ಬೆಂಗಳೂರು, ಆ.22- ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಅಭಿವೃದ್ಧಿ ಕುರಿತಂತೆ ವಿಧಾನಸಭೆಯಲ್ಲಿಂದು ಬಹು ಮುಖ್ಯವಾದ ಚರ್ಚೆಗಳು ನಡೆದವು.ವಿಧಾನ ಸಭೆಯ ಕಲಾಪ ಆರಂಭದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್, ಹಿರಿಯೂರಿನ ಮಾಜಿ ಶಾಸಕ ಆರ್. ರಾಮಯ್ಯ ನೆನ್ನೆ ನಿಧನರಾಗಿರುವ ಸುದ್ದಿಯನ್ನು ಸದನಕ್ಕೆ ತಿಳಿಸಿ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿದರು.
ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿಯ ಬಳಿಕ ಪ್ರಶ್ನೋತ್ತರವನ್ನು ಬದಿಗಿಟ್ಟು ಸರ್ಕಾರಿ ಶಾಲೆಗಳ ಸುಧಾರಣೆಯ ಕುರಿತ ಚರ್ಚೆಗೆ ಅವಕಾಶ ನೀಡಲಾಯಿತು. ಆರಂಭದಲ್ಲಿ ಪೀಠಿಕೆ ಹಾಕಿದ ಸಭಾಧ್ಯಕ್ಷರು ಬಿಜೆಪಿಯ ಹಿರಿಯ ಸದಸ್ಯರಾದ ಸುರೇಶ್ ಕುಮಾರ್ ಸರ್ಕಾರಿ ಶಾಲೆಗಳ ಸ್ಥಿತಿಗತಿ ಹಾಗೂ ಸುಧಾರಣೆಯ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಪತ್ರ ಬರೆದಿದ್ದರು.
ಕಾರ್ಯಕಲಾಪಗಳ ಒತ್ತಡದಿಂದ ಸಾಧ್ಯವಾಗಿರಲಿಲ್ಲ ಆದರೆ ಇದು ಅತ್ಯಗತ್ಯವಾಗಿದ್ದು ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲೂ ಚರ್ಚಿಸಿ ಅವಕಾಶ ನೀಡಲು ನಿರ್ಣಯಿಸಲಾಗಿದೆ. ಹೀಗಾಗಿ ಇಂದು ಎಲ್ಲ ಶಾಸಕರು ಸರ್ಕಾರಿ ಶಾಲೆಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಎಂದರು.
ಮಕ್ಕಳು ನಮ ಪರಂಪರೆ ಸಂಸ್ಕೃತಿಯನ್ನು ಮುಂದಿನ ಭವಿಷ್ಯಕ್ಕೆ ತೆಗೆದುಕೊಂಡು ಹೋಗುವ ಸತ್ಪ್ರಜೆಗಳಾಗಬೇಕು. ಅವರನ್ನು ರೂಪಿಸುವ ಶಾಲೆಗಳ ಸ್ಥಿತಿ-ಗತಿಯ ಬಗ್ಗೆಯೂ ನಾವು ಪರಮರ್ತಿಸಬೇಕಿದೆ. ಅನಗತ್ಯ ವಿಚಾರಗಳನ್ನು ಬಿಟ್ಟು ವಿಷಯಧಾರಿತವಾಗಿ ಚರ್ಚೆ ಮಾಡಿ ಎಂದು ಸಲಹೆ ನೀಡಿದರು.
ಚರ್ಚೆ ಆರಂಭಿಸಿದ ಸುರೇಶ್ ಕುಮಾರ್ ತಮ ತಾಯಿ ಶಿಕ್ಷಕಿಯಾಗಿದ್ದರು. ನಾನು ಅನುದಾನಿತ ಶಾಲೆಯಲ್ಲಿ ಓದಿದ್ದೇನೆ. ಈ ಹಿಂದೆ ಶಿಕ್ಷಣ ಸಚಿವನಾಗಿಯೂ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ತಾವು ನೋಡಿದ ಅನೇಕ ಪ್ರಸಂಗಗಳ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಣೆಯಾಗಬೇಕು ಎಂಬ ನಿಟ್ಟಿನಲ್ಲಿ ಚರ್ಚೆಗೆ ಅವಕಾಶ ಕೇಳಿದಾಗಿ ಹೇಳಿದರು.
