Friday, August 22, 2025
Homeರಾಜ್ಯಮೇಲ್ಮನೆಯಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ವಿಧೇಯಕ ಅಂಗೀಕಾರ

ಮೇಲ್ಮನೆಯಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ ವಿಧೇಯಕ ಅಂಗೀಕಾರ

Traditional Nomadic Shepherd Bill passed in upper house

ಬೆಂಗಳೂರು,ಆ.22- ರಾಜ್ಯದಲ್ಲಿ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳಿಗೆ ರಕ್ಷಣೆ, ಭದ್ರತೆ ಹಾಗೂ ನಿಂದನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ 2025ನೇ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ(ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧದ ರಕ್ಷಣೆ) ವಿಧೇಯಕಕ್ಕೆ ವಿಧಾನಪರಿಷತ್‌ನಲ್ಲಿ ಅಂಗೀಕಾರ ದೊರೆಯಿತು.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ವಿಧೇಯಕವನ್ನು ಮಂಡಿಸಿ ವಿಧೇಯಕವನ್ನು ಅಂಗೀಕಾರ ಮಾಡಬೇಕೆಂದು ಸದಸ್ಯರಲ್ಲಿ ಕೋರಿದರು.ನಂತರ ವಿಧೇಯಕದ ಮೇಲೆ ಸದಸ್ಯರಾದ ಡಿ.ಟಿ.ಶ್ರೀನಿವಾಸ್‌‍, ತಲ್ವಾರ್‌ ಸಾಬಣ್ಣ, ಉಮಾಶ್ರೀ, ಎಚ್‌.ವಿಶ್ವನಾಥ್‌, ನಾಗರಾಜ್‌ ಯಾದವ್‌, ಮಂಜೇಗೌಡ, ಪಿ.ಎಚ್‌.ಪೂಜಾರ್‌, ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಮಾತನಾಡಿದರು.

ಬಳಿಕ ವಿಧೇಯಕಕ್ಕೆ ಸುದೀರ್ಘವಾಗಿ ಮಾತನಾಡಿದ ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಅವರು, ಪ್ರತಿಯೊಬ್ಬ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿ ಫಲಾನುಭವಿಯಾಗಿ ನೋಂದಾಯಿಸಿಕೊಳ್ಳಬೇಕು. ಕೈಗೆಟಕುವ ಬೆಲೆಯಲ್ಲಿ ವಸತಿಗಾಗಿ ಭೂಮಿ ಮಂಜೂರಾತಿ, ಜೀವವಿಮೆ, ಆರೋಗ್ಯವಿಮೆ, ಪಶುವಿಮೆ, ಆರೋಗ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳು, ಕೌಶಲ್ಯ ಉನ್ನತೀಕರಣ, ಆಹಾರ ಭದ್ರತೆ, ಕಲ್ಯಾಣ ಕಾರ್ಯಕ್ರಮಗಳಾಗಿವೆ. ಅಲ್ಲದೆ ಜಾನುವಾರುಗಳಿಗೆ ಲಸಿಕೆ, ಚಿಕಿತ್ಸೆ, ಕುರಿಗಾಹಿಗಳ ಉತ್ಪನ್ನಗಳಿಗೆ ಮಾರಾಟ ಬೆಂಬಲ, ನಷ್ಟದ ಸಂದರ್ಭದಲ್ಲಿ ನಷ್ಟ ಪರಿಹಾರ ಮೊದಲಾದ ಸೌಲಭ್ಯಗಳನ್ನು ಫಲಾನುಭವಿಗಳಿಗೆ ಒದಗಿಸಲಾಗುತ್ತದೆ ಎಂದು ಹೇಳಿದರು.

ಒಬ್ಬ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿ ಯಾವುದೇ ಕಾನೂನಾತಕ ಆಧಾರವಿಲ್ಲದೆ, ಸಾರ್ವಜನಿಕ ಸ್ವತ್ತು, ಸರ್ಕಾರಿ ಭೂಮಿ ಅಥವಾ ಅರಣ್ಯಭೂಮಿಗೆ ಪ್ರವೇಶಿಸುವುದನ್ನು ನಿರಾಕರಿಸಿದರೆ ಅಂಥ ವ್ಯಕ್ತಿಯು ಒಂದು ವರ್ಷದ ಸೆರೆವಾಸ, 50 ಸಾವಿರ ದಂಡಕ್ಕೆ ಅವಕಾಶ ಇದೆ ಎಂದು ತಿಳಿಸಿದರು.

