Friday, August 22, 2025
Homeರಾಜ್ಯಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಂಸದ ಡಾ.ಸಿ.ಎನ್.ಮಂಜುನಾಥ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಯಾದ ಸಂಸದ ಡಾ.ಸಿ.ಎನ್.ಮಂಜುನಾಥ್

MP Dr. C.N. Manjunath meets Union Finance Minister Nirmala Sitharaman

ನವದೆಹಲಿ, ಆ.21-ಬಡವರಿಗೆ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಇಮ್ಯೂನೋಥೆರಪಿಗೆ ಬಳಸುವ ಔಷಧಗಳ ಮತ್ತು ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿ ನೀಡುವಂತೆ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಈ ಔಷಧಗಳ ಮತ್ತು ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡುವಂತೆ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವುದಾಗಿ ಮಂಜುನಾಥ್ ಅವರು ಹೇಳಿದ್ದಾರೆ. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವರು, ಆದಷ್ಟು ಬೇಗ ಈ ಬಗ್ಗೆ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದು ಮಂಜುನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬದಲಾದ ಆಹಾರ ಶೈಲಿ, ಜೀವನ ಪದ್ಧತಿ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈಗಾಗಲೇ ಕೇಂದ್ರ ಸರ್ಕಾರ ಕ್ಯಾನ್ಸ‌ರ್ ನಿಂದಾಗಿ ಬಳಲುತ್ತಿರುವ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಿಮೋಥೆರಪಿಗೆ ಬಳಸುವ ಅನೇಕ ಔಷಧಗಳಿಗೆ ಕಸ್ಟಮ್ಸ್ ಸುಂಕ ರಿಯಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ‌.

ಕ್ಯಾನ್ಸರ್ ನಿಂದ ಸಂಪೂರ್ಣವಾಗಿ ಗುಣಮುಖರಾಗಲು ಮುಂದುವರಿದ ಚಿಕಿತ್ಸಾ ಭಾಗವಾಗಿ ಕಿಮೋಥೆರಪಿಯ ಜೊತೆಗೆ ಇಮ್ಯೂನೋಥೆರಪಿಯ ಅವಶ್ಯಕತೆ ಇದೆ. ಪ್ರಸ್ತುತ ಇಮ್ಯೂನೋಥೆರಪಿ ಚಿಕಿತ್ಸೆಗೆ ಪ್ರತಿ ರೋಗಿಗೆ ಸುಮಾರು 20-50 ಲಕ್ಷ ರೂ.ನಷ್ಟು ಖರ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕಸ್ಟಮ್ಸ್ ಸುಂಕ ರಿಯಾಯಿತಿ ಅಗತ್ಯವಿದೆ.

ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಇಮ್ಯೂನೋಥೆರಪಿಗೆ ಬಳಸುವ ಔಷಧಗಳನ್ನು ಮತ್ತು ರೇಡಿಯೋಥೆರಪಿ ಉಪಕರಣಗಳ ಮೇಲಿನ ಕಸ್ಟಮ್ಸ್ ಸುಂಕ ವಿನಾಯಿತಿಯಿಂದ ಕ್ಯಾನ್ಸರ್ ಚಿಕಿತ್ಸಾ ವೆಚ್ಚ ಕಡಿಮೆಯಾಗುವುದರಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಲಿದೆ ಮತ್ತು ಕೈಗೆಟಕುವ ದರದಲ್ಲಿ ಬಡವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

RELATED ARTICLES

Latest News