Thursday, August 21, 2025
Homeರಾಜ್ಯಜನ ಸಂದಣಿ ನಿಯಂತ್ರಣ ವಿಧೇಯಕ ಸದನ ಸಮಿತಿಗೆ

ಜನ ಸಂದಣಿ ನಿಯಂತ್ರಣ ವಿಧೇಯಕ ಸದನ ಸಮಿತಿಗೆ

Crowd Control Bill to House Committee

ಬೆಂಗಳೂರು,ಆ.21– ಜನಸಂದಣಿ ವಿಪತ್ತಿಗೆ ಕಾರಣರಾಗುವ, ಆ ಸಂದರ್ಭದಲ್ಲಿ ದೈಹಿಕ ಗಾಯಗಳಿಗಾಗಿ ಕಾರಣವಾಗುವವರ ವಿರುದ್ಧ ಕನಿಷ್ಠ ಮೂರು ವರ್ಷಗಳು ಮತ್ತು ಏಳು ವರ್ಷಗಳವರೆಗಿನ ಕಾರಾವಾಸ ಹಾಗೂ ಪ್ರಾಣಹಾನಿ ಪ್ರಕರಣಗಳಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಯವರೆಗೆ ಗುರಿಪಡಿಸಲು ಅವಕಾಶ ನೀಡುವ 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ(ಕಾರ್ಯಕ್ರಮಗಳು
ಮತ್ತು ಗುಂಪುಗೂಡುವ ಸ್ಥಳಗಳಲ್ಲಿ ನಿರ್ವಹಣೆ) ವಿಧೇಯಕವನ್ನು ವಿಧಾನಸಭೆಯಲ್ಲಿಂದು ಸದನ ಸಮಿತಿಗೆ ವಹಿಸಲಾಯಿತು.

ಶಾಸನರಚನಾ ಕಲಾಪದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಅವರು ಮಂಡಿಸಿ, ಸುದೀರ್ಘ ವಿವರಣೆ ನೀಡಿದ ನಂತರ ಶಾಸಕರು ಪಕ್ಷಬೇಧ ಮರೆತು ಹಲವು ಸೂಚನೆಗಳನ್ನು ನೀಡಿದರು.ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳ ಶಾಸಕರು, ಇದೊಂದು ಗಂಭೀರವಾದ ವಿಧೇಯಕವಾಗಿದ್ದು, ಸುದೀರ್ಘ ಚರ್ಚೆ ಅಗತ್ಯವಿದೆ. ಇದನ್ನು ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿದರು. ಇದಕ್ಕೆ ಗೃಹಸಚಿವ ಪರಮೇಶ್ವರ್‌ ಅವರು ಸದನಸಮಿತಿ ರಚನೆಗೆ ಒಪ್ಪಿಗೆ ಸೂಚಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಘಟನೆ, ದೇಶದ ಹಲವೆಡೆ ಸಂಭವಿಸಿರುವ ಕಾಲ್ತುಳಿತದ ದುರ್ಘಟನೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಗಳನ್ನು ರಕ್ಷಣೆ ಮಾಡುವ ಉದ್ದೇಶದಿಂದ ಹಾಗೂ ಆಯೋಜಕರನ್ನು ಜವಾಬ್ದಾರರನ್ನಾಗಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ.ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂಧಿಸಲು ಮತ್ತು ಅಪರಾಧಗಳ ದಂಡನೆಗಾಗಿ ಉಪಬಂಧಗಳನ್ನು ಕಲ್ಪಿಸಲು ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಜನಸಂದಣಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹಾಗೂ ಗುಂಪುಗೂಡಿಕೆಯನ್ನು ನಿರ್ವಹಿಸಲು ಈ ವಿಧೇಯಕ ಅವಕಾಶ ಮಾಡಿಕೊಡಲಿದೆ ಎಂದರು.

ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆ ಪ್ರಾಧಿಕಾರದಿಂದ ಅನುಮತಿ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಲಿದೆ. 7 ಸಾವಿರ ಜನಸಂಖ್ಯೆಗಿಂತ ಕಡಿಮೆ ಇದ್ದರೆ ಆ ವ್ಯಾಪ್ತಿಯ ಪೊಲೀಸ್‌‍ ಠಾಣೆಯ ಉಸ್ತುವಾರಿ ಅಧಿಕಾರಿ 7 ಸಾವಿರಕ್ಕಿಂತ ಹೆಚ್ಚಿದ್ದರೆ ಡಿವೈಎಸ್ಪಿ, ಬೆಂಗಳೂರಿನಲ್ಲಿ ಎಸಿಪಿ, 50 ಸಾವಿರಕ್ಕಿಂತ ಹೆಚ್ಚಿದ್ದರೆ ಎಸ್‌‍ಪಿ ಹಾಗೂ ಆಯುಕ್ತರು ಅನುಮತಿ ಕೊಡಬೇಕಾಗುತ್ತದೆ. ಆಯೋಜಕರು ಕಾರ್ಯಕ್ರಮಕ್ಕೆ 10 ದಿನ ಮುಂಚೆ, ಪ್ರಾಧಿಕಾರಿಗೆ 10 ದಿನಗಳ ಮುಂಚೆ ಕಾರ್ಯಕ್ರಮದ ಸಿದ್ದತೆ, ಕಾರ್ಯಕ್ರಮದ ನಡೆಯುವ ಜಾಗ, ಅಲ್ಲಿ ಹೊರ-ಬರುವವರ ದ್ವಾರಗಳ ಸಂಖ್ಯೆ ಸೇರಿದಂತೆ ಸಮಗ್ರ ಮಾಹಿತಿಯನ್ನು ನಮೂದಿಸಬೇಕು. ಖಾಸಗಿ ಹಾಗೂ ಸಾರ್ವಜನಿಕ ಸ್ವತ್ತಿಗೆ ಹಾನಿಯಾಗದ ರೀತಿ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊರಬೇಕು.

ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ದುರಂತ, ತಮಗೆ ಸಂಬಂಧ ಇಲ್ಲ ಎಂದು ಹೇಳುತ್ತಿರುವ ಹಿನ್ನಲೆಯಲ್ಲಿ ಈ ವಿಧೇಯಕ ಅಗತ್ಯವಿದೆ ಎಂದರು.ಇದಲ್ಲದೆ 50 ಸಾವಿರ ಜನರಿಗಿಂತ ಹೆಚ್ಚಿದ್ದಾಗ 1 ಕೋಟಿ ರೂ. ಮೊತ್ತದ ನಷ್ಟಭರ್ತಿ ಬಾಂಡ್‌ ನೀಡಬೇಕು. ಪ್ರಾಧಿಕಾರದ ಅನುಮತಿ ನೀಡುವ ಮುನ್ನ ಅಗ್ನಿಶಾಮಕ ಇಲಾಖೆ, ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆಯ ಅನುಮತಿ ಪಡೆಯಬೇಕು. ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿ ಅರ್ಜಿದಾರರ ಜೊತೆ ಸಮಾಲೋಚಿಸಿ ಸೂಚನೆ ಹಾಗೂ ನಿರ್ದೇಶನಗಳನ್ನು ನೀಡಬೇಕಾಗುತ್ತದೆ ಎಂದರು.

ಆರ್‌ಸಿಬಿ ವಿಜಯೋತ್ಸವಕ್ಕೆ ಬರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಪೋಸ್ಟಿಂಗ್‌ ಆಗಿತ್ತು ಎಂಬುದು ಕೇಳಿಬಂದಿದೆ. ಹೆಚ್ಚು ಜನರು ಸೇರಿದ ಸಂದರ್ಭದಲ್ಲಿ ಸ್ವಾಭಾವಿಕವಾಗಿ ತೊಂದರೆಯಾಗುತ್ತದೆ. ಕೆಲವೊಮೆ ತೊಂದರೆಯೂ ಆಗುವುದಿಲ್ಲ ಎಂದರು.ಜನಸಂದಣಿಯ ಸುರಕ್ಷತೆ ಮತ್ತು ಕಾನೂನು ಸುರಕ್ಷೆಯನ್ನು ಕಾಪಾಡಿಕೊಳ್ಳಲು ಇತರೆ ಪರಿಶೀಲನೆ ಮತ್ತು ತಪಾಸಣೆ ಕೂಡ ಮಾಡಲಾಗುತ್ತದೆ. ಕಾರ್ಯಕ್ರಮದ ದಿನಾಂಕದಂದು ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆಗಾಗಿ ಬಂದೋಬಸ್ತ್‌ ಯೋಜನೆಯ ಅನುಸರಣೆಯನ್ನು ಪ್ರಾಧಿಕಾರಿ ಮತ್ತು ಆಯೋಜಕರು ಖಚಿತಪಡಿಸಬೇಕು. ತುರ್ತು ಪರಿಸ್ಥಿತಿ ಅಥವಾ ಅನಿರೀಕ್ಷಿತ ಬೆಳವಣಿಗೆ ಸಂದರ್ಭದಲ್ಲಿ ನೀಡಿದ ಅನುಮತಿಯನ್ನು ರದ್ದುಗೊಳಿಸುವ ತಡೆ ಹಿಡಿಯುವ ನಿರ್ಧಾರವನ್ನು ಪ್ರಾಧಿಕಾರ ಕೈಗೊಳ್ಳಬಹುದು.

