ಬುನೇರ್(ಪಾಕಿಸ್ಥಾನ), ಆ.17- ವಾಯವ್ಯ ಪಾಕಿಸ್ತಾನದ ಬುನೇರ್ ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹಕ್ಕೆ ಕನಿಷ್ಠಪಕ್ಷ 220 ಜನರು ಬಲಿಯಾಗಿದ್ದಾರೆ.ರಕ್ಷಣಾ ಕಾರ್ಯಕರ್ತರು ತೀವ್ರ ಪ್ರವಾಹ ಮತ್ತು ಭೂಕುಸಿತದಿಂದ ಉಧ್ವಸ್ತವಾದ ಮನೆಗಳ ಅವಶೇಷಗಳಿಂದ ಕಳೆದ ರಾತ್ರಿ, ಮತ್ತೆ 63 ಶವಗಳನ್ನು ಹೊರ ತೆಗೆದಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬುನೇರ್ ಪ್ರವಾಹದಿಂದ ಬದುಕಿ ಬಂದ ಪ್ರತ್ಯಕ್ಷದರ್ಶಿಯ ಪ್ರಕಾರ ಉಕ್ಕೇರಿದ ಪ್ರವಾಹದ ಹರಿವು ನೂರಾರು ಬಂಡೆಗಳನ್ನು ಮತ್ತು ಟನ್‌ಗಟ್ಟಲೆ ಕೆಸರನ್ನು ಹೊತ್ತು ತಂದಿತು.
ಶುಕ್ರವಾರ ಮೇಘಸ್ಫೋಟ ಮತ್ತು ಪ್ರವಾಹದಿಂದ ಧ್ವಂಸವಾದ ಖೈಬರ್ ಪಖ್ತೂಂಖ್ವಾ ಪ್ರಾಂತ್ಯದ ಭಾಗಗಳಲ್ಲಿ ಒಂದಾದ ಬುನೇರ್‌ನಲ್ಲಿ ನೂರಾರು ರಕ್ಷಣಾ ಕಾರ್ಯಕರ್ತರು ಇನ್ನೂ ಬದುಕುಳಿದಿರುವವರಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತುರ್ತು ಸೇವೆಗಳ ವಕ್ತಾರ ಮೊಹಮದ್ ಸುಹೈಲ್ ತಿಳಿಸಿದ್ದಾರೆ. ಹತ್ತಾರು ಮನೆಗಳು ಕೊಚ್ಚಿಹೋಗಿವೆ.