Thursday, August 21, 2025
Homeರಾಜ್ಯಇತಿಹಾಸ ಪುಟ ಸೇರಿದ ಬಿಬಿಎಂಪಿ, ಸಿಎಂ ಕುರ್ಚಿಯಾದ ಮೇಯರ್‌ ಗಾದಿ

ಇತಿಹಾಸ ಪುಟ ಸೇರಿದ ಬಿಬಿಎಂಪಿ, ಸಿಎಂ ಕುರ್ಚಿಯಾದ ಮೇಯರ್‌ ಗಾದಿ

BBMP now become history, Mayor's chair becomes CM's chair

ರಮೇಶ್‌ ಎಂ ಪಾಳ್ಯ
ಬೆಂಗಳೂರು, ಆ.21- ಕಳೆದ 70 ವರ್ಷಗಳಿಂದ ಮೇಯರ್‌ಗಳು ದರ್ಬಾರ್‌ ನಡೆಸಿದ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಹಾಪೌರರ ಕೊಠಡಿ ಸಿಎಂ ಕಚೇರಿಯಾಗಿ ಬದಲಾವಣೆಯಾಗಿದೆ.
ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನು ರದ್ದುಗೊಳಿಸಿ ಸರ್ಕಾರ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚನೆಯಾಗುತ್ತಿದ್ದಂತೆ ಮೇಯರ್‌ ಕಚೇರಿ ಇನ್ನು ಇತಿಹಾಸದ ಪುಟ ಸೇರಿಕೊಂಡಂತಾಗಿದೆ.

ಜಿಬಿಎ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳು ಇರುತ್ತಾರೆ, ಉಪಾಧ್ಯಕ್ಷರಾಗಿ ಡಿಸಿಎಂ ಇರುತ್ತಾರೆ ಹೀಗಾಗಿ ಹಾಲಿ ಇರುವ ಮೇಯರ್‌ ಕಚೇರಿಯನ್ನು ಈಗಾಗಲೇ ಜಿಬಿಎ ಅಧ್ಯಕ್ಷರ ಕಚೇರಿಯ
ನ್ನಾಗಿ ಪರಿವರ್ತಿಸಲಾಗಿದೆ. ಬರೀ ಕಚೇರಿ ಮಾತ್ರ ಬದಲಾವಣೆಯಾಗಿಲ್ಲ, ಇಡಿ ಕಟ್ಟಡವೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕಚೇರಿಯಾಗಲಿದೆ.