ಅನುಮತಿ ಪಡೆಯದ ಕಾರ್ಯಕ್ರಮ ಅಥವಾ ಸಮಾರಂಭ ಆಯೋಜಿಸಿದರೆ, ಆಯೋಜಿಸಲು ಯತ್ನಿಸಿದರೆ ಕನಿಷ್ಟ ಮೂರು ವರ್ಷ , 7 ವರ್ಷಗಳ ಅವಧಿಗೆ ವಿಸ್ತರಿಸಬಹದಾದ ಕಾರಾವಾಸದಿಂದ 1 ಕೋಟಿ ರೂ.ಗಳವರೆಗೆ ಜುಲಾನೆ ಅಥವಾ ಇವೆರಡರಿಂದ ದಂಡನೆಯಾಗತಕ್ಕದ್ದು, ಸುಳ್ಳು ಹೇಳಿಕೆ ವದಂತಿಗಳ ಮೂಲಕ ಸಾಮೂಹಿಕ ಹಿಂಸಾಚಾರ, ಆಸ್ತಿ ನಷ್ಟ, ಶಾಂತಿಭಂಗ ಉಂಟು ಮಾಡುವ ದುಷ್ಪೇರಿಸುವ ಕೃತ್ಯಗಳಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆಮನೆ ವಾಸ, 50 ಸಾವಿರ ರೂ. ಜುಲಾನೆ ಅಥವಾ ಇವರೆಡರಿಂದಲೂ ದಂಡಿಸಲಾಗುತ್ತದೆ.

