Thursday, August 28, 2025
Homeರಾಷ್ಟ್ರೀಯ | Nationalಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕಟ್ಟಡ ಕುಸಿತ ದುರಂತ : ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಕಟ್ಟಡ ಕುಸಿತ ದುರಂತ : ಸಾವಿನ ಸಂಖ್ಯೆ 15ಕ್ಕೆ ಏರಿಕೆ

Tragic Building Collapse in Virar: Death Toll Rises to 15

ಪಾಲ್ಘರ್‌,ಆ.28-ಮಹಾರಾಷ್ಟ್ರದ ಪಾಲ್ಘರ್‌ ಜಿಲ್ಲೆಯ ವಿರಾರ್‌ನಲ್ಲಿ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದೆ. ಮುಂಬೈಗೆ ಹೊಂದಿಕೊಂಡಿರುವ ಪಾಲ್ಘರ್‌ನ ವಿರಾರ್‌ ಪ್ರದೇಶದ ವಿಜಯ್‌ ನಗರದಲ್ಲಿ ಸುಮಾರು 50 ಫ್ಲಾಟ್‌ಗಳನ್ನು ಹೊಂದಿರುವ ನಾಲ್ಕು ಅಂತಸ್ತಿನ ರಮಾಬಾಯಿ ಅಪಾರ್ಟ್‌ಮೆಂಟ್‌ ನಿನ್ನೆ ಬೆಳಗಿನ ಜಾವ 12.05 ಕ್ಕೆ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದಾಗ, ಕಟ್ಟಡದ ಒಂದು ಭಾಗದ 12 ಫ್ಲಾಟ್‌ಗಳು ಕುಸಿದು, ನಿವಾಸಿಗಳು ಮತ್ತು ಅತಿಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪಾಲ್ಘರ್‌ ಜಿಲ್ಲಾಧಿಕಾರಿ ಡಾ. ಇಂದು ರಾಣಿ ಜಾಖರ್‌ ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ ಎಂದು ದೃಢಪಡಿಸಿದರು.
ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಬಾಲಕಿಯೂ ಸಾವನ್ನಪ್ಪಿದವರಲ್ಲಿ ಸೇರಿದ್ದಾಳೆ.

ರಕ್ಷಿಸಲ್ಪಟ್ಟ ಇತರ ಆರು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ ಎಂದು ವಸೈವಿರಾರ್‌ ಮುನ್ಸಿಪಲ್‌ ಕಾರ್ಪೊರೇಷನ್‌ (ವಿವಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ , ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ತುರ್ತು ತಂಡಗಳು ಅವಶೇಷಗಳಲ್ಲಿ ಶೋಧ ಕಾರ್ಯ ಮುಂದುವರೆಸಿವೆ.
ಅವಶೇಷಗಳ ಅಡಿಯಲ್ಲಿ ಬೇರೆ ಯಾರೂ ಸಿಲುಕಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿಯುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸಾವನ್ನಪ್ಪಿದವರನ್ನು ಗೋವಿಂದ ಸಿಂಗ್‌ ರಾವತ್‌ (28), ಶುಭಂಗಿ ಪವನ್‌ ಸಹೇನಿ (40), ಕಾಶಿಶ್‌ ಪವನ್‌ ಸಹೇನಿ (35), ದೀಪಕ್‌ ಸಿಂಗ್‌ ಬೆಹ್ರಾ (25), ಸೋನಾಲಿ ರೂಪೇಶ್‌ ತೇಜಮ್‌ (41), ಹರೀಶ್‌ ಸಿಂಗ್‌ ಬಿಶ್‌್ತ (34), ಸಚಿನ್‌ ನೆವಾಲ್ಕರ್‌ (40) ದೀಪೇಶ್‌ ಸೋನಿ (41) ಎಂದು ಪ್ರಾಥಮಿಕ ಮಾಹಿತಿಯಲ್ಲಿ ಗುರುತಿಸಲಾಗಿದೆ.

ಸಂತೋಷದ ಕ್ಷಣ ಕ್ಷಣಕ್ಕೂ ಅವ್ಯವಸ್ಥೆಯಾಗಿ ಮಾರ್ಪಟ್ಟ ಭಯಾನಕ ದೃಶ್ಯವನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.ಪಾರ್ಟಿಯ ಸಮಯದಲ್ಲಿ ಜನರು ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಇಂದು ಭಾಗದ ಕಟ್ಟಡ ಕುಸಿದುಬಿತ್ತು ಎಂದು ಬದುಕುಳಿದ ಒಬ್ಬರು ಹೇಳಿದರು.