ಮಾತ್ರವಲ್ಲ ಸೆಪ್ಟೆಂಬರ್‌ 2 ರಿಂದ ಅಧಿಕೃತವಾಗಿ ಜಿಬಿಎ ಆಡಳಿತ ಶುರುವಾಗಲಿದೆ. ಹೀಗಾಗಿ ಮೇಯರ್‌ ಕಚೇರಿಯನ್ನೇ ಜಿಬಿಎ ಅಧ್ಯಕ್ಷರ ಕಚೇರಿಯನ್ನಾಗಿ ಮಾರ್ಪಾಡು ಮಾಡಲಾಗಿದೆ.ಇನ್ನು ಜಿಬಿಎ ಉಪಾಧ್ಯಕ್ಷರಾಗಿರುವ ಡಿಸಿಎಂ ಶಿವಕುಮಾರ್‌ ಅವರಿಗೂ ಇದೇ ಕಟ್ಟಡದಲ್ಲಿ ಹೊಸ ಕೊಠಡಿ ಭಾಗ್ಯ ಸಿಗಲಿದೆ. ಹೀಗಾಗಿ ಕೆಲ ಅಧಿಕಾರಿಗಳ ಕೊಠಡಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ಇದುವರೆಗೂ ಮೇಯರ್‌ಗಳು ಅಧಿಕಾರ ನಡೆಸುತ್ತಿದ್ದ ಕಚೇರಿಯನ್ನು ಸಿಎಂ ಕೊಠಡಿಯಾಗಿ ವಿನ್ಯಾಸ ಬದಲಾವಣೆ ಮಾಡಲಾಗಿದೆ.ಮಾತ್ರವಲ್ಲ ಜಿಬಿಎ ಅಧಾರಸ್ಥಂಭಗಳಾದ ಸಿಎಂ ಮತ್ತು ಡಿಸಿಎಂ ಅವರ ಕಚೇರಿಗಳನ್ನು ಹೈಟೆಕ್‌ ರೀತಿಯಲ್ಲಿ ಪರಿವರ್ತಿಸಲಾಗುತ್ತಿದೆ. ಪಾಲಿಕೆ ಇತಿಹಾಸ; ಕಳೆದ 1949ರಲ್ಲಿ ಸುಬ್ಬಣ್ಣ ಅವರು ಮೇಯರ್‌ ಆಗಿ ಆಯ್ಕೆಯಾದ ನಂತರ 2020 ರವರೆಗೆ ಸುಮಾರು 53 ಮೇಯರ್‌ಗಳು ಆಡಳಿತ ನಡೆಸಿದ್ದರು. 1949 ರಿಂದ 1995 ರವರೆಗೆ ಬೆಂಗಳೂರು ನಗರ ಸಭೆ ಅಸ್ಥಿತ್ವದಲ್ಲಿತ್ತು. 1996 ರಿಂದ 2006 ರವರೆಗೆ ಬೆಂಗಳೂರು ಮಹಾನಗರ ಪಾಲಿಕೆಯಾಗಿ ಪರಿವರ್ತನೆಗೊಂಡಿತ್ತು.

2010 ರಿಂದ 2020 ರವರೆಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಪರಿವರ್ತನೆ ಮಾಡಲಾಗಿತ್ತು. ಈ ಸಂದರ್ಭಗಳಲ್ಲಿ ಸುಮಾರು 53 ಮೇಯರ್‌ ಗಳು ಅಡಳಿತ ನಡೆಸಿದ್ದರು. ಕಳೆದ 70 ವರ್ಷಗಳಿಂದ ಆಡಳಿತ ನಡೆಸಿದ್ದ ಬಹುತೇಕ ಮೇಯರ್‌ಗಳು ಇದೀಗ ಸಿಎಂ ಕಚೇರಿಯಾಗಿ ಪರಿವರ್ತನೆಗೊಂಡಿರುವ ಕೊಠಡಿಯನ್ನೇ ಬಳಕೆ ಮಾಡಿದ್ದರು.ಐದು ಪಾಲಿಕೆಗಳ ಕಚೇರಿಗಳಿಗೆ ಜಾಗ ಗುರುತು; ಬಿಬಿಎಂಪಿ ಯನ್ನು ರದ್ದುಗೊಳಿಸಿದ ಐದು ಪಾಲಿಕೆಗಳನ್ನಾಗಿ ರಚನೆ ಮಾಡಲು ನಿರ್ಧರಿಸಿರುವ ಸರ್ಕಾರ ಈಗಾಗಲೇ ಐದು ಪಾಲಿಕೆಗಳ ಕಚೇರಿಗಳಿಗಾಗಿ ಜಾಗ ಗುರುತಿಸಿದೆ.