ಪೊಲೀಸರ ನಿರ್ದೇಶನವನ್ನು ಉಲ್ಲಂಘಿಸಿದರೆ ಒಂದು ತಿಂಗಳ ಶಿಕ್ಷೆ, 50 ಸಾವಿರ ದಂಡ ವಿಧಿಸಲಾಗುತ್ತದೆ. ಕಾರ್ಯಕ್ರಮ ಅಥವಾ ಸಮಾರಂಭದಲ್ಲಿ ಉಂಟಾಗುವ ನಷ್ಟಗಳಿಗೆ ಪರಿಹಾರ ಕೊಡಬೇಕಾಗುತ್ತದೆ. ಖಾಸಗಿ ಅಥವಾ ಸಾರ್ವಜನಿಕ ಸ್ವತ್ತಿಗೆ ಉಂಟಾದ ನಷ್ಟವನ್ನು ಆಯೋಜಕರು ಭರಿಸಬೇಕು, ಜೀವಹಾನಿ ಜವಾಬ್ದಾರಿಯನ್ನು ಹೊರಬೇಕು ಎಂದರು.2023ರ ಭಾರತೀಯ ನ್ಯಾಯಸಂಹಿತೆ ಕಾಯ್ದೆ , ಕರ್ನಾಟಕ ಪೊಲೀಸ್‌‍ ಅಧಿನಿಯಮ, ಕರ್ನಾಟಕ ಮಾಹಿತಿ ತಂತ್ರಜ್ಞಾನ, ಕೇಂದ್ರದ ಅಧಿನಿಯಮಗಳು ಅನ್ವಯವಾಗಲಿವೆ. ಜನಸಂದಣಿ ವಿಪ್ಪತ್ತಿಗೆ ಕಾರಣರಾಗುವ ಅಥವಾ ಕಾರಣರಾದರೂ ಜನಸಂದಣಿ ವಿಪ್ಪತ್ತಿನ ನಿಕಟಪೂರ್ವದಲ್ಲಿ ವ್ಯಕ್ತಿ ಅಥವಾ ವ್ಯಕ್ತಿಗಳ ಕೃತ್ಯ, ನಿರ್ಲಕ್ಷ್ಯ, ಅಜಾಗರೂಕತೆಯು ಸ್ವತ್ತು ಅಥವಾ ಜೀವಹಾನಿಗೆ ಕಾರಣವಾದರೆ ಆತನ ವಿರುದ್ದವಾಗಿ ಸಾಬೀತಾಗದ ಹೊರತು ಜನಸಂದಣಿ ವಿಪತ್ತನ್ನು ಮಾಡಿದ್ದಾನೆಂದು ಪರಿಗಣಿಸುವುದು, ದೈಹಿಕ ಗಾಯಗಳಿಗೆ ಕನಿಷ್ಟ ಮೂರು ವರ್ಷಗಳು ಮತ್ತು 7 ವರ್ಷಗಳವರೆಗಿನ ಸೆರೆವಾಸ, ಹಾನಿ ಪ್ರಕರಣಗಳಿಗೆ ಕನಿಷ್ಟ 10 ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಗುರಿಪಡಿಸುವುದನ್ನು ವಿಧೇಯಕ ಒಳಗೊಂಡಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಇದನ್ನು ಪೂರ್ವ ಪ್ರಕಟಣೆ ಮಾಡಿದ ತರುವಾಯ ನಿಯಮಗಳನ್ನು ತರಲು ಅವಕಾಶ ಕಲ್ಪಿಸಲಾಗಿದೆ. ಖಾಸಗಿ ಆವರಣದೊಳಗೆ ಆಚರಿಸುವ ಅಥವಾ ನಡೆಸುವ ಕೌಟುಂಬಿಕ ಸಮಾರಂಭ ಅಥವಾ ಕಾರ್ಯಕ್ರಮಗಳು ಮದುವೆ ಮನೆಗಳಿಗೆ ಇವು ಅನ್ವಯಿಸುವುದಿಲ್ಲ. ಖಾಸಗಿ ಆವರಣಗಳು ಎಂಬುದು ಭೋಗ್ಯಕ್ಕೆ ಪಡೆದ, ಬಾಡಿಗೆಗೆ ಪಡೆದ ಅಥವಾ ಗುತ್ತಿಗೆಗೆ ಪಡೆದ ಆವರಣಗಳು ಒಳಗೊಂಡಿರುತ್ತವೆ.
ದೊಡ್ಡ ದೊಡ್ಡ ಸಮಾರಂಭಕ್ಕೆ ಲಕ್ಷಾಂತರ ಜನರು ಸೇರುತ್ತಾರೆ. ನಿಯಂತ್ರಣ ಇಲ್ಲದೆ ನಡೆಯುತ್ತವೆ. ಅಹಿತಕರ ಘಟನೆ ನಡೆಯದಿದ್ದರೆ ಪರವಾಗಿಲ್ಲ. ನಡೆದಾಗ ಯಾರಾದರೂ ಜವಾಬ್ದಾರಿ ಹೊರಬೇಕು ಎಂಬುದು ಈ ವಿಧೇಯಕ ಉದ್ದೇಶ ಎಂದರು.

ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಮಾತನಾಡಿ, ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಹೈಕೋರ್ಟ್‌ ಹೇಳಿದ ಮೇಲೆ ಈ ವಿಧೇಯಕ ತರಲಾಗುತ್ತಿದೆ. ಜುಲೈ4ಕ್ಕೆ ಮುಂಚೆ ತಂದಿದ್ದರೆ ಆರ್‌ಸಿಬಿ ವಿಜಯೋತ್ಸವದ ದುರಂತದಲ್ಲಿ 11 ಮಂದಿ ಸಾವು ಆಗುತ್ತಿರಲಿಲ್ಲ. ಫ್ರೀಡಂಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಗಳಿಂದ ಸುತ್ತಲಿನ ಕಾಲೇಜುಗಳಿಗೆ ಪಾಠ ಕೇಳಲಾಗದಷ್ಟು ತೊಂದರೆಯಾಗುತ್ತಿದೆ. ಪರೀಕ್ಷೆಗೆ ಸಂದರ್ಶನಕ್ಕೆ, ಆ್ಯಂಬುಲೆನ್‌್ಸಗಳು ಹೋಗಲಾಗದಂತಹ ಪರಿಸ್ಥಿತಿ ಇದೆ. ಇಂಥವುಗಳನ್ನು ತಡೆಯಲು ನಿಯಮ ರೂಪಿಸಿ. ಕಾಲ್ತುಳಿತದ ದುರ್ಘಟನೆಯಿಂದ ಈ ವಿಧೇಯಕ ತರಲಾಗಿದೆ ಎಂದರು.

