ಬೆಂಗಳೂರು,ಆ.17- ನಗರ್ತಪೇಟೆಯಲ್ಲಿನ ಕಟ್ಟಡವೊಂದರಲ್ಲಿ ನಿನ್ನೆ ಸಂಭವಿಸಿದ ಬೆಂಕಿ ದುರಂತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಾಲಕೃಷ್ಣ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ಬಂಧಿತ ಕಟ್ಟಡದ ಮಾಲೀಕರು.
ಕಟ್ಟಡದಲ್ಲಿ ಅಗ್ನಿ ಅವಘಡ ತಪ್ಪಿ ಸಲು ಸಾಮಾನ್ಯ ಸುರಕ್ಷತೆಯ ವ್ಯವಸ್ಥೆಯನ್ನು
ಸಹ ಕಲ್ಪಿಸದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ನಿನ್ನೆ ಮುಂಜಾನೆ ನಗರ್ತಪೇಟೆಯಲ್ಲಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಸಜೀವದಹನವಾಗಿದ್ದಾರೆ.
ಮದನ್‌ಕುಮಾರ್(38), ಅವರ ಪತ್ನಿ ಸಂಗೀತ(33), ಮಕ್ಕಳಾದ ನಿತೇಶ್(8), ವಿಕಾಸ್(5) ಹಾಗೂ ಪಕ್ಕದ ಮಹಡಿಯ ಸುರೇಶ್ ಬೆಂಕಿ ಅವಘಡದಲ್ಲಿ ಮೃತಪಟ್ಟವರು. ಈ ಕಟ್ಟಡದಲ್ಲಿ ನಿನ್ನೆ ಮುಂಜಾನೆ 3.30ರ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕ ದಳದ 120 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿ 15 ಗಂಟೆಗೂ ಹೆಚ್ಚು ಕಾಲ ಹೋರಾಡಿ ಬೆಂಕಿಯನ್ನು ನಂದಿಸಿದರು.
ಮೊದಲು ಎರಡು ಶವಗಳನ್ನು ಹೊರತೆಗೆದ ಸಿಬ್ಬಂದಿ ಮಧ್ಯಾಹ್ನದ ನಂತರ ಕಟ್ಟಡದ 3ನೇ ಮಹಡಿಗೆ ತೆರಳಿ ಮನೆಯೊಂದರಲ್ಲಿ ಸಿಲುಕಿ ಮೃತಪಟ್ಟಿದ್ದ ತಾಯಿ ಮತ್ತು ಇಬ್ಬರು ಮಕ್ಕಳ ಶವನ್ನು ಹೊರತೆಗೆದಿದ್ದಾರೆ.
ಬೆಂಕಿ ಕಾಣಿಸಿಕೊಂಡ ಕಟ್ಟಡ ಇಕ್ಕಟ್ಟಿನ ಪ್ರದೇಶವಾಗಿದ್ದರಿಂದ ಮತ್ತು ಪ್ಲಾಸ್ಟಿಕ್ ಗೋದಾಮು ಇದ್ದುದ್ದರಿಂದ ದಟ್ಟ ಹೊಗೆ ಕಾಣಿಸಿಕೊಂಡು ಬೆಂಕಿ ನಂದಿಸಲು ಹೆಚ್ಚು ಸಮಯ ಬೇಕಾಯಿತು.
ಘಟನೆ ಬಗ್ಗೆ ಹಲಸೂರುಗೇಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
4 ಅಂತಸ್ತಿನ ಕಟ್ಟಡದ ಬೆಂಕಿ ಅನಾಹುತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ
ನಿನ್ನೆ ಮುಂಜಾನೆ ನಗರ್ತ ಪೇಟೆಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿಗೆ ಇನ್ನೂ ನಿಖರವಾದ ಕಾರಣ ತಿಳಿದುಬಂದಿಲ್ಲ.ಮೇಲ್ನೋಟಕ್ಕೆ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್‌ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಇಂದೂ ಸಹ ಎಫ್‌ಎಸ್‌ಎಲ್ ತಂಡ ಹಾಗೂ ಎಲೆಕ್ಟ್ರೋ ಇಂಜಿನಿಯರ್‌ಗಳ ತಂಡ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತಿವೆ.
ಈ ತಂಡಗಳು ವರದಿ ನೀಡಿದ ನಂತರವೇ ಕಟ್ಟಡದಲ್ಲಿ ಸಂಭವಿಸಿದ ಬೆಂಕಿ ದುರಂತಕ್ಕೆ ನಿಖರ ಕಾರಣ ತಿಳಿದುಬರಲಿದೆ.ನಿನ್ನೆ ಮುಂಜಾನೆ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಸುಮಾರು 14 ಮಂದಿ ತಪ್ಪಿಸಿಕೊಂಡು ಬಂದಿದ್ದಾರೆ. ಅವರಿಂದಲೂ ಸಹ ಹಲಸೂರು ಗೇಟ್ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.ಘಟನೆ ಸಂಬಂಧ ಕಟ್ಟಡದ ಮಾಲೀಕರಾದ ಸಹೋದರರನ್ನು ಪೊಲೀಸರು ಈಗಾಗಲೇ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.