Monday, August 25, 2025
Homeಇದೀಗ ಬಂದ ಸುದ್ದಿದೆಹಲಿಗೂ ಹೋಗಿತ್ತು ತಲೆಬುರುಡೆ! ಚಿನ್ನಯ್ಯ ಬಂಧನದ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್

ದೆಹಲಿಗೂ ಹೋಗಿತ್ತು ತಲೆಬುರುಡೆ! ಚಿನ್ನಯ್ಯ ಬಂಧನದ ನಂತರ ಪ್ರಕರಣಕ್ಕೆ ಹೊಸ ಟ್ವಿಸ್ಟ್

New twist in Dharmasthala case after Chinnaiah's arrest

ದಕ್ಷಿಣಕನ್ನಡ,ಆ.24- ಕೊಲೆ, ಅತ್ಯಾಚಾರಕ್ಕೊಳಗಾದವರ ಶವಗಳನ್ನು ಹೂತು ಹಾಕಿದ್ದಾಗಿ ಹೇಳಿ ರಾತ್ರೋರಾತ್ರಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಚಿನ್ನಯ್ಯ ತನ್ನ ಬಳಿ ಇದ್ದ ಬುರಡೆಯನ್ನು ದೆಹಲಿಗೆ ಕೊಂಡೊಯ್ದಿದ್ದು ಬೆಳಕಿಗೆ ಬಂದಿದೆ.

ಧರ್ಮಸ್ಥಳದ ಕಾಡಿನಲ್ಲಿ ಆತಹತ್ಯೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬನ ತಲೆಯನ್ನು ಕತ್ತಿನಿಂದ ಬೇರ್ಪಡಿಸಿದ ನಂತರ ಬುರುಡೆಯನ್ನು ರಹಸ್ಯವಾಗಿ ತೆಗೆದುಕೊಂಡು ಹೋಗಿ ಗುಂಪಿನ ನಿರ್ದೇಶನದಂತೆ ಪ್ರಮುಖರೊಬ್ಬರನ್ನು ಭೇಟಿಯಾಗಿದ್ದ. ಜುಲೈ 3ರಂದು ವಕೀಲರೊಂದಿಗೆ ಆಗಮಿಸಿದ ಮುಸುಕುಧಾರಿ ದಕ್ಷಿಣಕನ್ನಡ ಜಿಲ್ಲೆ ಎಸ್ಪಿ ಕಚೇರಿಗೆ
ಭೇಟಿ ನೀಡಿ ಲೈಂಗಿಕ ದೌರ್ಜನ್ಯ, ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಮಹಿಳೆಯರ ಮತ್ತು
ಮಕ್ಕಳ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿ ರಾತ್ರೋರಾತ್ರಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿದ್ದ.

ತನ್ನ ಬಳಿ ಇದ್ದ ಬುರುಡೆಯನ್ನೇ ಸಾಕ್ಷಿಯನ್ನಾಗಿ ಪರಿಗಣಿಸಬೇಕೆಂದು ಚಿನ್ನಯ್ಯ ಹೇಳಿದ್ದ. ಅವರ ತಂಡದಲ್ಲಿದ್ದ ಉನ್ನತ ವ್ಯಕ್ತಿಯೊಬ್ಬರು ದೆಹಲಿಗೆ ತಲುಪಿಸಲು ಸಕಲ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದರು.

ದೆಹಲಿಯಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ರಹಸ್ಯವಾಗಿ ಭೇಟಿ ಮಾಡಿದ್ದ ಅಂದಿನ ಮುಸುಕುಧಾರಿ ಪೊಲೀಸರು, ನ್ಯಾಯಾಧೀಶರು ಹಾಗೂ ತನಿಖಾಧಿಕಾರಿಗಳ ಮುಂದೆ ಯಾವ ರೀತಿ ಹೇಳಿಕೆಗಳನ್ನು ನೀಡಬೇಕು ಎಂಬುದರ ಬಗ್ಗೆಯೂ ತರಬೇತಿಯನ್ನು ನೀಡಲಾಗಿತ್ತು.
ನಾನು ಹೇಳಿದಂತೆ ನಡೆದುಕೊಂಡರೆ ಯಾವುದೇ ರೀತಿಯ ಕಾನೂನು ಸಮಸ್ಯೆಗಳು ಎದುರಾಗುವುದಿಲ್ಲ. ನಿಮಗೆ ಬೇಕಾದ ಆರ್ಥಿಕ ನೆರವನ್ನು ನಮ ಕಡೆಯವರು ತಲುಪಿಸಿದ್ದಾರೆ. ಮೊದಲು ನೀವು ನಾನು ಹೇಳಿದಂತೆ ನಡೆದುಕೊಳ್ಳಿ ಅಪ್ಪಿತಪ್ಪಿಯೂ ಈ ರಹಸ್ಯವನ್ನು ಎಲ್ಲಿಯೂ ಬಾಯಿಬಿಡದಂತೆ ಗಣ್ಯವ್ಯಕ್ತಿ ಹೇಳಿಕೊಟ್ಟಿದ್ದರು.

ಎಲ್ಲವೂ ಮುಗಿದ ನಂತರವೇ ಏಕಾಏಕಿ ಜು.3ರಂದು ಪ್ರತ್ಯಕ್ಷನಾದ ಮುಸುಕುಧಾರಿ 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ನಾನು ಶವಗಳನ್ನು ಹೂತು ಹಾಕಿದ್ದಾಗಿ ಕಥೆ ಕಟ್ಟಿದ್ದ.
ಜೊತೆಗೆ ಆತ ಒಂದು ತಲೆಬುರುಡೆಯನ್ನು ಸಾಕ್ಷಿಯಾಗಿ ಒಪ್ಪಿಸಿದ್ದ. ಆದರೆ, ಎಸ್‌‍ಐಟಿ ತನಿಖೆಯಲ್ಲಿ ಈ ತಲೆಬುರುಡೆಯು ಧರ್ಮಸ್ಥಳದ ಕಾಡಿನಲ್ಲಿ ಒಂದು ಅಸ್ಥಿಪಂಜರದ ಭಾಗವಾಗಿ ಕಂಡುಬಂದಿತ್ತು ಎಂದು ತಿಳಿದುಬಂದಿದೆ.

ಈ ಅಸ್ಥಿಪಂಜರವು ನೇಣುಬಿಗಿದು ಮೃತಪಟ್ಟ ಒಬ್ಬ ವ್ಯಕ್ತಿಯದ್ದಾಗಿತ್ತು ಎಂದು ತನಿಖೆಯಿಂದ ದೃಢಪಟ್ಟಿದೆ. ಚಿನ್ನಯ್ಯ ಈ ತಲೆಬುರುಡೆಯನ್ನು ಎತ್ತಿಕೊಂಡು, ತನ್ನ ಗುಂಪಿನ ಸಹಾಯದಿಂದ ಸಾಕ್ಷಿಯಾಗಿ ಪೊಲೀಸರಿಗೆ ಒಪ್ಪಿಸಿದ್ದ.

ತನಿಖೆಯಲ್ಲಿ ತಿರುವು
ಎಸ್‌‍ಐಟಿ ವಿಚಾರಣೆಯಲ್ಲಿ ಚಿನ್ನಯ್ಯ 2023ರಲ್ಲಿ ಒಂದು ಗುಂಪಿನಿಂದ ಈ ತಲೆಬುರುಡೆಯನ್ನು ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಈ ಗುಂಪು ಆತನಿಗೆ ತಪ್ಪು ಹೇಳಿಕೆಗಳನ್ನು ನೀಡಲು ಸೂಚಿಸಿತ್ತು ಎಂದು ತಿಳಿಸಿದ್ದ. ಈ ತಲೆಬುರುಡೆಯನ್ನು ಭೂಮಿಯೊಳಗಿಂದ ಉತ್ಖನನ ಮಾಡಿಲ್ಲ, ಬದಲಿಗೆ ಕಾಡಿನಲ್ಲಿ ಕಂಡುಬಂದಿದ್ದನ್ನು ಎತ್ತಿಕೊಂಡು ಬಂದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಸಾಕ್ಷಿಯನ್ನು ಬಳಸಿಕೊಂಡು, ಚಿನ್ನಯ್ಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿ, ಜನರನ್ನು ನಂಬಿಸಲು ಯತ್ನಿಸಿದ್ದ ಎನ್ನಲಾಗಿದೆ.

