ಮಂಗಳೂರು,ಆ.17- ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಸಿಡಿದೆದ್ದಿರುವ ಪ್ರತಿಪಕ್ಷ ಬಿಜೆಪಿ ಇಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗವು ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ದರ್ಶನ ಪಡೆದು ನಿಮೊಂದಿಗೆ ನಾವಿದ್ದೇವೆ ಎಂಬ ನೈತಿಕ ಬೆಂಬಲ ನೀಡಿದೆ.
ಬೆಳಿಗ್ಗೆಯೇ ಧರ್ಮಸ್ಥಳಕ್ಕೆ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಶಾಸಕರಾದ ಸಿ.ಟಿ.ರವಿ, ಎಸ್.ಆರ್ ವಿಶ್ವನಾಥ್, ಚನ್ನಬಸಪ್ಪ, ವೇದವ್ಯಾಸ ಕಾಮತ್, ಸಂಸದ ಬ್ರಿಜೇಶ್ ಚೌಟ, ಗುರುರಾಜ್ ಗಂಟಹೊಳೆ, ಪ್ರತಾಪ್ ಸಿಂಹ ನಾಯಕ್, ಹರೀಶ್ ಪೂಂಜಾ, ಕಿರಣ್ ಕುಮಾರ್ ಕೊಡ್ಗಿ, ಯಶ್ ಪಾಲ್ ಸುವರ್ಣ, ಧನಂಜಯ ಸರ್ಜಿ, ಸೇರಿದಂತೆ ಅನೇಕ ಬಿಜೆಪಿ ನಾಯಕರು ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದರು.
ಶ್ರೀಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಂದ ಆಶೀರ್ವಾದ ಪಡೆದ ಮುಖಂಡರು, ನೀವು ಈ ಅಪಪ್ರಚಾರದಿಂದ ಕುಗ್ಗಬೇಡಿ. ಧರ್ಮಸ್ಥಳದ ಪರವಾಗಿ ನಾವಿದ್ದೇವೆ ಎಂದು ಬೆಂಬಲ ಸೂಚಿಸಿದರು.
ಧರ್ಮಸ್ಥಳದ ವಿರುದ್ಧ ವ್ಯವಸ್ಥಿತವಾದ ಷಡ್ಯಂತ್ರ ನಡೆಯುತ್ತಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದ್ದು, ಕ್ಷೇತ್ರದ ಮೇಲೆ ಕೆಲವು ಬಾಹ್ಯಶಕ್ತಿಗಳು ವ್ಯವಸ್ಥಿತ ಪಿತೂರಿ ನಡೆಸಿವೆ. ಸರ್ಕಾರವು ಇದರಲ್ಲಿ ಕೈಜೋಡಿಸಿದೆ ಎಂದು ಹೆಗ್ಗಡೆಯವರೊಂದಿಗೆ ಮಾತುಕತೆ ವೇಳೆ ಬಿಜೆಪಿ ಪ್ರಮುಖರು ಆರೋಪಿಸಿದರು.
ನಾವು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದೇವೆ. ಕ್ಷೇತ್ರದ ಮೇಲೆ ಮೂಡಿದ್ದ ಅನುಮಾನ ನಿವಾರಣೆಯಾಗಿ ಭಕ್ತರ ಸಂಶಯವು ಕೊನೆಗಾಣಬೇಕು ಎಂಬುದು ನಮ ಆಶಯವಾಗಿತ್ತು. 2 ವಾರ ಕಳೆದರೂ ಇಲ್ಲಿ ಒಂದೇ ಒಂದು ಶವವೂ ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದು ಷಡ್ಯಂತ್ರದ ಮುಂದುವರೆದ ಭಾಗ ಎಂದು ಧರ್ಮಾಧಿಕಾರಿಗಳಿಗೆ ನಿಯೋಗ ವರದಿ ಮಾಡಿತು.
ಮಧ್ಯಂತರ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ನಾವು ಒತ್ತಾಯ ಮಾಡಿದ್ದೇವೆ. ಆದರೆ ಸರ್ಕಾರ ತನಿಖೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಬೂಬು ಹೇಳುತ್ತಿದೆ. ವರದಿಯನ್ನು ಮಂಡನೆ ಮಾಡುವ ನಿಟ್ಟಿನಲ್ಲಿ ಸದನದಲ್ಲಿ ಹೋರಾಟ ಮಾಡುತ್ತೇವೆ. ಏನೇ ಆದರೂ ಶ್ರೀ ಕ್ಷೇತ್ರದ ಮೇಲೆ ಅಪಪ್ರಚಾರ ನಡೆಯಲು ಬಿಡುವುದಿಲ್ಲ ಎಂದು ವಾಗ್ದಾನ ಮಾಡಿದ್ದಾರೆ.
ಅನಾಮಿಕನ ಮಾತಿನಲ್ಲಿ ಕ್ಷೇತ್ರದೆಲ್ಲೆಡೆ ಅಗೆಯುವ ಕೆಲಸ ನಡೆಯುತ್ತಿದೆ. ಈ ಹಿಂದೆ ಅನೇಕ ಪ್ರಕರಣಗಳಲ್ಲಿ ದೂರುಗಳು ಬಂದಾಗ ಸರ್ಕಾರ ಇದೇ ರೀತಿ ಎಸ್‌ಐಟಿ ರಚನೆ ಮಾಡಿತ್ತು. ಈ ಅನಾಮಿಕ ಯಾರು?, ಅವನ ಹಿಂದಿರುವ ಶಕ್ತಿಗಳು ಯಾವುದು? ಎಂಬುದು ಗೊತ್ತಾಗಬೇಕು.
ಅನಾಮಿಕನು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ಘಟನೆಯಿಂದಾಗಿ ಕ್ಷೇತ್ರಕ್ಕೆ ಯಾವುದೇ ರೀತಿಯ ಕಳಂಕ ಬಂದಿಲ್ಲ. ನಮಂತಹ ಲಕ್ಷಾಂತರ ಭಕ್ತರು ಮಂಜುನಾಥನ ಮೇಲೆ ಅದೇ ಸದಭಿಪ್ರಾಯವನ್ನು ಈಗಲೂ ಇಟ್ಟುಕೊಂಡಿದ್ದಾರೆ. ಘಟನೆಯಿಂದಾಗಿ ಧೃತಿಗೆಡಬಾರದು ಎಂದು ನಿಯೋಗವು ಧರ್ಮಾಧಿಕಾರಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿದೆ.