ಬೆಂಗಳೂರು ಆ.19 – ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಪ್ರಸ್ತಾಪ ಮಾಡಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾಲು ಎಳೆದ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಗ್ರೇಟರ್ ಬೆಂಗಳೂರು ವಿಧೇಯಕ ರಚನೆಯ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡುತ್ತಿದ್ದ ಡಿ.ಕೆ.ಶಿವಕುಮಾರ್, ಬೆಂಗಳೂರಿನ ಶಾಸಕರಿಗೆ ಬೇಡ ಎಂದರೆ ಗ್ರೇಟರ್ ಬೆಂಗಳೂರು ವಿಧೇಯಕವನ್ನು ವಾಪಸ್ ಪಡೆಯಲು ನಾನು ಸಿದ್ಧನಿದ್ದೇನೆ. ಈ ಬಗ್ಗೆ ಸುದೀರ್ಘ ಚರ್ಚೆಯಾಗಲಿ. ಎಲ್ಲರಿಗೂ ಮಾತನಾಡಲು ಅವಕಾಶ ನೀಡಲಾಗುವುದು. ನಾವೇ ಬೆಳೆಸಿದ ಶಾಸಕ ಮುನಿರತ್ನ ಅವರಿಗೂ ಅವಕಾಶ ನೀಡುತ್ತೇವೆ ಎಂದರು.
ಈ ಹಂತದಲ್ಲಿ ಎದ್ದುನಿಂತ ಮುನಿರತ್ನ ನನ್ನನ್ನು ಮರೆತು ಹೋಗಿದ್ದೀರಾ ಎಂದುಕೊಂಡ್ದೆಿ. ನೆನಪಿಸಿಕೊಂಡಿದ್ದಕ್ಕೆ ಧನ್ಯವಾದಗಳು ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನೀನು ಯಾವುದೋ ಪ್ರಕರಣಗಳಿಗೆ ಸಿಲುಕಿ ಎಲ್ಲೆಲ್ಲೋ ಓಡಾಡುತ್ತಿದ್ದೀಯ. ಹಾಗಾಗಿ ಮರೆತು ಹೋಗ್ದೆಿ ಎಂದು ಕಾಲು ಎಳೆದರು.
ಈ ಸಂದರ್ಭದಲ್ಲಿ ಮುನಿರತ್ನ ನನ್ನ ಮೇಲಿನ ಪ್ರಕರಣಗಳು ಹಾಗೂ ಡಿ.ಕೆ. ಶಿವಕುಮಾರ್ ವಿರುದ್ಧ ಪ್ರಕರಣಗಳನ್ನು ಸೇರಿಸಿ ಸಿಬಿಐ ತನಿಖೆಯಾಗಲಿ ಅಥವಾ ಅದಕ್ಕಿಂತಲೂ ದೊಡ್ಡ ಮಟ್ಟದ ತನಿಖೆ ಇದ್ದರೆ ಅದನ್ನು ಮಾಡಿ ಎಂದು ತಿರುಗೇಟು ನೀಡಿದರು. ಇದು ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಗ್ರಾಸವಾಯಿತು.