ಪೂರಿಜಗನ್ನಾಥ ರಥಯಾತ್ರೆ, ಕೊಟ್ಟೂರು ಜಾತ್ರೆ, ಬೆಂಗಳೂರು ಕರಗ ಇಂತಹ ಕಡೆಗಳಲ್ಲಿ ಲಕ್ಷಾಂತರ ಜನ ಸೇರಿದ್ದರೂ ಅಹಿತಕರ ಘಟನೆ ಆಗುವುದಿಲ್ಲ ಎಂದರು.ವಿರೋಧ ಪಕ್ಷದ ನಾಯಕ ಅಶೋಕ್‌ ಮಾತನಾಡಿ, ಹೈಕೋರ್ಟ್‌ 5 ಪ್ರಶ್ನೆಗಳನ್ನು ಕೇಳಿದೆ. ಸದನದಲ್ಲಿ ಆರ್‌ಸಿಬಿ ಕಾಲ್ತುಳಿತದ ವಿಚಾರ ಚರ್ಚೆಯಾಗಿದೆ. ಇದಕ್ಕೆ ಉತ್ತರ ಕೊಡಲು ವಿಧೇಯಕ ತಂದಿದ್ದಾರೆ. ಹಿಂದಿನಿಂದ ಅನ್ವಯವಾಗುವಂತೆ ತಂದರೆ ಒಳ್ಳೆಯದು. ಕಾಲ್ತುಳಿತಕ್ಕೆ ಕಾರಣರಾದವರಿಗೂ ಶಿಕ್ಷೆಯಾಗುತ್ತದೆ. ಒಂದು ಪಾಠವಾಗುತ್ತದೆ ಎಂದರು.

ಸದನ ಸಮಿತಿಗೆ ಆಗ್ರಹ: ಜಾತ್ರೆ, ಹಬ್ಬಗಳ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ. ಕಾರ್ಯಕ್ರಮಗಳನ್ನು ಹತ್ತಿಕ್ಕುವ ಉದ್ದೇಶವಿದೆ. ಈ ಬಗ್ಗೆ ಸಮಗ್ರ ಚರ್ಚೆಯಾಗಲು ಸದನ ಸಮಿತಿಗೆ ವಹಿಸಬೇಕೆಂದು ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಆಗ್ರಹಿಸಿದರು.ಜೆಡಿಎಸ್‌‍ನ ಶರಣಗೌಡ ಕಂದಕೂರು, ಬಿಜೆಪಿ ಶಾಸಕ ಸುರೇಶ್‌ ಗೌಡ ಸೇರಿದಂತೆ ಹಲವು ಶಾಸಕರು ಚರ್ಚೆಯಲ್ಲಿ ಪಾಲ್ಗೊಂಡು ವಿಧೇಯಕದ ಸಾಧಕಬಾಧಕಗಳ ಮೇಲೆ ಬೆಳಕು ಚೆಲ್ಲಿದರು.ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಈ ವಿಧೇಯಕವನ್ನು ಸದನ ಸಮಿತಿಗೆ ವಹಿಸಲಾಗುವುದು ಎಂದು ಪ್ರಕಟಿಸಿದರು. ಸದಸ್ಯರ ಹೆಸರನ್ನು ಬರೆದುಕೊಡಿ. ಸದನ ಸಮಿತಿ ರಚಿಸುತ್ತೇವೆ ಎಂದು ಹೇಳಿ ವಿಧೇಯಕದ ಮೇಲಿನ ಚರ್ಚೆಗೆ ತೆರೆ ಎಳೆದರು.

