ಬೆಳ್ತಂಗಡಿ,ಆ.23- ಧರ್ಮಸ್ಥಳ ಸುತ್ತಮುತ್ತ ನೂರಾರು ಶವಗಳನ್ನು ಹೂಳಲಾಗಿದೆ ಎಂದು ರಾಜ್ಯದ ಜನರನ್ನೇ ದಿಕ್ಕುತಪ್ಪಿಸಿದ ಪ್ರಕರಣದಲ್ಲಿ ಸುಳ್ಳುಗಳ ಸರಮಾಲೆ ಹೆಣೆದು ಕಥೆ ಕಟ್ಟಿದ್ದ ದೂರುದಾರ ಮುಸುಕುಧಾರಿಯನ್ನು ಎಸ್‌ಐಟಿ ಇಂದು ಬೆಳಗ್ಗೆ ಬಂಧಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಉಪಸ್ಥಿತಿಯಲ್ಲಿಯೇ ಬಂಧನ ಮಾಡಲಾಗಿದೆ. ದೂರುದಾರನ ಹೇಳಿಕೆಗಳಲ್ಲಿ ವ್ಯತ್ಯಾಸಗಳು ಕಂಡುಬಂದಿದ್ದು, ಆತ ಉದ್ದೇಶಪೂರ್ವಕವಾಗಿ ಪೊಲೀಸರನ್ನು ದಿಕ್ಕುತಪ್ಪಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬಂಧನದ ಬಳಿಕ ಎಸ್‌ಐಟಿ ಮುಸುಕುಧಾರಿಯ ಹೆಸರನ್ನು ಬಹಿರಂಗ ಪಡಿಸಿದ್ದು, ಆತನ ಹೆಸರು ಚಿನ್ನಯ್ಯ ಎಂದು ತಿಳಿಸಿದೆ.
ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾದ ಬಳಿಕ ಸರ್ಕಾರ ಹೆಚ್ಚಿನ ತನಿಖೆಗಾಗಿ ಎಸ್‌ಐಟಿ ರಚಿಸಿತ್ತು. ನಂತರ ಎಸ್‌ಐಟಿ ಅಧಿಕಾರಿಗಳು ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಉತ್ಖನನ ನಡೆಸಿದ ಸಂದರ್ಭದಲ್ಲಿ ಯಾವುದೇ ಮಹತ್ತರವಾದ ಅವಶೇಷಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ಉತ್ಖನನ ಕಾರ್ಯವನ್ನು ಸ್ಥಗಿತಗೊಳಿಸಿ ಮಾಸ್ಕ್‌ಮ್ಯಾನ್‌ನನ್ನು ವಿಚಾರಣೆ ಪ್ರಾರಂಭಿಸಿತು.
ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ಮಾಸ್ಕ್‌ಮ್ಯಾನ್‌ನನ್ನು ತೀವ್ರ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಿತ್ತು. ಆ ಸಂದರ್ಭದಲ್ಲಿ ಹಲವು ಆಯಾಮಗಳಲ್ಲಿ ಆತನಿಗೆ ಪ್ರಶ್ನೆಗಳನ್ನು ಕೇಳಿದಾಗ ಅನುಮಾನಾಸ್ಪದ ರೀತಿ ಉತ್ತರ ನೀಡಿದ್ದಾನೆ.
ದೂರುದಾರನ ಸಂಬಂಧಿಕರು ಮತ್ತು ಸ್ನೇಹಿತರನ್ನು ಎಸ್‌ಐಟಿ ವಿಚಾರಣೆಗೊಳಪಡಿಸಿದಾಗ ಆತನ ಪತ್ನಿ ಮತ್ತು ಸಹೋದರರು, ದೂರುದಾರನು ಹಣಕ್ಕಾಗಿ ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಪಿತೂರಿ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ನಿನ್ನೆ ರಾತ್ರಿಯಿಂದ ಇಂದು ಬೆಳಗಿನ ಜಾವ 5 ಗಂಟೆಯವರೆಗೆ ಮಾಸ್ಕ್‌ಮ್ಯಾನ್‌ನನ್ನು ತೀವ್ರ ವಿಚಾರಣೆ ನಡೆಸಿ ಹಲವು ಮಹತ್ವದ ವಿವರಗಳನ್ನು ಪಡೆದುಕೊಂಡಿದ್ದಾರೆ.
