ಬೆಂಗಳೂರು,ಆ.20- ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪಕ್ಷಬೇಧ ಮರೆತು ಸದಸ್ಯರು ವಿಧಾನಪರಿಷತ್‌ನಲ್ಲಿ ಆಗ್ರಹಿಸಿದರು. ಕರ್ನಾಟಕ ಕೆರೆ ಸಂದರ್ಶನ ಮತ್ತು ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2025 ಅನ್ನು ಪರಿಷತ್‌ನಲ್ಲಿ ಸಣ್ಣ ನೀರಾವರಿ ಸಚಿವ ಬೋಸರಾಜು ಅವರು ಮಂಡನೆ ಮಾಡಿದರು.
ಈ ವಿಧೇಯಕದ ಮೇಲೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸದಸ್ಯರಾದ ಐವಾನ್ ಡಿಸೋಜ, ಟಿ.ಎ.ಶರವಣ, ಕೆ.ಎಸ್.ನವೀನ್, ಎನ್.ರವಿಕುಮಾರ್, ಪ್ರತಾಪ್ ಸಿಂಹ ನಾಯಕ್, ರಾಮೋಜಿಗೌಡ, ಗೋವಿಂದರಾಜು, ಹೇಮಲತಾ ನಾಯಕ್, ಪಿ.ಎಚ್.ಪೂಜಾರ್, ಸಿ.ಟಿ.ರವಿ ಸೇರಿದಂತೆ ಮತ್ತಿತರರು ಮಾತನಾಡಿದರು.
ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಕೆರೆಗಳನ್ನು ಸಂರಕ್ಷಣೆ ಮಾಡಬೇಕಾದ್ದು ಇಂದಿನ ತುರ್ತು ಅಗತ್ಯ. ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಸಾವಿರಾರು ಕೋಟಿ ರೂ. ಬೆಲೆ ಬಾಳುವ ಕೆರೆಗಳನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಖಾಸಗಿ ವ್ಯಕ್ತಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ದೊಡ್ಡದೊಡ್ಡ ವ್ಯಕ್ತಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಸರ್ಕಾರ ಇಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದರು.
ವಿಧೇಯಕದಲ್ಲಿ ಸಂರಕ್ಷಣೆ ಎಂಬ ಪದವಿದೆ. ಆದರೆ ಇದಕ್ಕೆ ವಿರುದ್ಧವಾಗಿ ನಾಶ, ವಿನಾಶ, ನಿರ್ಲಕ್ಷ್ಯ ಮಾಡಲಾಗುತ್ತಿದೆ. ಸರ್ಕಾರ ಒಳ್ಳೆಯ ಉದ್ದೇಶದಿಂದ ವಿಧೇಯಕವನ್ನು ಜಾರಿ ಮಾಡಿರಬಹುದು. ಆದರೆ ವಾಸ್ತವ ಚಿತ್ರಣವೇ ಬೇರೆ ಇದೆ.ಹೀಗಾಗಿ ಸರ್ಕಾರ ವಿಧೇಯಕದ ಕುರಿತು ಸಾಧಕ-ಬಾಧಕದ ಬಗ್ಗೆ ಚರ್ಚಿಸಲು ಸದನ ಸಮಿತಿಯನ್ನು ರಚನೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಎನ್.ರವಿಕುಮಾರ್ ಮಾತನಾಡಿ, ಬೆಂಗಳೂರು ಮತ್ತಿತರೆಡೆ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ದೊಡ್ಡ ದೊಡ್ಡ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಫ್ಲ್ಯಾಟ್‌ಗಳು, ಕಾರ್ಖಾನೆಗಳನ್ನು ಕಟ್ಟಲಾಗಿದೆ. ಇದನ್ನು ತೆರವು ಮಾಡದೇ ಕೆರೆ ಸಂರಕ್ಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಇಂದು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಲು ಸ್ಥಳವಿಲ್ಲದೆ ಆ ರೀತಿ ಫುಟ್‌ಪಾತ್‌ಗಳನ್ನು ಸಹ ಒತ್ತುವರಿ ಮಾಡಿಕೊಂಡಿದ್ದಾರೆ. ಮುಂಬೈ, ದೆಹಲಿಯಲ್ಲಿ ಮಳೆ ಬಂದಾಗ ಇಡೀ ನಗರವೇ ಮುಳುಗಡೆಯಾಗುತ್ತದೆ. ಅನೇಕ ಬಾರಿ ಬೆಂಗಳೂರಿನಲ್ಲೂ ಇದು ಮರುಕಳಿಸಿದೆ. ಇದರ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಲು ಜಂಟಿ ಸದನ ಸಮಿತಿ ರಚನೆ ಮಾಡಬೇಕೆಂದು ಮನವಿ ಮಾಡಿದರು.
