ಬೆಂಗಳೂರು, ಆ.21- ಆಡಳಿತ ಪಕ್ಷದ ಸದಸ್ಯರ ವಿರೋಧದಿಂದಾಗಿ ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕವನ್ನು ಅಂಗೀಕರಿಸುವ ಬದಲಾಗಿ, ವಿಧಾನಸಭೆಯ ಆಯ್ಕೆ ಸಮಿತಿಗೆ ವಹಿಸುವ ನಿರ್ಣಯ ಕೈಗೊಳ್ಳಲಾಯಿತು.
ವಿಧಾನಸಭೆಯ ಶಾಸನ ರಚನಾ ಕಲಾಪದಲ್ಲಿ ಕಂದಾಯ ಸಚಿವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ಕರ್ನಾಟಕ ಭೂ ಕಂದಾಯ ಎರಡನೇ ತಿದ್ದುಪಡಿ ವಿಧೇಯಕ 2025 ಅನ್ನು ಮಂಡಿಸಿ ಪರ್ಯಾಲೋಚನೆಗೆ ಮನವಿ ಮಾಡಿದರು. ಕೊಡಗು ಭಾಗದಲ್ಲಿನ ಜಮ, ಬಾಣೆ ಹಿಡುವಳಿ ವ್ಯವಸ್ಥೆಗಳಿಗೆ ಸಂಬಂಧಪಟ್ಟಂತ ವಿಧೇಯಕ ಇದಾಗಿದ್ದು, ಅಂಗೀಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್. ಪೊನ್ನಣ್ಣ, ಕೊಡಗಿನಲ್ಲಿ ಹಲವಾರು ವರ್ಷಗಳಿಂದ ಸಮಸ್ಯೆಗೆ ಕಾರಣವಾಗಿರುವ ಭೂ ದಾಖಲಾತಿಗಳ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ಕಾಯ್ದೆ ರೂಪಿಸಬೇಕಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಈ ಮಸೂದೆ ಇದೆ. ಜಮೀನು ಸ್ವಾಧೀನದಲ್ಲಿ ಇರುವವರು ಬೇರೆ, ದಾಖಲಾತಿಗಳಲ್ಲಿ ನಮೂದಾಗಿರುವ ಹೆಸರುಗಳು ಬೇರೆ ಬೇರೆ ಎಂಬ ವ್ಯವಸ್ಥೆ ಇದೆ. ಅದನ್ನು ಸರಿಪಡಿಸಲು ಈ ಕಾಯ್ದೆ ಸಮರ್ಥವಾಗಿಲ್ಲ ಎಂದರು.
ಶಾಸಕ ಮಂಥರ ಗೌಡ ಕೂಡ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ, ದಾಖಲಾತಿಗಳ ತಿದ್ದುಪಡಿಯಾಗಬೇಕು ಎಂದು ಮನವಿ ಮಾಡಿದರು. ಈ ವಿಧೇಯಕವನ್ನು ಆಯ್ಕೆ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇದಕ್ಕೆ ಧ್ವನಿಗೂಡಿಸಿದರು. ಒತ್ತಾಯಕ್ಕೆ ಮಣಿದ ಸಚಿವ ಎಚ್.ಕೆ. ಪಾಟೀಲ್ ವಿಧೇಯಕವನ್ನು ಆಯ್ಕೆ ಸಮಿತಿಗೆ ವಹಿಸುವುದಾಗಿ ತಿಳಿಸಿದರು.
ಸದನದ ಅಭಿಪ್ರಾಯದಂತೆ ವಿಧಾನ ಸಭೆಯ ಆಯ್ಕೆ ಸಮಿತಿ ರಚಿಸುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಪ್ರಕಟಿಸಿದರು.
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಂಸದ ಡಾ.ಸಿ.ಎನ್.ಮಂಜುನಾಥ್
- ಬೆಂಗಳೂರಿನ ಮಿಲ್ಕ್ ಕಾಲೋನಿಯಲ್ಲಿ ಡೈಮಂಡ್ ಗಣಪತಿ
- ಕೊಳವೆ ಬಾವಿ ನೀರಿಗೆ ಟೆಲಿಮೆಟ್ರಿ ಅಳವಡಿಕೆ, ಟ್ಯಾಂಕರ್ಗಳಿಗೆ ಶುಲ್ಕ ವಿಧಿಸುವ ಕರ್ನಾಟಕ ಅಂತರ್ಜಲ ಕಾಯ್ದೆಗೆ ಅನುಮೋದನೆ
- ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದ ಹೆಚ್.ಡಿ. ಕುಮಾರಸ್ವಾಮಿ
- ದೆಹಲಿ ಸಿಎಂ ರೇಖಾ ಗುಪ್ತಾಗೆ ಝಡ್+ ಭದ್ರತೆ