Tuesday, November 25, 2025
Homeರಾಜ್ಯಡಿಸಿಎಂ ಡಿಕೆಶಿ ಬಿಗಿ ಪಟ್ಟು, ಮೆತ್ತಗಾದ ಸಿಎಂ ಸಿದ್ದರಾಮಯ್ಯ

ಡಿಸಿಎಂ ಡಿಕೆಶಿ ಬಿಗಿ ಪಟ್ಟು, ಮೆತ್ತಗಾದ ಸಿಎಂ ಸಿದ್ದರಾಮಯ್ಯ

DCM DK Suresh tightens grip, CM Siddaramaiah softens

ಬೆಂಗಳೂರು, ನ.24– ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿ ಸುವುದಾಗಿ ಪದೇ ಪದೇ ಹೇಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇದೇ ಮೊದಲ ಬಾರಿಗೆ ಹೇಳಿಕೆ ಬದಲಿಸಿದ್ದು, ಹೈಕಮಾಂಡ್‌ ಸೂಚನೆ ನೀಡಿದರೆ, ಮುಖ್ಯಮಂತ್ರಿ ಯಾಗಿ ಮುಂದುವರೆಯುತ್ತೇನೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಅವರ ಹೇಳಿಕೆ, ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಮುನ್ಸೂಚನೆ ನೀಡಿದೆ. ಎರಡೂವರೆ ವರ್ಷದ ಬಳಿಕ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ಬಂದಿದೆ. ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಅವರು, ನಾವು ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ.

ನಮಲ್ಲಿರುವ ಹೈಕಮಾಂಡ್‌ ತೀರ್ಮಾನ ಮಾಡಿದರೆ ಅದಕ್ಕೆ ಬದ್ಧವಾಗಿರುತ್ತೇವೆ. ನೀವೇ ಮುಂದುವರಿಯಿರಿ ಎಂದರೆ ಮುಂದುವರಿಯುತ್ತೇನೆ. ಅಂತಿಮವಾಗಿ ಹೈಕಮಾಂಡ್‌ ಹೇಳಿದಂತೆ ನಾನು ಮತ್ತು ಡಿ.ಕೆ. ಶಿವಕುಮಾರ್‌ ಇಬ್ಬರು ಒಪ್ಪಿಕೊಳ್ಳಬೇಕಾಗುತ್ತದೆ ಎಂದಿದ್ದಾರೆ.

ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗುತ್ತಾರೆಯೇ? ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಹೈಕಮಾಂಡ್‌ ಹೇಳಿದಂತೆ ಕೇಳುತ್ತೇವೆ ಎಂದ ಮೇಲೂ ಪುನಃ ಇದೇ ರೀತಿಯ ಪ್ರಶ್ನೆ ಕೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.4-5 ತಿಂಗಳ ಹಿಂದೆ ಸಂಪುಟ ಪುನರ್‌ರಚನೆ ಮಾಡುವ ಸಲುವಾಗಿ ಚರ್ಚಿಸಲು ದೆಹಲಿಗೆ ಹೋಗಿದ್ದೆ. ಆ ಸಂದರ್ಭದಲ್ಲಿ ಸಂಪುಟ ಪುನರ್‌ ರಚಿಸಿ ಎಂದು ಹೈಕಮಾಂಡ್‌ ಸಮತಿ ನೀಡಿತ್ತು. ಆದರೆ ಎರಡೂವರೆ ವರ್ಷದ ಬಳಿಕ ಸಂಪುಟ ಪುನರ್‌ರಚನೆ ಮಾಡುವುದಾಗಿ ತಾವು ಹೇಳಿ ಬಂದಿದ್ದಾಗಿ ತಿಳಿಸಿದರು. ಈಗ ಹೈಕಮಾಂಡ್‌ ಹೇಳಿದರೆ ಸಂಪುಟ ಪುನರ್‌ರಚಿಸಲಾಗುತ್ತದೆ. ನಾಯಕತ್ವ ಬದಲಾವಣೆ ವಿಷಯದಲ್ಲೂ ವರಿಷ್ಠರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.

