ಬೆಂಗಳೂರು,ಆ.16- ನಗರದ ನಗರ್ತಪೇಟೆಯ ನಾಲ್ಕು ಅಂತಸ್ತಿನ ಕಟ್ಟಡವೊಂದರಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐದು ಮಂದಿ ಸಜೀವ ದಹನವಾಗಿದ್ದಾರೆ.
ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ನಗರ್ತಪೇಟೆಯ ನಾಲ್ಕು ಹಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ನೆಲೆಸಿದ್ದ ರಾಜಸ್ಥಾನ ಮೂಲದ ಮದನ್‌ಕುಮಾರ್(38), ಪತ್ನಿ ಸಂಗೀತಾ(33), ಮಕ್ಕಳಾದ ಮಿತೇಶ್(8) ಮತ್ತು ವಿಹಾನ್(5) ಸಜೀವವಾಗಿ ಬೆಂಕಿಯಲ್ಲಿ ಬೆಂದು ಸುಟ್ಟು ಕರಕಲಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಅಲ್ಲದೇ, ಮತ್ತೊಂದು ಮಹಡಿಯಲ್ಲಿದ್ದ ಸುರೇಶ್(36) ಎಂಬುವವರು ಸಹ ಸಜೀವ ದಹನವಾಗಿದ್ದಾರೆ.
ಸಂದೀಪ್ ಮತ್ತು ಬಾಲಕೃಷ್ಣ ಎಂಬುವರ ಒಡೆತನದ 4 ಅಂತಸ್ತಿನ ಈ ಕಟ್ಟಡದಲ್ಲಿ ಇಂದು ಮುಂಜಾನೆ 3.30ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿದೆ.ನೆಲಮಹಡಿ ಸೇರಿದಂತೆ ಎರಡು ಮಹಡಿಯಲ್ಲಿ ಪ್ಲಾಸ್ಟಿಕ್ ಗೋದಾಮುಗಳಿವೆ. ಮೊದಲ ಮಹಡಿಯಲ್ಲಿದ್ದ ಮೂವರು ಕಾರ್ಮಿಕರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
3ನೇ ಮಹಡಿಯಲ್ಲಿ ಮದನ್ ಕುಟುಂಬ ವಾಸವಿದ್ದು, ಮುಂಜಾನೆ ಶಬ್ದ ಕೇಳಿ ಎಚ್ಚರಗೊಂಡು ಮನೆಯೊಳಗಿನಿಂದ ಮದನ್ ಕುಮಾರ್ ಹೊರಗೆ ಬಂದಾಗ ಕಟ್ಟಡದಲ್ಲಿ ದಟ್ಟ ಹೊಗೆ ನೋಡಿ ತಕ್ಷಣ ಮನೆಗೆ ಬೀಗ ಹಾಕಿ ಹೊರಗೆ ಬರುವಷ್ಟರಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕಿ ಮದನ್ ಮೃತಪಟ್ಟಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ವಾಹನಗಳೊಂದಿಗೆ ಬಂದು ಸತತ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮತ್ತೊಂದು ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು ಅವರ ಹೆಸರು ಸುರೇಶ್ ಎಂದು ಗುರುತಿಸಲಾಗಿದೆ.
ಸತತ 10 ಗಂಟೆಗೂ ಹೆಚ್ಚು ಕಾಲ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ತೊಡಗಿದರಾದರೂ ಇದುವರೆಗೂ ಬೆಂಕಿ ತಹಬದಿಗೆ ಬಂದಿರಲಿಲ್ಲ. ನೆಲಮಹಡಿಯಲ್ಲಿ ಪ್ಲಾಸ್ಟಿಕ್ ಫ್ಲೋರ್ ಮ್ಯಾಟ್ ತಯಾರಿಸುವ ಘಟಕವಿದೆ.
ಈ ಘಟಕದಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡು ಕಟ್ಟಡ ಪೂರ್ತಿ ಆವರಿಸಿಕೊಂಡಿದೆ ಎಂದು ತಿಳಿದುಬಂದಿದೆ. ಬಹುಶಃ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ಅಥವಾ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಕಾಣಿಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಕಟ್ಟಡ ಇಕ್ಕಟ್ಟಿನ ಜಾಗದಲ್ಲಿದೆ. ಹಾಗಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ದಟ್ಟ ಹೊಗೆಯಿಂದಾಗಿ ಆಕ್ಸಿಜನ್ ಕೊರತೆಯಾಗಿದೆ.
ಇಂದು ಮುಂಜಾನೆಯಿಂದ ಅಗ್ನಿಶಾಮಕ ಅಧಿಕಾರಿ ಹಾಗೂ ಸಿಬ್ಬಂದಿ ತಮ ಪ್ರಾಣವನ್ನೂ ಲೆಕ್ಕಿಸದೇ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.
ನಿನ್ನೆ ಆಡುಗೋಡಿಯ ಚಿನ್ನಯ್ಯನಪಾಳ್ಯದ ಶ್ರೀರಾಮ ಕಾಲೋನಿಯ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ ಅದೇ ಮಾದರಿಯಲ್ಲಿ ಇಂದು ಮತ್ತೊಂದು ಬೆಂಕಿ ಅವಘಡ ಸಂಭವಿಸಿ ಐದು ಮಂದಿ ಸಜೀವ ದಹನವಾಗಿರುವುದು ವಿಷಾದಕರ ಸಂಗತಿ.
- “ಸಿದ್ದರಾಮಯ್ಯನವರೇ, ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್ ನೆರಳಿನಲ್ಲಿ ನಿಂತು RSS ಕುರಿತು ಮಾತನಾಡುವ ಅರ್ಹತೆ ನಿಮಗಿಲ್ಲ”
- ವಿಶ್ವದ ಅತ್ಯಂತ ದುಬಾರಿ ನಿಸಾರ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಜೋಡಿಸುವಲ್ಲಿ ಇಸ್ರೋ -ನಾಸಾ ಯಶಸ್ವಿ
- ಭಾರತ- ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ : ಮತೊಮ್ಮೆ ಕನವರಿಸಿದ ಟ್ರಂಪ್
- ಶ್ರೀ ಕ್ಷೇತ್ರದ ಕುರಿತು ಅಪಪ್ರಚಾರ ಖಂಡಿಸಿ ಬಿಜೆಪಿಯಿಂದ ‘ಧರ್ಮಸ್ಥಳ ಚಲೋ’ ಅಭಿಯಾನ
- ಧರ್ಮಸ್ಥಳ ಅನಾಮಿಕನ ಪ್ರಕರಣ : ಎಸ್ಐಟಿಯಿಂದ ಮಧ್ಯಂತರ ವರದಿ