ಬೆಂಗಳೂರು,ಆ.19-ಮಾದಕ ವಸ್ತು ಮಾರಾಟ ಅಥವಾ ಸಾಗಾಟ ಮಾಡುತ್ತಿರುವುದು ಎಲ್ಲೇ ಕಂಡು ಬಂದರೂ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ರವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸರು ವಶಪಡಿಸಿಕೊಂಡಿರುವ ಸುಮಾರು 5.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳ ಬಗ್ಗೆ ಅವರು ಮಾಹಿತಿ ನೀಡಿ, ಈಗ ವಶಪಡಿಸಿಕೊಂಡಿರುವ ಮಾದಕ ವಸ್ತುಗಳು ಎಲ್ಲಿಂದ ರವಾನೆಯಾಗಿವೆ, ಯಾರ್ಯಾರಿಗೆ ಸಾಗಾಟ ಮಾಡಲಾಗಿದೆ ಎಂಬುವುದನ್ನು ಪತ್ತೆ ಹಚ್ಚಲು ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದರು.
ಶಾಲಾ, ಕಾಲೇಜು ಅಥವಾ ಯಾವುದೇ ಸಂಸ್ಥೆಗಳಲ್ಲಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿರುವುದು ಕಂಡು ಬಂದರೆ ತಕ್ಷಣ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು, ಮಾಹಿತಿ ನೀಡುವವರ ಹೆಸರು ಹಾಗೂ ವಿಳಾಸವನ್ನು ಗೌಪ್ಯವಾಗಿಡುವ ಜೊತೆಗೆ ಅವರಿಗೆ ರಕ್ಷಣೆ ನೀಡುತ್ತೇವೆಂದು ಆಯುಕ್ತರು ಭರವಸೆ ನೀಡಿದರು.
ಮಾದಕ ವಸ್ತು ಹಾವಳಿಯಿಂದ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಮಾದಕ ವಸ್ತು ನಿರ್ಮೂಲನೆಗೆ ಈಗಾಗಲೇ ನಾವು ಪಣತೊಟ್ಟಿದ್ದೇವೆ. ನಮ ಜೊತೆ ಸಾರ್ವಜನಿಕರು ಕೈ ಜೋಡಿಸಿದರೆ ಮಾದಕ ವಸ್ತು ಮಾರಾಟ ಹಾಗೂ ಸಾಗಾಟವನ್ನು ತಡೆಗಟ್ಟಬಹುದು. ಹಾಗಾಗಿ ದಯಮಾಡಿ ಸಾರ್ವಜನಿಕರು ತಮ ಸುತ್ತಮುತ್ತಲಿನಲ್ಲಿ ಮಾದಕ ವಸ್ತುವಿನ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ತಿಳಿಸುವಂತೆ ಸೀಮಂತ್‌ಕುಮಾರ್ ಸಿಂಗ್ ಅವರು ಮನವಿ ಮಾಡಿದ್ದಾರೆ.