Monday, August 18, 2025
Homeರಾಜ್ಯತುಮಕೂರು-ಬೆಂಗಳೂರು ನಡುವಿನ 4 ರೈಲು ಮಾರ್ಗ ನಿರ್ಮಿಸಲು ಯೋಜನೆ : ವಿ.ಸೋಮಣ್ಣ

ತುಮಕೂರು-ಬೆಂಗಳೂರು ನಡುವಿನ 4 ರೈಲು ಮಾರ್ಗ ನಿರ್ಮಿಸಲು ಯೋಜನೆ : ವಿ.ಸೋಮಣ್ಣ

Plan to build 4 rail lines between Tumkur-Bengaluru: V. Somanna

ತುಮಕೂರು,ಆ.18- ಭವಿಷ್ಯದ ದೃಷ್ಟಿಯಿಂದ ತುಮಕೂರು- ಬೆಂಗಳೂರು ನಡುವೆ ನಾಲ್ಕು ರೈಲು ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಹೆಚ್ಚುವರಿ ರೈಲುಗಳ ಸೇವೆ ಒದಗಿಸಲಾಗುತ್ತಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಜಿಲ್ಲಾ ರೈಲ್ವೇ ಪ್ರಯಾಣಿಕರ ವೇದಿಕೆ ನಗರದ ರೈಲ್ವೆ ನಿಲ್ದಾಣದಲ್ಲಿ ಹಮಿಕೊಂಡಿದ್ದ ವೇದಿಕೆಯ 11ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರುನಗರ ಹಾಗೂ ಸುತ್ತಮುತ್ತಲ ಪ್ರದೇಶ ರೈಲು ಅವಲಂಬನೆ ಹೆಚ್ಚುವ ಹಿನ್ನಲೆಯಲ್ಲಿ ತುಮಕೂರು- ಬೆಂಗಳೂರು ನಡುವೆ ನಾಲ್ಕು ರೈಲು ಮಾರ್ಗ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ನಗರದ ಹೊರವಲಯದ ತಿಮರಾಜನಹಳ್ಳಿ ಬಳಿ ರೈಲ್ವೆ ಇಲಾಖೆಯಿಂದ ಬೃಹತ್‌ ಗೋದಾಮು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದಕ್ಕಾಗಿ ಸುಮಾರು 200 ಎಕರೆ ಜಾಗದ ಅವಶ್ಯಕತೆಯಿದೆ. ಈ ಬಗ್ಗೆ ಕೆಎಐಡಿಬಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚೆ ಮಾಡಿರುವುದಾಗಿ ಹೇಳಿದರು.

18 ವರ್ಷಗಳಿಂದ ಬಾಕಿ ಉಳಿದಿದ್ದ ತುಮಕೂರು-ದಾವಣಗೆರೆ ರೈಲು ಮಾರ್ಗ ಯೋಜನೆ ಕಾಮಗಾರಿಗೆ ವೇಗ ಸಿಕ್ಕಿದೆ. ಸುಮಾರು ಎರಡೂವರೆ ಸಾವಿರ ಎಕರೆ ಭೂಮಿ ಸ್ವಾಧೀನ ಪ್ರಕ್ರಿಯೆ ಮುಗಿಯುತ್ತಿದೆ ಎಂದು ತಿಳಿಸಿದರು. ಈಗ ತುಮಕೂರು ನಿಲ್ದಾಣದಲ್ಲಿ ಎರಡು ವಂದೇ ಭಾರತ್‌ ರೈಲುಗಳ ನಿಲುಗಡೆ ಮಾಡಲಾಗಿದೆ. ಇನ್ನುಮುಂದೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಯಾಣಿಕರ ವೇದಿಕೆ ಅಧ್ಯಕ್ಷ ಕರಣಂ ರಮೇಶ್‌ ಅವರು, ತುಮಕೂರು-ಬೆಂಗಳೂರು ಮಾರ್ಗದಲ್ಲಿ ಹೆಚ್ಚಿನ ರೈಲು ಸೇವೆ ಒದಗಿಸಬೇಕು. ತುಮಕೂರಿನಿಂದ ಹೊರಡುವ ಮೆಮೊ ರೈಲು ಯಶವಂತಪುರದವರೆಗೆ ಇದೆ. ಅದನ್ನು ಸಂಗೊಳ್ಳಿ ರಾಯಣ್ಣ ನಿಲ್ದಾಣದವರೆಗೂ ವಿಸ್ತರಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ತುಮಕೂರಿನಿಂದ ಹೋಗಿಬರುವ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ರೈಲು ಸೇವೆ ಒದಗಿಸಬೇಕು ಎಂದು ಸಚಿವರನ್ನು ಕೋರಿದರು.

ಇದಕ್ಕೂ ಮುನ್ನ ಸಚಿವರು ಪ್ರಯಾಣಿಕರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಇದೇ ವೇಳೆ ಕೈಗಾರಿಕೋದ್ಯಮಿ ಹೆಚ್‌.ಜಿ.ಚಂದ್ರಶೇಖರ್‌ ಅವರನ್ನು ಸನಾನಿಸಿ ಗೌರವಿಸಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್‌, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೈ.ಹೆಚ್‌.ಹುಚ್ಚಯ್ಯ, ಬಿಜೆಪಿ ಮುಖಂಡ ಎಸ್‌‍.ಶಿವಪ್ರಸಾದ್‌, ವೇದಿಕೆಯ ಕಾರ್ಯದರ್ಶಿ ನಾಗರಾಜು, ಖಜಾಂಚಿ ಆರ್‌.ಬಾಲಾಜಿ ಮೊದಲಾದವರು ಭಾಗವಹಿಸಿದ್ದರು.

RELATED ARTICLES

Latest News