ಜನಸಂದಣಿ ನಿಯಂತ್ರಣ ವಿಧೇಯಕ: ವಿಪಕ್ಷಗಳಲ್ಲಿ ಭಿನ್ನಮತ
ಬೆಂಗಳೂರು, ಆ.21- ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಭಾರಿ ಜನಸಂಖ್ಯೆ ಸೇರುವ ಕಾರ್ಯಕ್ರಮಗಳ ಮೇಲೆ ನಿಯಂತ್ರಣ ಸಾಧಿಸುವ ಸಲುವಾಗಿ ರೂಪಿಸಲಾದ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಕುರಿತಂತೆ ವಿರೋಧ ಪಕ್ಷಗಳಲ್ಲೇ ಭಿನ್ನಾಭಿಪ್ರಾಯಗಳು ಕಂಡುಬಂದವು.ಗೃಹ ಸಚಿವ ಡಾ.ಜಿ. ಪರಮೇಶ್ವರ್‌, ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿದಾಗ ಆರಂಭದಲ್ಲೇ ಮಾತನಾಡಿದ ಬಿಜೆಪಿಯ ಸದಸ್ಯ ಸುರೇಶ್‌ ಕುಮಾರ್‌ ಮತ್ತು ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಕಾಯ್ದೆಯನ್ನು ಸ್ವಾಗತಿಸಿದರು. ತಡವಾಗಿಯಾದರೂ ಸರ್ಕಾರ ಎಚ್ಚೆತ್ತುಕೊಂಡು ಕಾಯ್ದೆ ರೂಪಿಸಿದೆ ಎಂದು ಪ್ರಶಂಸಿದ್ದರು.

ನಂತರ ಮಾತನಾಡಿದ ಬಿಜೆಪಿ ಉಚ್ಛಾಟಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಒಂದು ಧರ್ಮಕ್ಕೆ ದಿನದ ಐದು ಬಾರಿ ಧ್ವನಿವರ್ಧಕದಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ ಗಣೇಶೋತ್ಸವದ ಮುಂದಿನ ಡಿಜೆ ಸದ್ದುಮಾತ್ರ ಸರ್ಕಾರಕ್ಕೆ ಕಿರಿಕಿರಿಯಾಗುತ್ತಿದೆ. ಗಣಿತ್ಯೋತ್ಸವಗಳನ್ನು ನಿಯಂತ್ರಿಸಲು ವಿಧೇಯಕ ತರಲಾಗುತ್ತಿದೆ ಎಂದು ವಿರೋಧಿಸಿದ್ದರು.ನಂತರ ಬಿಜೆಪಿಯ ಸುನಿಲ್‌ ಕುಮಾರ್‌, ಎಂ.ಚಂದ್ರಪ್ಪ, ಹರೀಶ್‌ ಪೂಂಜಾ, ಸುರೇಶ್‌ ಗೌಡ, ಸಿಸಿ ಪಾಟೀಲ್‌‍, ಚನ್ನಬಸಪ್ಪ, ಉಮಾನಾಥ್‌ ಕೋಟ್ಯಾನ್‌ ಸೇರಿದಂತೆ ಎಲ್ಲರೂ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವಾಗ ಒಂದು ಕೋಟಿ ರೂ.ಗಳ ಬಾಂಡ್‌ ನೀಡಬೇಕು ಎಂದು ನಿಯಮದಲ್ಲಿದೆ. ಇದು ಅವೈಜ್ಞಾನಿಕ ಮತ್ತು ಅಸಾಧ್ಯ ಎಂದರು.

ಬಾಂಡ್‌ಗಳ ಮೊತ್ತವನ್ನು 50 ಲಕ್ಷ ರೂ.ಗಳಿಗೆ ಇಳಿಸುವುದಾಗಿ ಗೃಹ ಸಚಿವರು ತಿದ್ದುಪಡಿ ಮಾಡಿಕೊಂಡರು. ಅದಕ್ಕೂ ವಿರೋಧ ಪಕ್ಷಗಳು ಒಪ್ಪಲಿಲ್ಲ. ಸರ್ಕಾರಿ ಕಾರ್ಯಕ್ರಮಗಳು, ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿನ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಹಬ್ಬ ಹರಿದಿನಗಳಿಗೆ ಕಾಯ್ದೆಯಿಂದ ವಿನಾಯಿತಿ ನೀಡುವುದಾಗಿ ಗೃಹ ಸಚಿವರು ಭರವಸೆ ನೀಡಿದರು. ರಾಜಕೀಯ ಸಮಾವೇಶಗಳಿಗೂ ವಿನಾಯಿತಿ ನೀಡಿ ಎಂದು ವಿರೋಧ ಪಕ್ಷಗಳ ಸದಸ್ಯರು ಒತ್ತಾಯಿಸಿದರು. ಸರ್ಕಾರಿ ಕಾರ್ಯಕ್ರಮ ಎಂದಾದರೆ ಸಚಿವರು ಇರುತ್ತಾರೆ, ಪಕ್ಷದ ಕಾರ್ಯಕ್ರಮಗಳನ್ನು ಮಾಡುವಾಗ ರಾಜಕೀಯ ದ್ವೇಷಕ್ಕೆ, ಕೇಸು ಹಾಕಿ ಜೀವಾವಧಿ ಶಿಕ್ಷೆ ವಿಧಿಸುವ ಅಪಾಯವಿದೆ ಎಂದು ವಿರೋಧ ಪಕ್ಷಗಳ ಶಾಸಕರು ಆತಂಕ ವ್ಯಕ್ತಪಡಿಸಿದ್ದರು.

