ಮಂಡ್ಯ,ಆ.22- ಚಿನ್ನದಂಗಡಿಯಲ್ಲಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುವ ವೇಳೆ ಕೃತ್ಯವನ್ನು ಕಂಡ ಹೋಟೆಲ್ ಮಾಲೀಕ ಮಾದಪ್ಪನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಪ್ರಮುಖ ಆರೋಪಿಯೊಬ್ಬ ಹಲಗೂರು ಠಾಣೆ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿದ್ದಾನೆ.
ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದ ಕಿರಣ್ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕರಣದ ಪ್ರಮುಖ ಆರೋಪಿ.ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿ ಬಳಿ ಈತ ಅಡಗಿ ಕೊಂಡಿರುವ ಖಚಿತ ಮಾಹಿತಿ ಮೇರೆಗೆ ರಾತ್ರಿ 8.30 ರ ಸಮಯದಲ್ಲಿ ಆತನನ್ನು ಬಂಧಿಸಲು ಹಲಗೂರು ವೃತ್ತದ ಸಿಪಿಐ ಶ್ರೀಧರ್, ಕಿರುಗಾವಲು ಪಿಎಸ್ ಐ ರವಿಕುಮಾರ್ ಹಾಗೂ ಸಿಬ್ಬಂದಿ ತೆರೆಳಿದ್ದಾರೆ.
ಪೊಲೀಸರನ್ನು ಕಂಡು ಆರೋಪಿ ಕಿರಣ್ ತಪ್ಪಿಸಿಕೊಳ್ಳಲು ಕಿರುಗಾವಲು ಪೊಲೀಸ್ ಠಾಣೆ ಕಾನ್ ಸ್ಟೇಬಲ್ ಶ್ರೀನಿವಾಸ್ ಅವರ ತೋಳಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣ ಪೊಲೀಸರು ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೇ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದಾಗ ಸಿಪಿಐ ಶ್ರೀಧರ್ ಅವರು ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಆತನನ್ನು ಪೊಲೀಸರು ಸುತ್ತುವರೆದು ಬಂಧಿಸಿದ್ದಾರೆ.
ಘಟನೆ ವಿವರ: ಕಳೆದ 17 ರಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಚಿನ್ನದ ಅಂಗಡಿ ದೋಚಲು ಆರೋಪಿಗಳಾದ ಕಿರಣ್,ಕೊತ್ತತ್ತಿ ಗ್ರಾಮದ ಆನಂದ, ಶ್ರೀನಿವಾಸ, ಕನ್ನಾಳಿ ಗ್ರಾಮದ ಶರತ್, ಮಂಡ್ಯ ಸ್ವರ್ಣಸಂದ್ರದ ಕೃಷ್ಣಾಚಾರಿ ಎಂಬ ಆರೋಪಿಗಳ ತಂಡ ಬಂದಿದೆ.
ಅಂಗಡಿಯ ಬೀಗ ಒಡೆದು ಒಳ ನುಗ್ಗಿದ ಈ ತಂಡ ಕೈಗೆ ಸಿಕ್ಕಿದ 150 ಗ್ರಾಂ ಚಿನ್ನಾಭರಣಗಳು,2 ಕೆ ಜಿ ಬೆಳ್ಳಿ ಒಡವೆಗಳನ್ನು ಬ್ಯಾಗಿನಲ್ಲಿ ತುಂಬಿಕೊಂಡು ಪರಾರಿಯಾಗುವ ವೇಳೆ ಇವರನ್ನು ನೋಡಿದ ಪಕ್ಕದ ಹೋಟೆಲ್ ಮಾಲೀಕ ಮಾದಪ್ಪ ಪ್ರಶ್ನಿಸಿದ್ದಾರೆ.ತಕ್ಷಣ ತಾವು ಸಿಕ್ಕಿಹಾಕಿಕೊಳ್ಳುತ್ತೀವಿ ಎಂಬ ಭಯದಲ್ಲಿ ಆರೋಪಿಗಳು ಮಾದಪ್ಪನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು.
ಜಿಲ್ಲೆಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿದ್ದ ಈ ಪ್ರಕರಣ ಪತ್ತೆಗಾಗಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಡಿವೈಎಸ್ಪಿ ಕೃಷ್ಣಪ್ಪ, ಸಿಪಿಐ ಶ್ರೀಧರ್,ಪಿಎಸ್‌ಐ ರವಿಕುಮಾರ್ ನೇತೃತ್ವದಲ್ಲಿ ಸಿಬ್ಬಂದಿಯನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು.ಪ್ರಕರಣದ ಕ್ಷಿಪ್ರ ತನಿಖೆ ಕೈಗೊಂಡ ತಂಡ ಘಟನೆ ನಡೆದ ಮೂರೇ ದಿನದಲ್ಲಿ ನಾಲ್ವರು ಆರೋಪಗಳನ್ನು ಬಂಧಿಸಿದ್ದರು.ಗುಂಡೇಟಿನಿಂದ ಗಾಯಗೊಂಡಿರುವ ಪ್ರಮುಖ ಆರೋಪಿಯನ್ನು ಮಂಡ್ಯ ಮಿಮ್ಸೌಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರ್ಯಾಚರಣೆ ವೇಳೆ ಗಾಯಗೊಂಡಿರುಮ ಕಾಕ್ಸ್ ಸ್ಟೇಬಲ್ ಶ್ರೀನಿವಾಸ್ ಅವರನ್ನು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸುದ್ದಿಗಾರರಿಗೆ ಘಟನೆಯ ವಿವರ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲತಂಡಿ, ಈ ತಂಡದ ಆನಂದ್ ಕೇರಳದಲ್ಲೂ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ.
ಇದೆ ವೇಳೆ ಪ್ರಕರಣವನ್ನು ಕ್ಷಿಪ್ರ ಗತಿಯಲ್ಲಿ ಭೇದಿಸಿ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ತನಿಖಾ ತಂಡದ ಅಧಿಕಾರಿಗಳಾದ ಸಿಪಿಐ ಶ್ರೀಧರ್, ಕಿರುಗಾವಲು ಪಿಎಸ್‌ಐ ರವಿಕುಮಾರ್ ಹಾಗೂ ಸಿಬ್ಬಂದಿಗಳಾದ ಪ್ರಭುಸ್ವಾಮಿ, ರಿಯಾಜ್ ಪಾಷಾ,ನಾಗೇಂದ್ರ, ಮಹೇಶ್,ಸಿದ್ದರಾಜು,ಮಧುಶಂಕರ್ ರವರುಗಳನ್ನು ಎಸ್ಪಿ ಅವರು ಪ್ರಶಂಸಿಸಿದ್ದಾರೆ.