ಜೋಧ್ಪುರ, ಆ.26- ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದೇವೆ. ನಮ ಸೈನಿಕರು ಭಯೋತ್ಪಾದಕರನ್ನು ಅವರ ಧರ್ಮ ನೋಡಿ ಕೊಲ್ಲಲಿಲ್ಲ. ಆದರೆ ಅವರ ಕೃತ್ಯಗಳಿಗಾಗಿ ಅವರನ್ನು ನಾಶ ಮಾಡಿದರು ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಸ್ಪಷ್ಟ ಪಡಿಸಿದ್ದಾರೆ.
ಇಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಪಹಲಾಮ್ ದಾಳಿಗೆ ಪ್ರತೀಕಾರ ತೆಗೆದುಕೊಳ್ಳಲು ನಡೆದ ಕಾರ್ಯಾಚರಣೆ ವೇಳೆ ಆಡಳಿತ ಮತ್ತು ಸಶಸ್ತ್ರ ಪಡೆಗಳಿಗೆ ನೀಡಿದ ಸಹಕಾರಕ್ಕಾಗಿ ಗಡಿ ಭಾಗದ ಜನರನ್ನು ಶ್ಲಾಘಿಸಿದರು.
ಪೆಹಲ್ಲಾಮ್ ಘಟನೆ ಬಳಿಕ ನಾನು ಸೇನಾ ಪಡೆಗಳ ಮುಖ್ಯಸ್ಥರನ್ನು ಕರೆದು ಯಾವುದೇ ಕಾರ್ಯಾಚರಣೆಗೆ ಸಿದ್ಧರಿದ್ದೀರಾ ಎಂದು ಕೇಳಿದೆ. ಮೂರು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸಿದ್ಧರಿರುವುದಾಗಿ ಸರ್ವಾನುಮತದಿಂದ ಉತ್ತರಿಸಿದರು ಎಂದು ರಕ್ಷಣಾ ಸಚಿವರು ತಿಳಿಸಿದರು.
ಸಂಕ್ಷಿಪ್ತ ದಾಳಿ ನಡೆಸಬೇಕೆಂದು ನಿರ್ಧರಿಸಲಾಗಿತ್ತು. ಎಲ್ಲ ಗಡಿ ಪ್ರಾಂತಗಳಿಂದ ನಮ ಪಡೆಗಳಿಗೆ ಬೆಂಬಲ ದೊರಕಿತು. ಭಾರತವು ತನ್ನ ಗಡಿಯೊಳಗಿನ ಜನರನ್ನಷ್ಟೇ ತನ್ನವರು ಎಂದು ಭಾವಿಸುವುದಿಲ್ಲ. ಜಗತ್ತಿನಾದ್ಯಂತದ ಜನರನ್ನು ತನ್ನ ಕುಟುಂಬದ ಭಾಗ ಎಂದು ಪರಿಗಣಿಸುತ್ತದೆ ಮತ್ತು ವಸುಧೈವ ಕುಟುಂಬಕಮ್ ಎಂಬ ಸಂದೇಶವನ್ನು ಪ್ರಸರಿಸುತ್ತದೆ ಎಂದು ಸಿಂಗ್ ನುಡಿದರು.
ಭಾರತವು ಜಾತಿ-ಧರ್ಮಗಳ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಹೀಗಿದ್ದರೂ ಉಗ್ರಗಾಮಿಗಳು ಜನರನ್ನು ಅವರ ಧರ್ಮ ಗುರುತಿಸಿದ ಬಳಿಕ ಹತ್ಯೆಗೈದರು. ನಮ ಯೋಧರು ಉಗ್ರರನ್ನು ಅವರ ಧರ್ಮ ಆಧರಿಸದೆ ಅವರ ದುಷ್ಕೃತ್ಯಗಳಿಗಾಗಿ ಕೊಂದರು ಎಂದು ಸಿಂಗ್ ಹೇಳಿದರು.
ಮೇ ನಲ್ಲಿ ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶೀರದ ಉಗ್ರರ ಸಂಪರ್ಕದ ವಿವಿಧ ನೆಲೆಗಳ ಮೇಲೆ ದಾಳಿ ನಡೆಸಲಾಯಿತು. ಏಪ್ರಿಲ್ 22 ರ ಪಹಲಾಮ್ ದಾಳಿಯ ಹಿನ್ನೆಲೆಯಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಅವರ ಮೂಲ ಸೌಕರ್ಯಗಳನ್ನು ನಾಶಗೊಳಿಸುವುದು ಗುರಿಯಾಗಿತ್ತು ಎಂದು ಸಿಂಗ್ ವಿವರಿಸಿದರು.