Saturday, August 23, 2025
Homeರಾಜ್ಯ70 ಗಂಟೆಗಳ ಕಾಲ ನಡೆದ ಮಳೆಗಾಲದ ವಿಧಾನಸಭೆ ಅಧಿವೇಶನ

70 ಗಂಟೆಗಳ ಕಾಲ ನಡೆದ ಮಳೆಗಾಲದ ವಿಧಾನಸಭೆ ಅಧಿವೇಶನ

The monsoon assembly session lasted for 70 hours

ಬೆಂಗಳೂರು, ಆ.23-ನಿನ್ನೆ ಮುಕ್ತಾಯಗೊಂಡ ಮಳೆಗಾಲದ ವಿಧಾನಸಭೆಯ ಅಧಿವೇಶನದಲ್ಲಿ ಒಟ್ಟು 70 ಗಂಟೆಗಳ ಕಾಲ ಕಾರ್ಯಕಲಾಪಗಳು ಜರುಗಿವೆ. ಈ ಬಾರಿಯ ಅಧಿವೇಶನದ ವಿಶೇಷತೆಯೆಂದರೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಧಿವೇಶನ ನಡೆಸಲಾಗಿದೆ.

ಹೆಚ್ಚು ಪ್ರತಿಭಟನೆ ಹಾಗೂ ಸಭಾತ್ಯಾಗದಂತಹ ಘಟನೆಗಳಿಲ್ಲದೆ, ಸುಗಮವಾಗಿ ಕಾರ್ಯಕಲಾಪ ಜರುಗಿವೆ. ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಅಂದರೆ 39 ವಿಧೇಯಕಗಳು ಅಂಗೀಕಾರಗೊಂಡಿವೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಸದನದಲ್ಲಿ ನಿನ್ನೆ ಪ್ರಕಟಿಸಿದರು.

ಧನ ವಿನಿಯೋಗ ವಿಧೇಯಕ, ಸೌಹಾರ್ದ ಸಹಕಾರಿ ತಿದ್ದುಪಡಿ, ನೋಂದಣಿ ತಿದ್ದುಪಡಿ ವಿಧೇಯಕ ಸೇರಿದಂತೆ ಪ್ರಮುಖ ವಿಧೇಯಕಗಳು ಸಮಗ್ರ ಚರ್ಚೆಯಾಗಿ ಅನುಮೋದನೆಗೊಂಡಿವೆ. ಆ.11ರಿಂದ ಆ.22ರವರೆಗೆ ಒಟ್ಟು 9 ದಿನಗಳ ಕಾಲ ಸದನದ ಕಾರ್ಯ ಕಲಾಪಗಳು ನಡೆದಿವೆ ಎಂದು ಅವರು ಹೇಳಿದರು.

ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸಲ್ಲಿಸಲಾಗಿದೆ. ಬಿಜೆಪಿ ಶಾಸಕರ ಅಮಾನತು ಆದೇಶ ವಾಪಸ್ಸು ಪಡೆದಿರುವುದನ್ನು ಸ್ಥಿರೀಕರಿಸಲಾಗಿದೆ. ಕಾರ್ಯದರ್ಶಿಗಳ ವರದಿ ಮಂಡನೆ, ಪೂರಕ ಅಂದಾಜಿಗೆ ಅನುಮೋದನೆ, ವಿವಿಧ ಸ್ಥಾಯಿ ಸಮಿತಿಗಳ ವರದಿ ಮಂಡನೆ, ಸ್ಥಾಯಿ ಸಮಿತಿಗಳಿಗೆ ಸದಸ್ಯರ ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಜನಸಂದಣಿ ನಿಯಂತ್ರಣ ವಿಧೇಯಕ ಸೇರಿದಂತೆ ಕೆಲವು ವಿಧೇಯಕಗಳನ್ನು ಸಮಗ್ರ ಪರಿಶೀಲನೆಗೆ ಸದನ ಸಮಿತಿಗೆ ವಹಿಸಲಾಗಿದೆ. ಒಟ್ಟು 35 ಅರ್ಜಿಗಳನ್ನು ಸ್ವೀಕರಿಸಲಾಗಿದೆ. 142 ವಾರ್ಷಿಕ ವರದಿಗಳು, 5 ಅನುಪಾಲನ ವರದಿಗಳು 6 ಅನುಸರಣಾ ವರದಿಗಳನ್ನು ಮಂಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸದನದಲ್ಲಿ 128 ಪ್ರಶ್ನೆಗಳಿಗೆ ಉತ್ತರಿಸಲಾಗಿದ್ದು, 1662 ಪ್ರಶ್ನೆಗಳಿಗೆ ಲಿಖಿತ ಉತ್ತರ ಒದಗಿಸಲಾಗಿದೆ. ನಿಯಮ 351ರಡಿ 90 ಸೂಚನೆಗಳಿಗೆ ಹಾಗೂ 178 ಗಮನ ಸೆಳೆಯುವ ಸೂಚನೆಗಳಿಗೆ ಉತ್ತರ ಒದಗಿಸಲಾಗಿದೆ. ಶೂನ್ಯವೇಳೆಯಲ್ಲಿ 13 ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.

ಸುಗಮ ಕಾರ್ಯಕಲಾಪ ನಡೆಸಲು ಸಹರಿಸಿದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ನಾಯಕರು, ಸಚೇತಕರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಮಾಧ್ಯಮದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಖಾದರ್‌ ತಿಳಿಸಿದರು.

RELATED ARTICLES

Latest News