ಸಂಘ ಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬಂದು ಅನೇಕ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೆರವು ನೀಡಿದ್ದಾರೆ. ಅದರಿಂದ ಬಹಳಷ್ಟು ವಿದ್ಯಾರ್ಥಿಗಳು ಚೆನ್ನಾಗಿ ಓದಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಉತ್ತಮ ಮೂಲ ಸೌಲಭ್ಯ ಹಾಗೂ ತರಬೇತಿ ಪಡೆದ ಶಿಕ್ಷಕರು ಮತ್ತು ಶೈಕ್ಷಣಿಕ ವಾತಾವರಣ ಇದೆ. ಸರ್ಕಾರಿ ಶಾಲೆಗಳಲ್ಲಿ ತಮ ಮಕ್ಕಳನ್ನು ಓದಿಸಬೇಕು ಎಂದು ಪೋಷಕರಿಗೆ ಅನಿಸುವಂತಹ ವಾತಾವರಣವನ್ನು ನಾವು ನೀಡಬೇಕಿದೆ ಎಂದರು.
ಮಹಾಲಕ್ಷಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಗೋಪಾಲಯ್ಯ ಐದು ಕೋಟಿ ರೂ. ವೆಚ್ಚ ಮಾಡಿ ಉತ್ತಮವಾಗಿ ಸರ್ಕಾರಿ ಶಾಲೆ ನಿರ್ಮಿಸಿದ್ದಾರೆ. ರಾಜಾಜಿನಗರದಲ್ಲಿರುವ ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕರಾದ ಡಾ.ಎಚ್.ಎಂ ವೆಂಕಟಪ್ಪ ಅವರು ನಾನು ಸಚಿವನಾಗಿದ್ದಾಗ ಒಮೆ ನಮ ಮನೆಗೆ ಬಂದು, ತಮ ಊರಿಗೆ ಬರುವಂತೆ ಆಹ್ವಾನಿಸಿದರು. ಅವರ ಊರಿಗೆ ಹೋದಾಗ ಬಿದ್ದು ಹೋಗಿರುವ ಸರ್ಕಾರಿ ಶಾಲೆಗಳನ್ನು ತೋರಿಸಿ ನಾನು ಇಲ್ಲಿ ಓದ್ದೆಿ ಅವುಗಳನ್ನು ಅಭಿವೃದ್ಧಿ ಪಡಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಆರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ದವಾಗಿರುವುದಾಗಿ ತಿಳಿಸಿದರು. ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು. ಇತ್ತೀಚೆಗಷ್ಟೇ ಆ ಶಾಲೆಗಳು ಲೋಕಾರ್ಪಣೆಗೊಂಡಿವೆ ಎಂದರು.
ಒಟ್ಟು 14 ಕೋಟಿ ವೆಚ್ಚದಲ್ಲಿ ಮಾದರಿ ಶಾಲೆಗಳನ್ನು ನಿರ್ಮಿಸಲಾಗಿದೆ. ಶಾಲೆಯ ನಿರ್ವಹಣೆಗಾಗಿ ವಾರ್ಷಿಕ 10 ಲಕ್ಷ ರೂ.ಗಳನ್ನು ಕೊಡುತ್ತಿದ್ದಾರೆ. ಇದೇ ರೀತಿ ಬಂಟ್ವಾಳದ ಅಂಜಲ್ ಎಂಬವರು, ದದ್ದಲಾಗ ಗ್ರಾಮದ ದುರ್ಗಾಪರಮೇಶ್ವರಿ ಎಂಬ ಟ್ರಸ್ಟ್ ರಚಿಸಿಕೊಂಡು, ಕೇವಲ 35 ವಿದ್ಯಾರ್ಥಿಗಳಿದ್ದ ಶಾಲೆಯನ್ನು ಸಮಗ್ರ ಅಭಿವೃದ್ಧಿಪಡಿಸಿದ್ದಾರೆ.
