ್ಪಾಲ್ ವಿಚಾರಕ್ಕೆ ಜಗಳ ಉಂಟಾಗಿ ಕೂಲಿ ಕಾರ್ಮಿಕರೊಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಇಂದು ಮುಂಜಾನೆ ಜೆಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ತಾಲ್ಲೂಕಿನ ನಿವಾಸಿ ಚಿಕ್ಕಣ್ಣ (60) ಕೊಲೆಯಾದ ಕೂಲಿ ಕಾರ್ಮಿಕ.ಇವರು ಬನಶಂಕರಿಯ ಸಾರಕ್ಕಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗುತ್ತಿದ್ದರು.
ರಾತ್ರಿ ಮಳೆ ಬಂದ ಪರಿಣಾಮ ಮಾರ್ಕೆಟ್ ಸಮೀಪದಲ್ಲಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ಹೋಗಿ ಅಲ್ಲಿದ್ದ ಟಾರ್ಪಾಲ್ ಅನ್ನು ತೆಗೆದುಕೊಂಡು ಹಾಸಿಕೊಂಡು ಮಲಗಿದ್ದಾರೆ. ನಂತರ ಅಲ್ಲಿಗೆ ಮುಂಜಾನೆ ಬಂದ ಚಿಂದಿ ಆಯುವ ವ್ಯಕ್ತಿಯೊಬ್ಬ ನಾನು ಹಾಸಿಕೊಂಡು ಮಲಗುವ ಟಾರ್ಪಾಲ್ ಅನ್ನು ನೀನು ಏಕೆ ತೆಗೆದುಕೊಂಡು ಮಲಗಿದ್ದೀಯ ಎಂದು ಜಗಳ ಮಾಡಿದ್ದಾನೆ.
ಜಗಳ ವಿಕೋಪಕ್ಕೆ ಹೋದಾಗ ಆರೋಪಿ ಕಟ್ಟಡದಲ್ಲಿದ್ದ ದೊಣ್ಣೆಯೊಂದನ್ನು ತೆಗೆದುಕೊಂಡು ತಲೆ ಹಾಗೂ ಇನ್ನಿತರ ಭಾಗಗಳ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಯಿಂದ ತೀವ್ರ ಗಾಯಗೊಂಡ ಚಿಕ್ಕಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ಜೆಪಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಶವವನ್ನು ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.