ಹುಬ್ಬಳ್ಳಿ,ಆ.17- ಮೊದಲಿನಿಂದಲೂ ಧಾರ್ಮಿಕ ಕ್ಷೇತ್ರಗಳ ವಿಚಾರದಲ್ಲಿ ಕಾಂಗ್ರೆಸ್‌ನವರು ರಾಜಕೀಯ ಯಾತ್ರೆ ಮಾಡುತ್ತಲೇ ಬಂದಿದ್ದಾರೆ ಎಂದು ವಿಧಾನಸಭಾ ವಿರೋಧ ಪಕ್ಷದ ಉಪವನಾಯಕ ಅರವಿಂದ ಬೆಲ್ಲದ ಆರೋಪಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಯಾತ್ರೆ ಬಿಜೆಪಿ ರಾಜಕಾರಣ ಯಾತ್ರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಹಿಂದು ಧಾರ್ಮಿಕ ಸಂಸ್ಥೆಗಳ ಮೇಲೆ ಷಡ್ಯಂತ್ರ ನಡೆದಿದೆ. ಇದನ್ನು ಕಾಂಗ್ರೆಸ್‌ನವರೇ ಸ್ವತಃ ಒಪ್ಪಿದ್ದಾರೆ. ಷಡ್ಯಂತ್ರ ನಡೆದಿದೆ ಎಂದು ಉಪಮುಖ್ಯಮಂತ್ರಿಗಳೇ ಹೇಳಿಕೆ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.
ಷಡ್ಯಂತ್ರ ನೋಡಿಕೊಂಡು ನಾವು ಸುಮನೆ ಕುಳಿತುಕೊಳ್ಳಲು ಆಗುವುದಿಲ್ಲ. ಷಡ್ಯಂತ್ರ ಬಹಿರಂಗವಾಗಬೇಕು ಇದೊಂದು ಧಾರ್ಮಿಕ ಕೇಂದ್ರ ಮೇಲೆ ನಡೆದ ಗದಪ್ರಹಾರ ಆದ್ದರಿಂದೆ. ನಾವು ಮಾಡುವ ಹೋರಾಟ ಯಾವುದೇ ರೀತಿಯ ರಾಜಕೀಯ ಅಲ್ಲ ಎಂದರು.
ಬಿಜೆಪಿ ಅವರು ಹಿಂದುತ್ವ ತಮ ಮನೆ ಆಸ್ತಿಯೆಂದು ಭಾವಿಸಿದ್ದಾರೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬೆಲ್ಲದ್, ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಹಿಂದೆ ಹೋದರೆ ಏನು ಅರ್ಥ? ಹೌದು ಹಿಂದುತ್ವ ನಮ ಆಸ್ತಿ ಇದರಲ್ಲಿ ಏನು ತಪ್ಪು ಎಂದು ಸಮರ್ಥಿಸಿಕೊಂಡರು. ಆರ್‌ಎಸ್‌ಎಸ್ ಭಾರತೀಯ ತಾಲಿಬಾನ್‌ಗಳು ಹೇಳಿಕೆ ವಿಚಾರವಾಗಿ ಸಹ ಖಾರವಾಗಿ ಮಾತನಾಡಿದ ಅವರು, ಬಿ ಕೆ ಹರಿಪ್ರಸಾದ್ ಬಗ್ಗೆ ಹೆಚ್ಚು ಮಾತನಾಡುವ ಅಗತ್ಯ ಇಲ್ಲ. ಹರಿಪ್ರಸಾದ್ ಏನು ಎಂದು ಗೊತ್ತು. ಅವರ ಹೇಳಿಕೆಗೆ ಮಹತ್ವ ಕೊಡುವುದು ಬೇಡ ಎಂದರು.