ಮೆತ್ತಗಾದ ಸಿದ್ದರಾಮಯ್ಯ:
ಡಿ.ಕೆ.ಶಿವಕುಮಾರ್‌ ಬಣದ ಕೆಲ ಶಾಸಕರು ದೆಹಲಿಗೆ ತೆರಳಿ ವರಿಷ್ಠ ನಾಯಕರನ್ನು ಭೇಟಿ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಈವರೆಗೂ ಸಿದ್ದರಾಮಯ್ಯ ಅವರು 5 ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಪದೇಪದೇ ಪ್ರತಿಪಾದಿಸುತ್ತಿದ್ದರು. ಆದರೆ ಕೆಲ ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳು ಸಿದ್ದರಾಮಯ್ಯ ಅವರ ವಿಶ್ವಾಸವನ್ನು ಕುಗ್ಗಿಸಿದಂತೆ ಕಂಡುಬರುತ್ತದೆ.

ಡಿ.ಕೆ.ಶಿವಕುಮಾರ್‌ ಶತಾಯಗತಾಯ ಮುಖ್ಯಮಂತ್ರಿ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದು ತಮದೇ ಆದ ಕಾರ್ಯತಂತ್ರವನ್ನು ಅನುಸರಿಸುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಉಸಿರುಗಟ್ಟಿಸುವ ವಾತಾವರಣವನ್ನು ನಿರ್ಮಿಸಿದೆ. ಇಬ್ಬರೂ ಮುಖಾಮುಖಿ ಭೇಟಿಯಾದರೂ ಕೂಡ ನಾಯಕತ್ವದ ವಿಚಾರದಲ್ಲಿ ಇಬ್ಬರ ನಡುವೆಯೂ ಮುಸುಕಿನ ಗುದ್ದಾಟ ಬಿರುಸಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಸಿದ್ದರಾಮಯ್ಯ ಅವರು ತಮ ಗತ್ತು-ಗೈರತ್ತುಗಳನ್ನು ಬದಿಗಿಟ್ಟು ಮೆತ್ತಗಾದಂತೆ ಕಂಡುಬರುತ್ತಿದೆ. ಹೈಕಮಾಂಡ್‌ ಹೇಳುವ ನಿರ್ಧಾರಗಳಿಗೆ ಬದ್ಧ ಎಂದು ಒಂದು ವಾಕ್ಯದ ಉತ್ತರಕ್ಕೆ ಸೀಮಿತವಾಗಿದ್ದಾರೆ.ಡಿ.ಕೆ.ಶಿವಕುಮಾರ್‌ ಅವರು ಬೆಂಗಳೂರಿನಲ್ಲಿಂದು ಮಾಧ್ಯಮದವರನ್ನು ಮುಖಾಮುಖಿಯಾದರೂ, ಯಾವುದೇ ಹೇಳಿಕೆ ನೀಡದೆ ಕೈಬೀಸಿ ಮುಂದೆ ಸಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಒಟ್ಟಾಗಿ ಭಾಗವಹಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ಅನ್ಯಮನಸ್ಕರಾಗಿಯೇ ಕಾಣಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್‌ ಕೂಡ ತಮ ಮುಖ ಭಾವವನ್ನು ಬಿರುಸಾಗಿಯೇ ಇಟ್ಟುಕೊಂಡಿರುವುದು ಕಂಡು ಬಂತು. ಇದಕ್ಕೂ ಮೊದಲು ಇಬ್ಬರೂ ನಾಯಕರು ಯಾವುದೇ ಕಾರ್ಯಕ್ರಮಗಳಲ್ಲಾದರೂ ಪರಸ್ಪರ ಸ್ನೇಹ ಸೌಹಾರ್ದತೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದಿನ ಕಾರ್ಯಕ್ರಮದಲ್ಲಿ ಆ ಆತೀಯತೆ ಕಾಣಲಿಲ್ಲ.

RELATED ARTICLES
- Advertisment -

Latest News