ಈಗ ವಿದ್ಯಾರ್ಥಿಗಳ ಸಂಖ್ಯೆ ಒಂದು ಸಾವಿರಕ್ಕೆ ಹೆಚ್ಚಾಗಿದೆ. ಖಾಸಗಿ ಶಾಲೆಗಳಲ್ಲಿ ವರ್ಷಕ್ಕೆ ಎಂಟು ಹತ್ತು ರೂ. ಶುಲ್ಕ ಪಡೆಯುವುದನ್ನು ನೋಡಿದ್ದೇವೆ. ಪೋಷಕರು ತಮ ದುಡಿಮೆಯ ಶೇ. 20ರಷ್ಟು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇದೆ ಮತ್ತು ಪೋಷಕರು ಸಾಲಗಾರರಾಗುವುದನ್ನು ತಪ್ಪಿಸಬಹುದಾಗಿದೆ ಎಂಬ ಅಂಶದ ಬಗ್ಗೆ ನಾವು ಹೆಚ್ಚು ಗಮನ ಹರಿಸಬೇಕಿದೆ ಎಂದರು.
ಶಾಲೆಗಳ ದುಸ್ಥಿತಿ ಹಾಗೂ ಅವುಗಳ ಸುಧಾರಣೆಯ ಬಗ್ಗೆ ಹಲವಾರು ಪ್ರಸಂಗಗಳ ಜೊತೆ ವಿವರಣೆ ನೀಡಿದ ಸುರೇಶ್ ಕುಮಾರ್, ಕೇರಳದಲ್ಲಿ ಸರ್ಕಾರಿ ಶಾಲೆಗಳಿಗೆ ಮೊದಲ ಆದ್ಯತೆ ಎಂಬ ವಾತಾವರಣ ಇದೆ. ಕರ್ನಾಟಕ ಸರ್ಕಾರ ಮುಂದಿನ ಎರಡು ವರ್ಷಗಳನ್ನು ಗುಣಮಟ್ಟದ ಶಿಕ್ಷಣದ ವಾತಾವರಣ ಎಂಬ ಘೋಷಣೆ ಮಾಡಬೇಕು. ಅದಕ್ಕೆ ಪೂರಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಅನುಸರಿಸುತ್ತಿರುವ ಉತ್ತಮ ಪದ್ಧತಿ ಹಾಗೂ ಸಾಂಪ್ರದಾಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿರುವ 41 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳು, 4,800 ಸರ್ಕಾರಿ ಪ್ರೌಢಶಾಲೆಗಳು ಸಮಗ್ರ ಅಭಿವೃದ್ಧಿ ಮಾಡಬೇಕು. ಕೆಲವು ಕಡೆ ಒಬ್ಬ ವಿದ್ಯಾರ್ಥಿ ಒಬ್ಬ ಶಿಕ್ಷಕ ಎಂಬ ವಾತಾವರಣ ಇದೆ. ಕೋಲಾರದ ಶ್ರೀನಿವಾಸಪುರದಲ್ಲಿ ವಿದ್ಯಾರ್ಥಿಗಳೇ ಇಲ್ಲದೆ ಬೇರೆ ಶಾಲೆಯಿಂದ ಒಬ್ಬ ವಿದ್ಯಾರ್ಥಿನಿಯನ್ನು ಸಾಲ ತಂದು ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದನ್ನು ತಾವು ಕಂಡಿದ್ದಾಗಿ ಹೇಳಿದರು.
ರಾಜ್ಯದಲ್ಲಿ 1.80 ಲಕ್ಷ ಸರ್ಕಾರಿ ಶಿಕ್ಷಕರಿದ್ದಾರೆ. ಅವರಿಗೆ ಉತ್ತಮ ಪ್ರೇರೇಪಣೆ ಅಗತ್ಯವಿದೆ.
