ಬೆಂಗಳೂರು, ಆ.17- ಸುರಕ್ಷಿತ ನಿಯಮಗಳನ್ನು ಪಾಲಿಸದೇ ಅಕ್ರಮವಾಗಿ ನಿರ್ಮಾಣಮಾಡಿರುವ ಕಟ್ಟಡಗಳನ್ನು ದುರಸ್ಥಿ ಮಾಡಿಕೊಳ್ಳಬೇಕು. ಇಲ್ಲವಾದರೆ ಮುಲಾಜಿಲ್ಲದೆ ಒಡೆದು ಹಾಕುತ್ತೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ನಗರ್ತಪೇಟೆಯಲ್ಲಿ ನಿನ್ನ ಅಗ್ನಿ ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಶೇ. 70 ರಷ್ಟು ಕಟ್ಟಡಗಳ ನಿರ್ಮಾಣ ಅಕ್ರಮವಾಗಿದೆ. ಹಳೆಯ ಬಡಾವಣೆಗಳಷ್ಟೇ ಅಲ್ಲ, ಹೊಸ ಬಿಡಿಎ ಬಡಾವಣೆಗಳಲ್ಲೂ ಒಂದು ಮತ್ತು ನಾಲ್ಕು ಮಹಡಿಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸ್ವಾಧೀನ ಪತ್ರ ಇಲ್ಲದೆ ಇರುವವರಿಗೆ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಅದರ ಪ್ರಕಾರ 4 ಲಕ್ಷ ಸಂಪರ್ಕಗಳನ್ನು ಸ್ಥಗಿತಗೊಳಿಸಲಾಗಿದೆ. 30-40 ಅಡಿ ವಿಸ್ತೀರ್ಣದ ನಿವೇಶನದಲ್ಲಿ ಎರಡು ಮಹಡಿಗಳ ನಿರ್ಮಾಣಕ್ಕೆ ವಿನಾಯಿತಿ ನೀಡಬೇಕೆಂಬ ಚಿಂತನೆ ಇದೆ. ಸಚಿವ ಸಂಪುಟದಲ್ಲಿ ಇತರ ಸಚಿವರು, ಯಾವ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ ಎಂಬುದನ್ನು ಗಮನಿಸಿ, ನಂತರ ನಾನು ಮತ್ತು ಮುಖ್ಯಮಂತ್ರಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.