ಜನರು ಕಿರುಚುತ್ತಾ ಬಿಲ್ಡರ್‌ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.ಕಟ್ಟಡ ಕುಸಿತದ ಹಿಂದಿನ ಘಟನೆಗಳಂತೆ ಬಿರುಕುಗಳು ಅಥವಾ ರಚನಾತಕ ದೌರ್ಬಲ್ಯಗಳು ಮೊದಲೇ ಗೋಚರಿಸುತ್ತಿದ್ದವು, ಇಲ್ಲಿ ಅಂತಹ ಯಾವುದೇ ಎಚ್ಚರಿಕೆ ಚಿಹ್ನೆಗಳು ಇರಲಿಲ್ಲ ಎಂದು ನಿವಾಸಿಗಳು ಹೇಳಿದ್ದಾರೆ.ಹಠಾತ್‌ ಕುಸಿತವು ಕಟ್ಟಡದ ಸುರಕ್ಷತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಮತ್ತು ಈ ಪ್ರದೇಶದಲ್ಲಿ ಇದು ಅನಧಿಕೃತ ನಿರ್ಮಾಣ ಎನ್ನಲಾಗಿದೆ.

ಸ್ಥಳೀಯರು ಬಿಲ್ಡರ್‌ ಮತ್ತು ಅಧಿಕಾರಿಗಳ ಆಲಸ್ಯ ಮತ್ತು ನಿರ್ಲಕ್ಷ್ಯ ವನ್ನು ಆರೋಪಿಸಿದ್ದಾರೆ, ವಿವಿಎಂಸಿ ದೂರು ದಾಖಲಿಸಿದ ನಂತರ ಪೊಲೀಸರು ಬುಧವಾರ ಬಿಲ್ಡರ್‌ ಅನ್ನು ಬಂಧಿಸಿದ್ದಾರೆ.
ಅದೃಷ್ಟವಶಾತ್‌ ಕಟ್ಟಡ ಪಕ್ಕದ ಜಾಗದಲ್ಲಿದ್ದ ಮನೆ ಖಾಲಿಯಾಗಿತ್ತು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿವೇಕಾನಂದ ಕದಮ್‌ ಈ ಹಿಂದೆ ಹೇಳಿದ್ದಾರೆ.

ಕಳೆದ 2012 ರಲ್ಲಿ ನಿರ್ಮಿಸಲಾದ ರಮಾಬಾಯಿ ಅಪಾರ್ಟ್‌ಮೆಂಟ್‌ನಲ್ಲಿ 50 ಫ್ಲಾಟ್‌ಗಳಿವೆ ಮತ್ತು ಕುಸಿದ ಭಾಗದಲ್ಲಿ 12 ಅಪಾರ್ಟ್‌ಮೆಂಟ್‌ಗಳಿವೆ ಎಂದು ವಿವಿಎಂಸಿ ವಕ್ತಾರರು ದೃಢಪಡಿಸಿದರು.
ಜನದಟ್ಟಣೆಯ ಪ್ರದೇಶದಲ್ಲಿ ಅಪಘಾತಕ್ಕೀಡಾದ ಕಟ್ಟಡಕ್ಕೆ ಭಾರೀ ಯಂತ್ರೋಪಕರಣಗಳನ್ನು ತರಲು ಅಧಿಕಾರಿಗಳು ಆರಂಭದಲ್ಲಿ ಹೆಣಗಾಡಿದ್ದರಿಂದ ಅವಶೇಷಗಳನ್ನು ತೆಗೆಯುವುದು ವಿಳಂಬವಾಯಿತು.

ಕುಸಿತವು ಹಲವಾರು ಕುಟುಂಬಗಳನ್ನು ನಿರಾಶ್ರಿತರನ್ನಾಗಿ ಮಾಡಿದೆ.ಎಲ್ಲಾ ಬಾಧಿತ ಕುಟುಂಬಗಳನ್ನು ತಾತ್ಕಾಲಿಕವಾಗಿ ಚಂದನ್ಸರ್‌ ಸಮಾಜಮಂದಿರದಲ್ಲಿ ಇರಿಸಲಾಗಿದೆ. ನಾವು ಆಹಾರ, ನೀರು, ವೈದ್ಯಕೀಯ ನೆರವು ಮತ್ತು ಇತರ ಅಗತ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ ಎಂದು ವಿವಿಎಂಸಿ ಸಹಾಯಕ ಆಯುಕ್ತ ಗಿಲ್ಸನ್‌ ಗೊನ್ಸಾಲ್ವೆಸ್‌‍ ಹೇಳಿದ್ದಾರೆ.

RELATED ARTICLES

Latest News