ಆರ್‌.ಅಶೋಕ್‌ ನಾವು ರಾಜಕೀಯದಲ್ಲಿದ್ದೇವೆ. ಯಾವುದೋ ಕಾರ್ಯಕ್ರಮ ಮಾಡಿದಾಗ ಸಣ್ಣಪುಟ್ಟ ತಪ್ಪುಗಳಿಗೆ ಕ್ರಿಮಿನಲ್‌ ಕೇಸ್‌‍ ಹಾಕಿ ಜೀವಾವಧಿ ಶಿಕ್ಷೆ ವಿಧಿಸಿದರೆ ಏನು ಮಾಡಬೇಕು? ಜನಸಂದಣಿಯ ಕಾರ್ಯಕ್ರಮಗಳಲ್ಲಿ ವಿರೋಧಿಗಳು ಸಂಚು ರೂಪಿಸಿ ತೊಂದರೆಗೆ ಸಿಲುಕಿಸುವ ಅಪಾಯ ಇದೆ. ಕಾಯ್ದೆಯನ್ನು ಅಂಗೀಕಾರ ಮಾಡಬೇಡಿ. ಈವರೆಗೂ ಸರ್ಕಾರ 40 ವಿಧೇಯಕಗಳನ್ನು ಅಂಗೀಕರಿಸಿಕೊಂಡಿದೆ. ಒಂದೇ ದಿನದಲ್ಲಿ 24 ಮಸೂದೆಗಳಾಗಿವೆ. ಎಲ್ಲದಕ್ಕೂ ನಾವು ಸಹಕಾರ ನೀಡಿದ್ದೇವೆ . ಮಹಾಭಾರತದಲ್ಲಿ ಶ್ರೀ ಕೃಷ್ಣ ಐದು ಗ್ರಾಮಗಳನಾದರು ಕೊಡಿ ಎಂದು ಕೇಳುವಂತೆ, ಇದೊಂದು ಮಸೂದೆಯನ್ನಾದರೂ ಸದನ ಸಮಿತಿಗೆ ಒಪ್ಪಿಸಿ ಎಂದು ಕೇಳುತ್ತಿದ್ದೇವೆ. ಸರ್ಕಾರ ವಿರೋಧ ಪಕ್ಷಗಳ ಮಾತಿಗೆ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು. ಸುನಿಲ್‌ ಕುಮಾರ್‌ ಕಾಯ್ದೆಯಲ್ಲಿ ಸಾಕಷ್ಟು ಗೊಂದಲಗಳಿವೆ ಸದನ ಸಮಿತಿಗೆ ವಹಿಸಿ ಎಂದು ಪಟ್ಟು ಹಿಡಿದರು. ಬಿಜೆಪಿಯ ಉಚ್ಛಾಟಿದ ಶಾಸಕ ಎಸ್‌‍.ಟಿ.ಸೋಮಶೇಖರ್‌ ಕಾಯ್ದೆಯನ್ನು ಬೆಂಬಲಿಸಿ ಅಂಗೀಕರಿಸಲು ಮನವಿ ಮಾಡಿದರು.