ಅತಿಥಿ ಶಿಕ್ಷಕರನ್ನು ಶಿಕ್ಷಕರಿಗೆ ಉತ್ತಮ ವೇತನ ಹಾಗೂ ಸೌಲಭ್ಯಗಳನ್ನು ನೀಡಬೇಕು. ಪ್ರತಿಯೊಂದು ಪಂಚಾಯಿತಿ ಮಟ್ಟದಲ್ಲೂ ಪೂರ್ಣ ಪ್ರಮಾಣದ ಶಾಲೆ ಸ್ಥಾಪಿಸಬೇಕು. ಪಠ್ಯೇತರ ಚಟುವಟಿಕೆಗಳಾದ ವಿಷಯ ಆಧಾರಿತವಾಗು ಶಿಕ್ಷಕರನ್ನು ನೇಮಿಸಬೇಕು. ಕಲೆ, ಕ್ರೀಡೆಗಳಿಗೂ ಶಿಕ್ಷಕರ ನೇಮಕಾತಿ ಆಗಬೇಕಿದೆ. ಪ್ರತಿಯೊಬ್ಬ ಶಾಸಕರು ವಾರಕ್ಕೊಮೆಯಾದರೂ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಉತ್ತಮ ಕೆಲಸ ಮಾಡುವ ಶಿಕ್ಷಕರನ್ನು ಗುರುತಿಸಿ ಬೆನ್ನು ತಟ್ಟಬೇಕು ಎಂದರು.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ನಾವು ಕೊನೆಯ ಸ್ಥಾನದಲ್ಲಿದ್ದೇವೆ. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳಿಗಿರುವ ಸಾಮರ್ಥ್ಯ, ದೌರ್ಬಲ್ಯ ಅವಕಾಶ ಮತ್ತು ಆತಂಕಗಳ ಬಗ್ಗೆ ವಿಶ್ಲೇಷಣೆ ನಡೆಯಬೇಕು. ದಾನಿಗಳು ನೀಡಿರುವ ಆಸ್ತಿಗಳನ್ನು ಉಳಿಸಿಕೊಂಡು ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಬೇಕು. ಶಿಕ್ಷಕರನ್ನು ಬೋಧನೆ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.
ಸರ್ಕಾರಿ ಶಾಲೆಗಳಿಗೆ ದೈಹಿಕ ಶಿಕ್ಷಕರನ್ನು ನೇಮಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಕಲ್ಪನೆಯನ್ನು ಸಹಕಾರಗೊಳಿಸಬೇಕು. ಫಲಿತಾಂಶ ಆಧಾರಿತ ಶಿಕ್ಷಣಕ್ಕಿಂತ ಮೌಲ್ಯಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ನಾನು ಬೆಂಬಲವಾಗಿರುತ್ತೇನೆ ಎಂದು ಭರವಸೆ ನೀಡಿದರು.ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ಶಿಕ್ಷಣ ನೀತಿಯ ವ್ಯತ್ಯಾಸಗಳನ್ನು ಸರ್ಕಾರ ತಿಳಿಸಬೇಕಿದೆ. 2016ರಲ್ಲಿ ಸರ್ಕಾರಿ ಶಾಲೆಗಳ ಗುಣಾತಕ ಶಿಕ್ಷಣಕ್ಕೆ ಸಂಬಂಧಪಟ್ಟಂತ ವರದಿಯಲ್ಲಿರುವ 26 ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
- ಕರ್ನಾಟಕ ಸಹಕಾರಿ ಪಾರದರ್ಶಕ ವಿಧೇಯಕಕ್ಕೆ ವಿಧಾನಪರಿಷತ್ನಲ್ಲಿ ಮರು ಅಂಗೀಕಾರ
- ಆರ್ಸಿಬಿ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸಿದ್ದರೆ ಬಿಜೆಪಿಯಿಂದ ದೊಡ್ಡ ಚಳವಳಿಯೇ ನಡೆಯುತ್ತಿತ್ತು : ಸಿಎಂ
- ಛತ್ತೀಸ್ಗಢ : ತ್ರಿವರ್ಣ ಧ್ವಜ ಹಾರಿಸಿದ್ದ ವ್ಯಕ್ತಿಯನ್ನು ಕೊಂದ ನಕ್ಸಲರು
- ಅಮೆರಿಕದ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
- ಶೇ.5.5 ರಷ್ಟು ಶುಲ್ಕದೊಂದಿಗೆ ಬೆಂಗಳೂರಿನಲ್ಲಿರುವ ‘ಬಿ’ ಖಾತೆಗಳನ್ನು ‘ಎ’ ಖಾತೆಗಳಾಗಿ ಪರಿವರ್ತನೆ : ಡಿಕೆಶಿ