Monday, August 18, 2025
Homeರಾಜ್ಯಅಧಿಕಾರಿಗಳ ತಪ್ಪಿನಿಂದ ತಿರಸ್ಕೃತವಾದ ಬಗರ್‌ಹುಕುಂ ಅರ್ಜಿ ಪರಿಶೀಲನೆ : ಸಚಿವ ಕೃಷ್ಣಭೈರೇಗೌಡ

ಅಧಿಕಾರಿಗಳ ತಪ್ಪಿನಿಂದ ತಿರಸ್ಕೃತವಾದ ಬಗರ್‌ಹುಕುಂ ಅರ್ಜಿ ಪರಿಶೀಲನೆ : ಸಚಿವ ಕೃಷ್ಣಭೈರೇಗೌಡ

Bagarhukum application review: Minister Krishna Bhairegowda

ಬೆಂಗಳೂರು,ಆ.18- ಅಧಿಕಾರಿಗಳ ತಪ್ಪಿನಿಂದ ಬಗರ್‌ಹುಕುಂ ಸಾಗುವಳಿ ಅರ್ಜಿಗಳು ತಿರಸ್ಕೃತವಾಗಿದ್ದರೆ ಸರಿಪಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌‍ ಶಾಸಕ ಎಂ.ಟಿ.ಕೃಷ್ಣಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನನ್ನು ಯಥಾ ರೀತಿ ಪಾಲನೆ ಮಾಡುತ್ತಿದ್ದೇವೆ. 108 ಸಿಸಿಯಲ್ಲಿ ಅರ್ಜಿಗಳನ್ನು ರದ್ದು ಮಾಡುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಬಗರ್‌ಹುಕುಂ ಸಾಗುವಳಿ ಜಮೀನಿನಲ್ಲಿ ಮನೆ ಇದ್ದರೂ ಈ ಬಗ್ಗೆ ಕಾನೂನು ಪರಿಶೀಲಿಸಿ ಸ್ಪಷ್ಟೀಕರಣ ಮಾಡಲಾಗುವುದು ಎಂದರು.

ರಾಜ್ಯದಲ್ಲಿ 42,289 ಅರ್ಜಿದಾರರಿಗೆ 18 ವರ್ಷ ತುಂಬಿಲ್ಲ. 5 ಎಕರೆಗಿಂತ ಜಮೀನಿರುವ 7 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಸಿದ್ದಾರೆ. ರಸ್ತೆ, ಗುಂಡುತೋಪುಗಳಿಗೆ ಸಂಬಂಧಿಸಿದಂತೆ 33,637 ಅರ್ಜಿಗಳು, ಅರಣ್ಯಕ್ಕೆ ಸಂಬಂಧಿಸಿದಂತೆ 1,00,565 ಅರ್ಜಿಗಳು, ಮುನ್ಸಿಪಾಲಿಟಿ, ಬಫರ್‌ಜೋನ್‌, ನಗರಪ್ರದೇಶ ವ್ಯಾಪ್ತಿಗೆ ಒಳಪಡುವ 69,850 ಅರ್ಜಿಗಳು, ಆಯಾ ತಾಲ್ಲೂಕಿನಲ್ಲಿ ವಾಸವಿಲ್ಲದ 1,620 ಅರ್ಜಿಗಳು, ಕೃಷಿಕರಲ್ಲದ 12,601 ಅರ್ಜಿಗಳು, ಜಮೀನು ಸ್ವಾಧೀನವಿಲ್ಲದ 44,517 ಅರ್ಜಿಗಳು, ಕೆರೆ ಅಭಿವೃದ್ಧಿಗೆ ಸಂಬಂಧಪಟ್ಟ 3,040 ಅರ್ಜಿಗಳು ಸಲ್ಲಿಕೆಯಾಗಿದ್ದವು. ತುರುವೇಕೆರೆ ತಾಲೂಕಿನಲ್ಲಿ ಇನ್ನೆರಡು ತಿಂಗಳಲ್ಲಿ ಅರ್ಜಿಗಳನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದರು.

