ಬೆಂಗಳೂರು, ಆ.24- ಒನ್‌ವೇಯಲ್ಲಿ ಎದುರಿನಿಂದ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಮಹಿಳೆಯ ಸೇತುವೆಯಿಂದ ಕೆಳಗೆ ಹಾರಿ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾರು ಚಾಲಕನ ಅಜಾಗ ರೂಕ ಚಾಲನೆಗೆ ಜೀವ ಕಳೆದುಕೊಂಡ ಅಮಾಯಕ ಮಹಿಳೆಯನ್ನು ಬಾಣಸವಾಡಿ ನಿವಾಸಿ ನೇತ್ರಾವತಿ (31) ಎಂದು ಗುರುತಿಸಲಾಗಿದೆ.ನೇತ್ರಾವತಿ ತನ್ನ ಪತಿ ಶಿವು ಅವರ ಜೊತೆ ಬಾಣಸವಾಡಿಯಿಂದ ಚಿಕ್ಕಬಳ್ಳಾಪುರದ ಕಡೆಗೆ ತೆರಳುತ್ತಿದ್ದರು. ರಾತ್ರಿ 12.30ರ ಸಮಯದಲ್ಲಿ ಬಚ್ಚಳ್ಳಿ ಬ್ರಿಡ್‌್ಜ ಮೇಲೆ ಸಂಚರಿಸುತ್ತಿದ್ದಾಗ ಏಕ ಮುಖ ಸಂಚಾರದ ಮಾರ್ಗದಲ್ಲಿ ಎದುರಿನಿಂದ ವೇಗವಾಗಿ ಬಂದ ಕಾರು ಅವರ ಬೈಕ್‌ಗೆ ಡಿಕ್ಕಿ ಹೊಡೆಯಿತು.
ಕಾರು ಡಿಕ್ಕಿ ಹೊಡೆದ ರಭಸಕ್ಕೆ ನೇತ್ರಾವತಿ ಬೈಕ್‌ನಿಂದ ಬ್ರಿಡ್ಜ್ ಕೆಳಗೆ ಹಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಅವರ ಪತಿ ಶಿವು ಅವರಿಗೆ ಸಣ್ಣ ಪ್ರಮಾಣದ ಗಾಯವಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರಿನ ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.