ಬಿಎಂಟಿಸಿ ಬಸ್‌ಗೆ ಸಿಕ್ಕಿಯಾಗಿ ಶಾಲಾ ಬಾಲಕಿ ಸಾವು
ಬೆಂಗಳೂರು,ಆ.21- ಬಿಎಂಟಿಸಿ ಬಸ್‌ಗೆ ಇಂದು ಮತ್ತೊಬ್ಬರು ಬಲಿಯಾಗಿದ್ದಾರೆ. ತಾಯಿಯೊಂದಿಗೆ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಬಾಲಕಿ ಮೇಲೆ ಬಿಎಂಟಿಸಿ ಬಸ್ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಮಿಲಿಯನಿಯಂ ಖಾಸಗಿ ಶಾಲೆಯಲ್ಲಿ 5ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ತನ್ವಿಕೃಷ್ಣ (10) ಮೃತಪಟ್ಟ ಬಾಲಕಿ.ಕೋಗಿಲು ಕ್ರಾಸ್ ನಿವಾಸಿಯಾದ ಹರ್ಷಿತಾ ಅವರು ತಮ ಮಗಳು ತನ್ವಿಕೃಷ್ಣಳನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಶಾಲೆಗೆ ಬಿಡಲು ಇಂದು ಬೆಳಗ್ಗೆ 8.30 ರ ಸುಮಾರಿನಲ್ಲಿ ಹೋಗುತ್ತಿದ್ದರು.
ಕೋಗಿಲು ಮುಖ್ಯ ರಸ್ತೆ, ಮಾರುತಿನಗರದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಸ್ಕೂಟರ್‌ನಿಂದ ನಿಯಂತ್ರಣ ತಪ್ಪಿ ತನ್ವಿ ಕೆಳಗೆ ಬಿದ್ದಿದ್ದಾಳೆ.ಅದೇ ಮಾರ್ಗವಾಗಿ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಬಸ್ ಬಾಲಕಿ ಮೇಲೆಯೇ ಹರಿದ ಪರಿಣಾಮ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾಳೆ.
ಸುದ್ದಿ ತಿಳಿಯುತ್ತಿದ್ದಂತೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ನಿನ್ನೆ ಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಜಯನಗರ 4ನೇ ಬ್ಲಾಕ್‌ನ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಮಾರ್ಕೆಟ್‌ಗೆ ಹೋಗಲು ಕೂಲಿ ಕಾರ್ಮಿಕ ಸಂಪಂಗಿ ಎಂಬುವವರು ಎಲೆಕ್ಟ್ರಿಕ್ ಬಸ್ ಹತ್ತುತ್ತಿದ್ದಾಗ ಏಕಾಏಕಿ ಚಾಲಕ ಡೋರ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬಸ್ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಮಾಸುವ ಮುನ್ನವೇ ಇಂದು ಬಾಲಕಿ ಬಿಎಂಟಿಸಿ ಬಸ್‌ಗೆ ಸಿಲುಕಿ ಸಾವನ್ನಪ್ಪಿರುವುದು ವಿಷಾಧಕರ.
ಟಿಪ್ಪರ್ ಡಿಕ್ಕಿ:ಪಾದಚಾರಿ ಸಾವು
ಅತೀ ವೇಗವಾಗಿ ಬಂದ ಟಿಪ್ಪರ್ ವಾಹನ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.ಉತ್ತರ ಭಾರತ ಬಿಸೋಜಿತ್ ಫರೀದ್ (37) ಮೃತಪಟ್ಟ ಪಾದಚಾರಿ.ಇವರು ವೃತ್ತಿಯಲ್ಲಿ ಕೂಲಿ ಕಾರ್ಮಿಕ.
