Sunday, August 17, 2025
Homeರಾಜಕೀಯ | Politicsಆರ್‌ಎಸ್‌‍ಎಸ್‌‍ನ್ನು ತಾಲಿಬಾನಿಗೆ ಹೋಲಿಸಿದ ಕಾಂಗ್ರೆಸ್‌‍ ವಿರುದ್ಧ ಬೊಮ್ಮಾಯಿ ಆಕ್ರೋಶ

ಆರ್‌ಎಸ್‌‍ಎಸ್‌‍ನ್ನು ತಾಲಿಬಾನಿಗೆ ಹೋಲಿಸಿದ ಕಾಂಗ್ರೆಸ್‌‍ ವಿರುದ್ಧ ಬೊಮ್ಮಾಯಿ ಆಕ್ರೋಶ

Bommai's anger against Congress for comparing RSS to Taliban

ಹುಬ್ಬಳ್ಳಿ,ಆ.17- ಆರ್‌ಎಸ್‌‍ಎಸ್‌‍ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌‍ಗೆ ನಾಚಿಕೆಯಾಗಬೇಕು. ಕಾಂಗ್ರೆಸ್‌‍ನವರು ಅಂದು ಟಿಪ್ಪುವನ್ನು ಹೀರೋ ಮಾಡಿದ್ದರು. ಈಗ ಎಸ್‌‍ಡಿಪಿಐ ಜೊತೆಗೆ ಸೇರಿ ರಾಜಕೀಯ ಮಾಡುತ್ತಿರುವುದನ್ನು ನೋಡಿದಾಗ ನಿಜವಾದ ತಾಲಿಬಾನಿಗಳ ಜೊತೆಗೆ ಕಾಂಗ್ರೆಸ್‌‍ ಗೆಳತನ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆರ್‌ಎಸ್‌‍ಎಸ್‌‍ಗೆ ನೂರು ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಆಗಸ್ಟ್‌ 15 ರಂದು ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿಯವರು ಅಭಿನಂದನಾರ್ಹ ಭಾಷಣ ಮಾಡಿರುವುದಕ್ಕೆ ಕಾಂಗ್ರೆಸ್‌‍ ತೀವ್ರವಾಗಿ ವಿರೋಧ ಮಾಡುತ್ತಿದ್ದು ಕಾಂಗ್ರೆಸ್‌‍ಗೆ ಇರಿಸು ಮುರುಸಾಗಿದೆ.

ಸ್ವಾತಂತ್ರ್ಯ ಹೋರಾಟದ ಸಂಪೂರ್ಣ ಲಾಭವನ್ನು ಕಾಂಗ್ರೆಸ್‌‍ ಪಡೆಯಲು ಪ್ರಯತ್ನಿಸುತ್ತಿದೆ. ಆದರೆ, ಸ್ವಾತಂತ್ರ್ಯಕ್ಕಾಗಿ ನಿಜವಾದ ಹೋರಾಟ ಮಾಡಿದವರು ಅನಾಮಧೇಯರಾಗಿದ್ದಾರೆ. ಹಲವಾರು ಸ್ವಾತಂತ್ರ್ಯ ಸೇನಾನಿಗಳು ತಮ್ಮ ಪಾಣ ತ್ಯಾಗ ಮಾಡಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ರೈತರು, ಕೂಲಿಕಾರರು, ಎಲ್ಲ ವರ್ಗದ ಜನರು ಒಗ್ಗಟ್ಟಾಗಿ ಸ್ವಾತಂತ್ರಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಅದರ ಶ್ರೇಯವನ್ನು ಕಾಂಗ್ರೆಸ್‌‍ನವರು ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್‌‍ ನವರು ಸ್ವಾತಂತ್ರ್ಯ ಹೋರಾಟದ ಫಲಾನುಭವಿಗಳು ಎಂದು ಆರೋಪಿಸಿದ್ದಾರೆ.

ಮಹಾತ ಗಾಂಧೀಜಿಯವರು ಸ್ವಾತಂತ್ರ್ಯ ನಂತರ ಕಾಂಗ್ರೆಸ್‌‍ ಅನ್ನು ವಿಸರ್ಜನೆ ಮಾಡಿ ಎಂದು ಹೇಳಿದರೂ ಕೂಡ ಕಾಂಗ್ರೆಸ್‌‍ನವರು ತಮ ಸ್ವಾರ್ಥಕ್ಕೆ, ಅಧಿಕಾರದ ದಾಹಕ್ಕೆ ಅದನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಎಪ್ಪತ್ತೆಂಟು ವರ್ಷದಲ್ಲಿ ಅವರು ಮಾಡಿರುವಂತಹ ಆಡಳಿತ ಈ ದೇಶವನ್ನು ಅತ್ಯಂತ ಹಿನ್ನಡೆಗೆ ತಂದಿದೆ. ಇವತ್ತು ಕಾಂಗ್ರೆಸ್‌‍ ನಾಯಕರ ದೇಶ ವಿರೋಧಿ ಹೇಳಿಕೆಗಳನ್ನು ನೋಡಿದಾಗ ಇವರು ಸ್ವಾತಂತ್ರ್ಯ ಹೋರಾಟಗಾರರ ಪಕ್ಷಕ್ಕೆ ಸೇರಿದ್ದಾರಾ ಎನ್ನುವ ಸಂಶಯ ಮೂಡುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್‌ಎಸ್‌‍ಎಸ್‌‍ ವಿರುದ್ಧ ಹೇಳಿಕೆ ಕೊಡುತ್ತಿದ್ದು, ರಾಹುಲ್‌ ಗಾಂಧಿಗೆ ಸಂದೇಶ ಕೊಡಲು ಪ್ರಯತ್ನ ಮಾಡುತ್ತಿದ್ದಾರೆ. ಏಕೆಂದರೆ ಅವರು ಮೂಲ ಕಾಂಗ್ರೆಸಿಗರು ಅಲ್ಲ. ಆರ್‌ಎಸ್‌‍ಎಸ್‌‍ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ನಾವೆಲ್ಲ ಒಂದಾಗಿ ಕೆಲಸ ಮಾಡುವ ಅವಶ್ಯಕತೆ ಇದೆ. ಆ ಕೆಲಸವನ್ನು ಮಾಡೋಣ ಎಂದು ಎಲ್ಲ ಭಾರತೀಯರಿಗೆ ವಿನಂತಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

RELATED ARTICLES

Latest News