ಈ ನಡುವೆ ಉತ್ಖನನದ ವೇಳೆ 6ನೇ ಪಾಯಂಟ್ ಹಾಗೂ ಮತ್ತೊಂದು ಕಡೆ ಸಿಕ್ಕಿದ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರ ವರದಿಗಾಗಿ ತನಿಖಾಧಿಕಾರಿಗಳು ಕಾಯುತ್ತಿದ್ದಾರೆ. ಈ ಮಧ್ಯೆ ಧರ್ಮಸ್ಥಳದಲ್ಲಿ ಮಾಸ್ಕ್‌ಮ್ಯಾನ್ ಜೊತೆ ಕೆಲಸ ಮಾಡಿದ್ದ ಮಂಡ್ಯದ ವ್ಯಕ್ತಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದರು.
ಪ್ರಶ್ನೆಗಳ ಸುರಿಮಳೆ: ದೂರು ನೀಡಿದ ವೇಳೆ ಮುಸುಕುದಾರಿ ತಲೆಬುರುಡೆಯೊಂದನ್ನು ನೀಡಿದ್ದನು. ಆ ತಲೆ ಬುರುಡೆ ಎಲ್ಲಿಂದ ತಂದಿದ್ದು, ಬುರುಡೆ ತೆಗೆದ ಸ್ಥಳದಲ್ಲಿ ನಿನ್ನ ಜೊತೆ ಇದ್ದವರು ಯಾರು, ಬುರುಡೆ ಎತ್ತಿದವರು ಯಾರು, ಸಮಾಧಿಯೊಳಗಿಂದ ನೀನು ಬುರುಡೆ ಅಗೆದು ತಂದಿರುವೆಯಾ, ಕಾಡಿನೊಳಗಿಂದ ಬುರುಡೆ ಎತ್ತಿದ ವೀಡಿಯೋದಲ್ಲಿ ಇರುವವರು ಯಾರು, ಕಾಡಿನ ಒಳಗೆ ಬುರುಡೆ ಸಿಕ್ಕಿದ್ದರೆ ಅದು ಅಸಹಜ ಸಾವಿನ ಪ್ರಕರಣವೋ ಅಥವಾ ಸಮಾಧಿಯಿಂದ ಬುರುಡೆ ಆಗೆದು ತಂದಿರುವಿರಾ, ನಿನ್ನ ಜೊತೆ ಕೈ ಜೋಡಿಸಿದವರು ಯಾರು ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿ ಜಿತೇಂದ್ರ ದಯಾಮಾ ಅವರು ಕೇಳಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೆ ಎಸ್‌ಐಟಿ ಅಧಿಕಾರಿಗಳ ನಿರೀಕ್ಷೆಯಂತೆ ಯಾವುದೇ ಉತ್ತರಗಳು ಅನಾಮಿಕನಿಂದ ಬಂದಿಲ್ಲ. ಹಾಗಾಗಿ ಆತನ ಮುಂದೆ ವೀಡಿಯೋ ಬಿತ್ತರಿಸಿ ತನಿಖೆ ಪ್ರಕ್ರಿಯೆಯನ್ನು ಎಸ್‌ಐಟಿ ಮುಂದುವರಿಸಿತ್ತು. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಮಾಸ್ಕ್‌ಮ್ಯಾನ್ ಹೆಣೆದಿದ್ದು, ಸುಳ್ಳಿನ ಸರಮಾಲೆ ಎಂಬುದು ಕಂಡುಬಂದಿದೆ.ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ಎಸ್‌ಐಟಿಗೆ ತಿಳಿಯುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆ.
ಇನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಆನಾಮಧೇಯ ವ್ಯಕ್ತಿಗೆ ಎಸ್‌ಐಟಿ ಅಧಿಕಾರಿಗಳು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ಬಳಿಕ ಬೆಳ್ತಂಗಡಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
- ನವೆಂಬರ್ನಲ್ಲಿ ಕೆಸೆಟ್-25ರ ಪರೀಕ್ಷೆ
- ಮತದಾರರ ಪಟ್ಟಿ ಪರಿಷ್ಕರಣೆ ಮಾಡುವಂತೆ ಕರ್ನಾಟಕದ ಕೈ ನಾಯಕರಿಗೆ ಸುರ್ಜೇವಾಲ ಕಟ್ಟಪ್ಪಣೆ
- ಬಿಹಾರ : ಟ್ಯಾಂಕರ್ಗೆ ಆಟೋ ಡಿಕ್ಕಿಯಾಗಿ 8 ಮಂದಿ ದುರ್ಮರಣ
- ಶಾಲೆ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ 14 ವರ್ಷದ ವಿದ್ಯಾರ್ಥಿ
- ಧರ್ಮದ ವಿಚಾರದಲ್ಲಿ ರಾಜಕಾರಣ ಬೇಡ, ಸರ್ಕಾರ ನಿಷ್ಪಕ್ಷವಾದ ತನಿಖೆ ನಡೆಸಲಿದೆ ; ಡಿಕೆಶಿ