ಕಾಮಾಕ್ಷಿ ಪಾಳ್ಯದಲ್ಲಿ ವಾಸವಾಗಿದ್ದ ಫರೀದ್ ಅವರು ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ನಡೆದುಕೊಂಡು ರಾತ್ರಿ 9.30 ರ ಸುಮಾರಿನಲ್ಲಿ ಹೋಗುತ್ತಿದ್ದಾಗ ಮಾಗಡಿ ರಸ್ತೆಯ ಅರ್ಕಾವತಿ ಆಸ್ಪತ್ರೆ ಮುಂಭಾಗ ಅತೀ ವೇಗವಾಗಿ ಬಂದ ಟಿಪ್ಪರ್ ವಾಹನ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಚಾಲಕ ವಾಹನ ನಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ.ಸುದ್ದಿ ತಿಳಿದು ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.ಟಿಪ್ಪರ್ ವಾಹನ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಟ್ರಕ್ ಡಿಕ್ಕಿ:ವೃದ್ಧೆ ಬಲಿ
ಟ್ರಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಿಸದೇ ಇಂದು ಮುಂಜಾನೆ ಮೃತಪಟ್ಟಿದ್ದಾರೆ.ಪೀಣ್ಯ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆಗ್ಗನಹಳ್ಳಿ ಕ್ರಾಸ್ ನಿವಾಸಿ ಮಂಜುಳಾ (63) ಮೃತಪಟ್ಟ ವೃದ್ಧೆ.
ಮಂಜುಳಾ ಅವರು ಕುಣಿಗಲ್‌ಗೆ ಹೋಗಿದ್ದು, ವಾಪಸ್ ರಾತ್ರಿ 9 ಗಂಟೆ ಸುಮಾರಿನಲ್ಲಿ ಕುಣಿಗಲ್‌ನಿಂದ ಬಸ್‌ನಲ್ಲಿ ಬಂದು ಜಾಲಹಳ್ಳಿ ಕ್ರಾಸ್‌ನಲ್ಲಿ ಇಳಿದುಕೊಂಡಿದ್ದಾರೆ.
ಹೆಗ್ಗನಹಳ್ಳಿ ಕ್ರಾಸ್‌ಗೆ ಹೋಗಲು ಬಸ್ ಕಾಯುತ್ತಿದ್ದಾಗ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಬಂದ ಟ್ರಕ್ ಮಂಜುಳಾ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು.
ತಕ್ಷಣ ಪೊಲೀಸರು ಅವರನ್ನು ನಿಮಾನ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವ ಪೀಣ್ಯ ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ತಡೆಗೋಡೆಗೆ ಬೈಕ್ ಡಿಕ್ಕಿ : ಫೈಓವರ್‌ನಿಂದ ಕೆಳಗೆ ಬಿದ್ದ ಸವಾರ ದುರ್ಮರಣ
ಇಬ್ಬರು ಸ್ನೇಹಿತರು ಬೈಕ್‌ನಲ್ಲಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ಫೈಓವರ್ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರ ಮೃತಪಟ್ಟಿರುವ ಘಟನೆ ಯಶವಂತಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಅಕ್ಷಯ್‌ರಾಮ್(23) ಮೃತಪಟ್ಟ ಬೈಕ್ ಸವಾರ. ಟಿ.ದಾಸರಹಳ್ಳಿಯಲ್ಲಿ ವಾಸವಾಗಿದ್ದ ಇವರು ಸ್ನೇಹಿತನನ್ನು ತನ್ನ ಬೈಕ್‌ನಲ್ಲಿ ಕರೆದುಕೊಂಡು ಸಿಟಿ ಕಡೆಗೆ ಬರುತ್ತಿದ್ದರು.
ಯಶವಂತಪುರ ಫೈಓವರ್ ಮೇಲೆ ಇಂದು ಮುಂಜಾನೆ 2 ಗಂಟೆ ಸುಮಾರಿನಲ್ಲಿ ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಫೈಓವರ್ ತಡೆಗೋಡೆಗೆ ಡಿಕ್ಕಿ ಹೊಡೆದಾಗ ಅಕ್ಷಯ್‌ರಾಮ್ ಫೈಓವರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಹಿಂಬದಿ ಸವಾರ ಫೈಓವರ್ ಮೇಲೇಯೇ ಬಿದ್ದು, ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸುದ್ದಿ ತಿಳಿದು ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.