Tuesday, August 26, 2025
Homeರಾಜ್ಯಬೆಳ್ತಂಗಡಿ ಎಸ್‌‍ಐಟಿ ಕಚೇರಿಗೆ ಬಂದ ಸುಜಾತ ಭಟ್‌

ಬೆಳ್ತಂಗಡಿ ಎಸ್‌‍ಐಟಿ ಕಚೇರಿಗೆ ಬಂದ ಸುಜಾತ ಭಟ್‌

Sujatha Bhat arrives at Belthangady SIT office

ಬೆಳ್ತಂಗಡಿ, ಆ.26- ನನಗೆ ವಯಸ್ಸಾಗಿದೆ ಹಾಗೂ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಎಸ್‌‍ಐಟಿ ವಿಚಾರಣೆಗೆ ಆಗಮಿಸಲು ಸಾಧ್ಯವಿಲ್ಲ ಎಂದಿದ್ದ ಅನನ್ಯಾ ಭಟ್‌ ನಾಪತ್ತೆ ಪ್ರಕರಣದ ಸೂತ್ರಧಾರಿ ಸುಜಾತ ಭಟ್‌ ಅವರ ಮನೆಗೆ ತೆರಳಿ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದ ಸಂದರ್ಭದಲ್ಲಿ ಸುಜಾತ ಭಟ್‌ ಅವರು ಬೆಳ್ತಂಗಡಿಯಲ್ಲಿರುವ ಎಸ್‌‍ಐಟಿ ಕಚೇರಿಗೆ ಆಗಮಿಸಿ ಅಚ್ಚರಿ ಮೂಡಿಸಿದ್ದಾರೆ.

ಅನನ್ಯಾ ಭಟ್‌ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌‍ಐಟಿ ಪೊಲೀಸರು ಆ.29 ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ ನೋಟಿಸ್‌‍ ನೀಡಿದ್ದರು. ಆದರೆ, ಅವರು ನನಗೆ ವಿಚಾರಣೆಗೆ ಆಗಮಿಸಲು ಸಾಧ್ಯವಿಲ್ಲ ಎಂದಿದ್ದರೂ ಇದೀಗ ವಿಚಾರಣೆ ನಿಗದಿ ದಿನಾಂಕಕ್ಕೂ ಮುನ್ನವೇ ಇಂದು ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್‌‍ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಆಗಮಿಸಿದ್ದಾರೆ.

ಸುಜಾತ ಭಟ್‌ ಬರುವಾಗ ಅಧಿಕಾರಿಗಳು ನಿದ್ದೆಯಲ್ಲಿದ್ದರು. ಕಚೇರಿಗೆ ಬಂದ ನಂತರ ಪೊಲೀಸರು ಸುಜಾತ ಭಟ್‌ ಅವರನ್ನು ಒಳಗಡೆ ಬರುವಂತೆ ಹೇಳಿದ್ದಾರೆ. ಸದ್ಯ ಈಗ ಸುಜಾತ ಭಟ್‌ ಎಸ್‌‍ಐಟಿ ಕಚೇರಿಯಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಮಣಿಪಾಲದಲ್ಲಿ ಎಂಬಿಬಿಎಸ್‌‍ ಓದುತ್ತಿದ್ದ ಪುತ್ರಿ ಅನನ್ಯಾ ಭಟ್‌ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆಯಾಗಿದ್ದರು. ಈ ಬಗ್ಗೆ ಠಾಣೆಗೆ ಹೋದಾಗ ಯಾರೂ ನನ್ನ ದೂರನ್ನು ತೆಗೆದುಕೊಂಡಿಲ್ಲ. ಪ್ರಶ್ನೆ ಮಾಡಿದರೆ ನನಗೆ ಧರ್ಮಸ್ಥಳದಲ್ಲಿ ನನ್ನ ಮೇಲೆ ಹಲ್ಲೆ ನಡೆಸಲಾಗಿತ್ತು. ಉತ್ಕನನದ ವೇಳೆ ನನ್ನ ಮಗಳ ಮೂಳೆ ಸಿಕ್ಕಿದರೆ ನಾನು ಸನಾತನ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಸುಜಾತ ಭಟ್‌ ಈ ಹಿಂದೆ ಹೇಳಿಕೆ ನೀಡಿದ್ದರು.

ನಂತರದ ದಿನಗಳಲ್ಲಿ ಸುಜಾತಾ ಭಟ್‌ ಬೇರೆ ಬೇರೆ ಮಾಧ್ಯಮಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆ ನೀಡುತ್ತಿದ್ದ ಕಾರಣ ಅನನ್ಯಾ ಭಟ್‌ ಪ್ರಕರಣ ನಕಲಿ ಎಂಬ ಬಗ್ಗೆ ಗುಮಾನಿ ಹುಟ್ಟಿತ್ತು.
ಕೊನೆಗೆ ಸುಜಾತ ಭಟ್‌ ನಾನು ಹೇಳುತ್ತಿರುವುದು ಸುಳ್ಳು ಎಂದು ಅಧಿಕೃತವಾಗಿ ತಿಳಿಸಿ ಈ ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ್ದರು. ಸುಜಾತ ಭಟ್‌ ಅಂತ್ಯ ಹಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಮೀರ್‌ ಅನನ್ಯಾ ಭಟ್‌ಗೆ ಸಂಬಂಧಿಸಿದಂತೆ ಎಐ ವಿಡಿಯೋ ರಚಿಸಿ ವೈರಲ್‌ ಮಾಡಿದ್ದರು ಎನ್ನಲಾಗಿದೆ.

ಈ ವಿಡಿಯೋ ಲಕ್ಷಗಟ್ಟಲ್ಲೇ ವ್ಯೂ ಪಡೆದುಕೊಂಡಿತ್ತು ಮತ್ತು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು. ಆದರೆ ಸುಳ್ಳು ಕಥೆ ಕಟ್ಟಿ ದೇವಸ್ಥಾನದ ವಿರುದ್ಧ ಷಡ್ಯಂತ್ರ ನಡೆಸಿದ್ದಕ್ಕೆ ಸುಜಾತ ಭಟ್‌ ವಿರುದ್ಧ ಕೇಸ್‌‍ ದಾಖಲಿಸುವಂತೆ ಭಾರೀ ಒತ್ತಡ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್‌ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.

RELATED ARTICLES

Latest News