ಮೀಸಲು ಅರಣ್ಯವನ್ನು ಇದರಿಂದ ಹೊರತಪಡಿಸಲಾಗಿದೆ. ಕುರಿಗಾಹಿ ದಾರಿಗೆ ಅಡ್ಡಿ ಉಂಟು ಮಾಡುವ ವ್ಯಕ್ತಿಗೆ 2 ವರ್ಷಗಳ ಸೆರವಾಸ, 1 ಲಕ್ಷ ರೂ. ದಂಡವಿದೆ. ಉದ್ದೇಶಪೂರ್ವಕವಾಗಿ ಕುರಿಗಾಹಿಯನ್ನು ಅವಮಾನಿಸಿದರೆ, ನಿಂದಿಸಿದರೆ ಆರು ತಿಂಗಳ ಅವಧಿಯ, 5 ವರ್ಷದವರೆಗೆ ವಿಸ್ತರಿಸಬಹುದಾದ ಸೆರೆವಾಸ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಕುರಿಗಾಹಿ ಮರಣಕ್ಕೆ ಕಾರಣವಾಗುವ ವ್ಯಕ್ತಿಯನ್ನು ಜಾರಿಯಲ್ಲಿರುವ ಸಂಬಂಧಪಟ್ಟ ಕ್ರಿಮಿನಲ್‌ ಕಾನೂನಿನಡಿ ದಂಡಿಸಲಾಗುತ್ತದೆ. ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬಿಎಂಎಸ್‌‍ ಕಾಯ್ದೆಯಡಿ ದಂಡಿಸಲಾಗುತ್ತದೆ. ಕುರಿಗಾಹಿಯು ನ್ಯಾಯಿಕ ನೆರವನ್ನು ಪಡೆಯುವುದರಿಂದ ತಡೆಯುವ ವ್ಯಕ್ತಿಗೆ 2 ವರ್ಷಗಳ ಸೆರೆವಾಸ, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಸೂಕ್ತ ಪ್ರಾಧಿಕಾರದ ಗಮನಕ್ಕೆ ತರದೆ ಕುರಿಗಾಹಿಯಿಂದ ಹಾನಿಗಳನ್ನು ಕ್ಲೈಮ್‌ ಮಾಡುವ ವ್ಯಕ್ತಿಗೆ ಮೂರು ವರ್ಷ ಅವಧಿಯ ಸೆರೆವಾಸ ಮತ್ತು 1 ಲಕ್ಷ ರೂ. ದಂಡ ವಿಧಿಸುವುದನ್ನು ವಿಧೇಯಕ ಪ್ರಸ್ತಾಪಿಸಿದೆ.
ರಾಜ್ಯದಲ್ಲಿ 15 ಸಾವಿರ ಕುರಿಗಾಹಿಗಳು ನೋಂದಣಿಯಾಗಿದ್ದಾರೆ.

4 ಸಾವಿರ ಕುರಿಗಾಹಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಮೂರು ವರ್ಷದಲ್ಲಿ 242 ಕುರಿಗಾಹಿಗಳ ದೌರ್ಜನ್ಯಕ್ಕೆ ಸಂಬಂಧಿಸಿದ ಕೇಸುಗಳು ದಾಖಲಾಗಿವೆ. ಅವರು ವಲಸೆ ಹೋದಾಗ ಕುರಿ ಹೊತ್ತುಕೊಂಡು ಹೋಗುವುದು, ದೌರ್ಜನ್ಯ ನಡೆಸುವುದು, ಅತ್ಯಾಚಾರ ಎಸಗುವ ಕೃತ್ಯಗಳು ಜರುಗಿವೆ. ಹೀಗಾಗಿ ಇಂತಹವುಗಳನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕುರಿಗಾಹಿಗಳ ಕಲ್ಯಾಣ ಕಾರ್ಯಕ್ರಮ ಜಾರಿ ಮಾಡುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.

RELATED ARTICLES

Latest News