ತನಿಖೆ ಫಲಿತಾಂಶ
ಡಿಐಜಿ ಪ್ರಣಬ್‌ ಮೊಹಂತಿ ನೇತೃತ್ವದ ಎಸ್‌‍ಐಟಿ, ಜುಲೈ 28ರಿಂದ ಚಿನ್ನಯ್ಯ ಗುರುತಿಸಿದ ಸ್ಥಳಗಳಲ್ಲಿ ಉತ್ಖನನ ಕಾರ್ಯ ಆರಂಭಿಸಿತು. ಆದರೆ, 17 ಸ್ಥಳಗಳಲ್ಲಿ ಅಗೆತ ನಡೆಸಿದರೂ, ಕೇವಲ ಎರಡು ಅಸ್ಥಿಪಂಜರಗಳು ಮಾತ್ರ ಸಿಕ್ಕವು. ಈ ತನಿಖೆಯಿಂದ ಚಿನ್ನಯ್ಯನ ಆರೋಪಗಳು ದುರುದ್ದೇಶಪೂರಿತವಾಗಿರಬಹುದು ಎಂಬ ಅನುಮಾನ ಬಲವಾಗಿದೆ.

ಆಗಸ್ಟ್‌ 22ರಂದು ಎಸ್‌‍ಐಟಿ ಚಿನ್ನಯ್ಯನನ್ನು ರಾತ್ರಿಯಿಡೀ ವಿಚಾರಣೆಗೊಳಪಡಿಸಿತು. ಈ ವಿಚಾರಣೆಯಲ್ಲಿ ಆತ ಕಾಡಿನಲ್ಲಿ ಕಂಡುಬಂದ ತಲೆಬುರುಡೆಯನ್ನು ಒಂದು ಗುಂಪಿನ ಸಹಾಯದಿಂದ ಎತ್ತಿಕೊಂಡು ಬಂದಿದ್ದೇನೆ ಎಂದು ಒಪ್ಪಿಕೊಂಡ. ಅಪರಾಧ ನಡೆದ ಸ್ಥಳದಿಂದ ಸಾಕ್ಷ್ಯವನ್ನು ತೆಗೆದುಕೊಂಡು ಹೋಗುವುದು ಕಾನೂನುಬಾಹಿರವಾದ್ದರಿಂದ ಆತನನ್ನು ಬಿಎನ್‌ಎಸ್‌‍ ಕಾಯ್ದೆಯ ಕಲಂ 353(1)(ಬಿ) ಮತ್ತು 353(2)ರಡಿ ಬಂಧಿಸಲಾಯಿತು.

ಚಿನ್ನಯ್ಯ ತಂದಿದ್ದ ತಲೆಬುರುಡೆಯು ಧರ್ಮಸ್ಥಳದ ಕಾಡಿನಲ್ಲಿ ಕಂಡುಬಂದಿದ್ದು, ಭೂಮಿಯೊಳಗಿಂದ ಉತ್ಖನನ ಮಾಡಿದ್ದಲ್ಲ. ಈ ತಲೆಬುರುಡೆಯನ್ನು ಒಂದು ಗುಂಪಿನ ಸಹಾಯದಿಂದ ಎತ್ತಿಕೊಂಡು ಬರಲಾಗಿದ್ದು, ನೇಣು ಬಿಗಿದು ಮೃತಪಟ್ಟು ಅಸ್ತಿಪಂಜರವಾಗಿದ್ದ ದೇಹದ ತಲೆಬುರುಡೆ ಎನ್ನಲಾಗಿದೆ. ಸದ್ಯ ಎಸ್‌‍ಐಟಿ ಅಧಿಕಾರಿಗಳು ಈ ಬಗ್ಗೆ ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಖೆಯಲ್ಲಿ ಮತ್ತಷ್ಟು ಸತ್ಯಾಂಶಗಳು ಬಯಲಾಗಲಿದೆ.

RELATED ARTICLES

Latest News