ಸಭಾಧ್ಯಕ್ಷ ಯು.ಟಿ.ಖಾದರ್‌ 3 ಸಾವಿರ ಜನ ಸೇರುವ ಕಾರ್ಯಕ್ರಮಗಳಿಗೆ ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ವಿಧೇಯಕದಲ್ಲಿದೆ. ಚಲನಚಿತ್ರ ನಟರಂತಹ ಸೆಲೆಬ್ರಿಟಿಗಳು ಬಂದಾಗ ಏಕಏಕಿ 6 ಸಾವಿರ ಜನ ಸೇರಬಹುದು. ಆಗ ಯಾರು ಹೊಣೆ ಎಂದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್‌‍.ಕೆ . ಪಾಟೀಲ್‌ ಮಧ್ಯ ಪ್ರವೇಶಿಸಿ, ಗೃಹ ಸಚಿವರು ಈಗಾಗಲೇ ಹಲವು ವಿನಾಯಿತಿಗಳನ್ನು ನೀಡಿದ್ದಾರೆ. 3 ಸಾವಿರ ಬದಲಿಗೆ 6 ಸಾವಿರ ಜನ ಸೇರಿದರೆ ಅದರ ಹೊಣೆಯನ್ನು ಕಾರ್ಯಕ್ರಮದ ಆಯೋಜಕರು ಹೊತ್ತುಕೊಳ್ಳಬೇಕು ಎಂದು ಹೇಳಿದರು.ಬಿಜೆಪಿಯ ಬಿ.ವೈ.ವಿಜಯೇಂದ್ರ ರಾಜಕೀಯ ಪಕ್ಷಗಳ ಮೇಲೆ ದಬ್ಬಾಳಿಕೆಯಾಗುವಂತಹ ಈ ಕಾಯ್ದೆಗೆ ಅವಕಾಶ ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.ವಿರೋಧ ಪಕ್ಷಗಳ ಒತ್ತಾಯಕ್ಕೆ ಮಾಡಿದ ಗೃಹ ಸಚಿವರು ವಿಧೇಯಕವನ್ನು ಸದನ ಸಮಿತಿಗೆ ಒಪ್ಪಿಸುವುದಾಗಿ ಪ್ರಕಟಿಸಿದರು.

ಜನಸಂದಣಿ ನಿಯಂತ್ರಣ ವಿಧೇಯಕ ಕಾಯ್ದೆ ಅಪಾಯಕಾರಿ
ಬೆಂಗಳೂರು,ಆ.21- ಜನಪರ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರಿಗಿಂತ ಹೆಚ್ಚಿನ ಅಪಾಯಕಾರಿ ಕಾನೂನಿಗೆ 2025ನೇ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ ವಿಧೇಯಕ ಅವಕಾಶ ಮಾಡಿಕೊಡಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದರು.ವಿಧೇಯಕ ಕುರಿತು ಮಾತನಾಡಿದ ಅವರು, ಹೋರಾಟಗಾರರಿಗೆ ಜವಾಬ್ದಾರಿ ನಿಗದಿ ಮಾಡಿದಂತೆಯೇ ಅಧಿಕಾರಿಗಳಿಗೂ ಇದೇ ರೀತಿ ಶಿಕ್ಷೆ ದಂಡನೆ ವಿಧಿಸಬೇಕು. ಬೆಳಗಾವಿಯಲ್ಲಿ ನಾವು ಹೋರಾಟ ಮಾಡಿದ ಸಂದರ್ಭದಲ್ಲಿ ಹೋರಾಟವನ್ನು ಹತ್ತಿಕ್ಕಲಾಯಿತು. ನನ್ನ ಮೇಲೆ 26 ಪ್ರಕರಣಗಳಿವೆ. ಅಧಿಕಾರಿ ತಪ್ಪು ಮಾಡಿದರೂ ಶಿಕ್ಷೆಯಾಗಬೇಕು. ಈ ವಿಧೇಯಕಕ್ಕೆ ಸಹಮತವಿಲ್ಲ ಎಂದು ಆಗ್ರಹಿಸಿದರು.

ಸದನ ಸಮಿತಿಗೆ ಆಗ್ರಹ:
ಬಿಜೆಪಿ ಶಾಸಕ ಸುನೀಲ್‌ಕುಮಾರ್‌ ಮಾತನಾಡಿ, ಜಾತ್ರೆ, ಹಬ್ಬಗಳ ಬಗ್ಗೆ ವಿಧೇಯಕದಲ್ಲಿ ಸ್ಪಷ್ಟತೆ ಇಲ್ಲ. ಕಾರ್ಯಕ್ರಮಗಳನ್ನು ಹತ್ತಿಕ್ಕುವ ಉದ್ದೇಶವಿದೆ. ಈ ಬಗ್ಗೆ ಸಮಗ್ರ ಚರ್ಚೆಯಾಗಲು ಸದನ ಸಮಿತಿಗೆ ವಹಿಸಬೇಕೆಂದು ಆಗ್ರಹಿಸಿದರು.

RELATED ARTICLES

Latest News