ಪಡಾ ಅಥವಾ ಬೀಳು ಜಮೀನಿಗೆ ಸಂಬಂಧಿಸಿದಂತೆ ಬಗರ್‌ಹುಕುಂ ಅರ್ಜಿಗಳು ಇತ್ಯರ್ಥವಾದ ನಂತರ ಮತ್ತೊಮೆ ಬೇಸಾಯ ಮಾಡುತ್ತಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ತನಿಖೆ ಮುಗಿಸಲು ಸೂಚನೆ :
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಆಯನೂರು ಹೋಬಳಿ ಮಳಲಗೊಪ್ಪ ಗ್ರಾಮದ ಸರ್ವೆ ನಂ 2 ರಲ್ಲಿನ ಸಂಪೂರ್ಣ ಮಂಜೂರಾತಿಯ ನೈಜತೆ ಕುರಿತು ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ಜೆಡಿಎಸ್‌‍ ಶಾಸಕ ಶಾರದಾ ಪೂರಿಯಾ ನಾಯಕ್‌ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಶೀಘ್ರ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗುವುದು. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.ಒಂದೇ ಕುಟುಂಬಕ್ಕೆ 119 ಎಕರೆ ಕೊಡಲಾಗಿದೆ. ಜಂಗಲ್‌ ಕರಾಬು ಮಂಜೂರು ಮಾಡಲು ಬರುತ್ತದೆಯೇ ಎಂಬುದು ಶಾಸಕರ ಪ್ರಶ್ನೆಯಾಗಿದೆ ಎಂದರು.

ಶಾಸಕ ಕೆ.ವೈ.ನಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗ್ರಾಮದ 2 ಕಿ.ಮೀ. ವ್ಯಾಪ್ತಿಯಲ್ಲಿ ಅದೇ ಗ್ರಾಮ ಅಥವಾ ಪಕ್ಕದ ಗ್ರಾಮದ ಗೋಮಾಳ ಹಾಗೂ ಅರಣ್ಯದಲ್ಲಿ ಜಾನುವಾರು ಮೇಯಿಸಲು ಅವಕಾಶವಿದ್ದರೆ ಹೆಚ್ಚುವರಿ ಗೋಮಾಳವನ್ನು ಮಂಜೂರು ಮಾಡಲು 10 ದಿನದಲ್ಲಿ ಸೂಚನೆ ನೀಡಲಾಗುವುದು ಎಂದು ಹೇಳಿದರು.

ಸಶಾನಕ್ಕೆ ಜಾಗ ಖರೀದಿಸುವ ಪರಿಸ್ಥಿತಿ ಇದೆ. 12 ಸಾವಿರ ಅಂಗನವಾಡಿಗಳಿಗೆ ಜಾಗ ಸಿಗುತ್ತಿಲ್ಲ. ಮೊರಾರ್ಜಿ ವಸತಿ ಶಾಲೆಗೂ ಖರೀದಿಸಬೇಕಾಗಿದೆ. 2, 3 ಹೊಸ ತಾಲ್ಲೂಕಿನ ಪ್ರಜಾ ಸೌಧಕ್ಕೂ ಜಮೀನನ್ನು ಖರೀದಿಸಲಾಗಿದೆ. ಇದೇ ರೀತಿಯಾದರೆ ಶಾಲೆ, ಆಟದ ಮೈದಾನಕ್ಕೆ ಜಾಗ ಎಲ್ಲಿ ತರುವುದು ಎಂದು ಹೇಳಿದರು.

ಜೆಡಿಎಸ್‌‍ ಶಾಸಕ ಸುರೇಶ್‌ಬಾಬು ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್‌‍ ಕಚೇರಿಗೆ ಗೋಮಾಳ ನೀಡಲಾಗಿದೆ. ಬಡವರಿಗಾದರೆ ಕಾನೂನು ಹೇಳುತ್ತೀರಿ. ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದರು.ಬಿಜೆಪಿ ಶಾಸಕ ಸುರೇಶ್‌ಗೌಡ ಮಾತನಾಡಿ, ತುಮಕೂರಿನಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಾಂಗ್ರೆಸ್‌‍ ಕಚೇರಿಗೆ 2 ಎಕರೆ ಜಾಗ ಕೊಡಲಾಗಿದೆ ಎಂದು ಆರೋಪಿಸಿದರು.

RELATED ARTICLES

Latest News