ಬೆಂಗಳೂರು,ಆ.26– ನಗರದಲ್ಲಿ ನಡೆದಿದ್ದ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಜಗದೀಶ್ ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಲುಕ್ ಔಟ್ ನೋಟೀಸ್ ಜಾರಿಯಾದ ಹಿನ್ನೆಲೆಯಲ್ಲಿ ದೆಹಲಿ ಏರ್ಪೋರ್ಟ್ನಲ್ಲಿ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ವಶಕ್ಕೆ ಪಡೆದುಕೊಂಡು ನಗರಕ್ಕೆ ಕರೆತಂದಿದ್ದಾರೆೆ.
ಭಾರತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಕ್ಲು ಶಿವ ಹತ್ಯೆಯಾದ ನಂತರ ಆರೋಪಿ ಜಗದೀಶ್ ತಲೆಮರೆಸಿ ಕೊಂಡಿದ್ದನು. ಆತನ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಶೋಧ ನಡೆಸುತ್ತಿದ್ದರೂ ಆತನ ಸುಳಿವು ಸಿಕ್ಕಿರಲಿಲ್ಲ.
ಆತ ಚನ್ನೈ ಮೂಲಕ ದುಬೈಗೆ ಪರಾರಿಯಾಗಿದ್ದಾನೆಂಬ ಮಾಹಿತಿ ಲಭ್ಯವಾಗಿತ್ತು. ಬಳಿಕ ಲುಕ್ ಔಟ್ ನೋಟೀಸ್ ಜಾರಿಮಾಡಲಾಗಿತ್ತು.ದೆಹಲಿ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡ ಜಗ್ಗನನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದು ಸಿಐಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ನು ಆಧರಿಸಿ ಸಿಐಡಿ ಅಧಿಕಾರಿಗಳು ತಕ್ಷಣ ದೆಹಲಿಗೆ ತೆರಳಿ ಇಂದು ಮುಂಜಾನೆ ಆತನನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ.
ಘಟನೆ ಹಿನ್ನೆಲೆ:ಜು.15 ರಂದು ತಡರಾತ್ರಿ ಹಲಸೂರು ಕೆರೆ ಬಳಿ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಮೇಲೆ ಏಳೆಂಟು ಮಂದಿ ದುಷ್ಕರ್ಮಿಗಳು ದಾಳಿ ಮಾಡಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಭಾರತಿನಗರ ಠಾಣೆ ಪೊಲೀಸರು ಎಂಟು ಮಂದಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಬಿಕ್ಲು ಶಿವನ ಕೊಲೆಯಾದ ದಿನವೇ ಆರೋಪಿ ಜಗದೀಶ್ ನಗರವನ್ನು ಬಿಟ್ಟು ಪರಾರಿಯಾಗಿ ದ್ದನು. ಆತನ ಚಲನವಲನ ಟೋಲ್ವೊಂದರ ಬಳಿಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಆ ದೃಶ್ಯಾವಳಿ ಆಧರಿಸಿ ಆತನ ಬಂಧನಕ್ಕೆ ಬಲೆಬೀಸಲಾಗಿತ್ತು.
ಐದನೇ ಆರೋಪಿಯಾಗಿ ಕೆಆರ್ಪುರಂ ಶಾಸಕ ಬೈರತಿ ಬಸವರಾಜು ಅವರ ಹೆಸರು ಎಫ್ಐಆರ್ನಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಈಗಾಗಲೇ ಬೈರತಿ ಬಸವರಾಜು ಅವರು ಎರಡು ಬಾರಿ ಭಾರತಿನಗರ ಪೊಲೀಸ್ ಠಾಣೆಗೆ ಹೋಗಿ ವಿಚಾರಣೆಗೆ ಹಾಜರಾಗಿದ್ದಾರೆ. ನಂತರದ ಬೆಳವಣೆಯಲ್ಲಿ ಈ ಪ್ರಕರಣವನ್ನು ಸರ್ಕಾರ ಸಿಐಡಿಗೆ ವಹಿಸಿತ್ತು.
ಸಿಐಡಿ ಪೊಲೀಸರು ಪ್ರಮುಖ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗೆ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿ ಹಲವು ದಿನಗಳಿಂದ ಆತನಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ಆರೋಪಿ ಜಗ್ಗ ಸಿಐಡಿ ಪೊಲೀಸರ ವಶದಲ್ಲಿದ್ದಾನೆ.ಈತ ದುಬೈ, ಮಲೇಷಿಯಾ, ಶ್ರಿಲಂಕಾ ಮುಂತಾದ ದೇಶಗಳಲ್ಲಿ ಸುತ್ತಾಡಿದ್ದಾನೆಂದು ಸಿಐಡಿ ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.