ಕೇಶವ ಪ್ರಸಾದ್ ಮಾತನಾಡಿ, ರಾಜ್ಯದೆಲ್ಲೆಡೆ ಕೆರೆಗಳನ್ನು ಒತ್ತುವರಿ ಮಾಡುತ್ತಿರುವ ಪರಿಣಾಮ ನೀರಿನ ಮೂಲವೇ ಬತ್ತಿ ಹೋಗುತ್ತಿದೆ. ಇಂದು ಜಾಗತಿಕ ತಾಪಮಾನದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ. ಮುಂದೊಂದು ದಿನ ಉಸಿರಾಡಲು ಮನೆಗಳಲ್ಲಿ ಆಕ್ಸಿಜನ್ ಅಳವಡಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ.ಧರ್ಮಾಂಬುದಿ ಕೆರೆ ಒತ್ತುವರಿ ಮಾಡಿ ಬಸ್ ನಿಲ್ದಾಣ ಮಾಡಲಾಯಿತು. ವೃಷಭಾವತಿ ನದಿ ಮೂಲ ಎಲ್ಲಿದೆ ಎಂದು ಹುಡುಕುವ ಪ್ರಶ್ನೆ ಉದ್ಭವವಾಗಿದೆ. ಸರ್ಕಾರ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು. ಟಿ.ಎ.ಶರವಣ ಮಾತನಾಡಿ, ಬೆಂಗಳೂರಿನಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಸರ್ಕಾರಕ್ಕೆ 4ಕ್ಕೂ ಹೆಚ್ಚು ವರದಿಗಳನ್ನು ಸಲ್ಲಿಸಲಾಗಿದೆ.
ಎ.ಟಿ.ರಾಮಸ್ವಾಮಿ, ಲಕ್ಷ್ಮಣ ಅಯ್ಯರ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಸೇರಿದಂತೆ ಒಟ್ಟು ನಾಲ್ವರು ಕೆರೆ ಒತ್ತುವರಿ ಕುರಿತು ವರದಿ ಕೊಟ್ಟಿದ್ದಾರೆ. ಸರ್ಕಾರ ಕಾಲಕಾಲಕ್ಕೆ ವಶಪಡಿಸಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಅದರಲ್ಲೂ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈ ವರದಿಗಳನ್ನು ಅನುಷ್ಠಾನ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಲಿ ಎಂದು ಆಗ್ರಹಿಸಿದರು. ಸಿ.ಟಿ.ರವಿ ಮಾತನಾಡಿ, ಸಂರಕ್ಷಣೆ ಹೆಸರಿನಲ್ಲಿ ಭಕ್ಷಣೆ ಮಾಡಲು ಮುಂದಾಗಬಾರದು. ಬಫರ್‌ಝೋನ್ ಹೆಸರಿನಲ್ಲಿ ಕಡಿತ ಮಾಡಿದರೆ ಕೆರೆಗಳ ಒತ್ತುವರಿ ಮಾಡಿಕೊಳ್ಳುವ ಆತಂಕ ಇದೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಕಿವಿಮಾತು ಹೇಳಿದರು.