ಯಲಹಂಕದ ಶಕ್ತಿಸೌಧದ ಸಮೀಪವಿರುವ ಮೂರು ಎಕರೆ ಪ್ರದೇಶದಲ್ಲಿ ಉತ್ತರ ಮಹಾನಗರ ಪಾಲಿಕೆ, ಬನಶಂಕರಿ ದೇವಾಲಯದ ಎದುರಿಗಿರುವ ಖಾಲಿ ಜಾಗದಲ್ಲಿ ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆ, ಎಂ.ಜಿ. ರಸ್ತೆಯಲ್ಲಿರುವ ಯುಟಿಲಿಟಿ ಬಿಲ್ಡಿಂಗ್‌ನಲ್ಲಿ ಬೆಂಗಳೂರು ಪೂರ್ವ, ಗೋವಿಂದರಾಜನಗರದ ಕನಕ ಭವನದಲ್ಲಿ ಬೆಂಗಳೂರು ಪಶ್ಚಿಮ ಹಾಗೂ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಅನೆಕ್‌್ಸ ಕಟ್ಟಡದಲ್ಲಿ ಬೆಂಗಳೂರು ಕೇಂದ್ರ ಪಾಲಿಕೆ ಕಚೇರಿ ಇರಲಿದೆ. ಜಿಬಿಎ ಕಚೇರಿ: ಇದುವರೆಗೂ ಬಿಬಿಎಂಪಿ ಕಚೇರಿಯಾಗಿದ್ದ ಪುರಾತನ ಪಾಲಿಕೆ ಕಟ್ಟಡವೇ ಜಿಬಿಎ ಕಚೇರಿಯಾಗಲಿದೆ. ಇಲ್ಲಿ ಸಿಎಂ, ಡಿಸಿಎಂ ಕಚೇರಿಗಳ ಜೊತೆಗೆ ಮುಖ್ಯ ಆಯುಕ್ತರ ಕಚೇರಿ ಹಾಗೂ ಆಡಳಿತಗಾರರ ಕಚೇರಿಗಳು ನಿರ್ಮಾಣಗೊಳ್ಳುತ್ತಿವೆ.

ಹೀಗಾಗಿ ಕೆಂಪೇಗೌಡ ಕಟ್ಟಿದ ಬೆಂಗಳೂರಿನ ಹೆಮೆಯ ಪ್ರತಿಕವಾಗಿದ್ದ ಪಾಲಿಕೆ ಕಚೇರಿ ಇತಿಹಾಸದ ಪುಟ ಸೇರಲಿದ್ದು, ಆ ಕಟ್ಟಡ ಇನ್ನು ಮುಂದೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಕಚೇರಿಯಾಗಿ ಪರಿವರ್ತನೆಯಾಗಲಿದೆ.

ಮುಂದಿದೆ ಸವಾಲು; ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ತಮ ನಿರೀಕ್ಷೆಯಂತೆ ಜಿಬಿಎ ರಚಿಸುವ ಎಲ್ಲಾ ಕಾರ್ಯಗಳನ್ನು ಬಹುತೇಕ ಫೈನಲ್‌ ಮಾಡಿಕೊಂಡಿದ್ದಾರೆ. ಅವರು ಅಂದುಕೊಂಡಂತೆ ಎಲ್ಲಾ ಕಾರ್ಯಗಳು ನಡೆಯುತ್ತಿವೆ. ಮೇಲ್ನೋಟಕ್ಕೆ ಅವರ ನಡೆ ಸರಿಯಾಗಿದೆ ಎಂದುಕೊಂಡರು, ಐದು ಪಾಲಿಕೆಗಳ ಮಾಸಿಕ ಸಭೆ ನಡೆಸಲು ಜಾಗ ಹುಡುಕುವುದು ಸವಾಲಾಗಿದೆ. ಇನ್ನು ಹಿರಿಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಕಚೇರಿ ಸಿಗದೆ ಪರದಾಡುವಂತಹ ಸನ್ನಿವೇಶ ನಿರ್ಮಾಣವಾಗಲಿದೆ. ಒಟ್ಟಾರೆ ಜಿಬಿಎ ರಚನೆಗೂ ಮುನ್ನ ಸರ್ಕಾರ ಸಾಕಷ್ಟು ಸವಾಲು ಎದುರಿಸಬೇಕಾಗುತ್ತದೆ ಎನ್ನುವುದು ಮಾತ್ರ ನಿರ್ವಿವಾದ ವಿಚಾರವಾಗಿದೆ.

RELATED ARTICLES

Latest News