Sunday, August 31, 2025
Homeರಾಜ್ಯಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿ ರಾಜ್ಯದಲ್ಲಿ ಮುನುವರೆದ ಮಳೆ ಆರ್ಭಟ, ಹಲವೆಡೆ ಪ್ರವಾಹಭೀತಿ

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿ ರಾಜ್ಯದಲ್ಲಿ ಮುನುವರೆದ ಮಳೆ ಆರ್ಭಟ, ಹಲವೆಡೆ ಪ್ರವಾಹಭೀತಿ

Heavy rains continue in coastal, Malnad and North Karnataka,

ಬೆಂಗಳೂರು,ಆ.30– ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಆರ್ಭಟ ಮುಂದುವರೆದಿದ್ದು, ಭಾರೀ ಮಳೆ ಮತ್ತು ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಿಡುತ್ತಿರುವುದರಿಂದ ಪ್ರವಾಹಭೀತಿ ಎದುರಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಚಿಕ್ಕಮಗಳೂರು :
ಕಾಫಿನಾಡಿನಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಮಳೆಯ ಅಬ್ಬರಕ್ಕೆ ಜನರು ಭಾರೀ ತೊಂದರೆ ಅನುಭವಿಸುವಂತಾಗಿದೆ. ಮಳೆ ಹಿನ್ನೆಲೆಯಲ್ಲಿ ಇಂದು ಅಂಗನವಾಡಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಆದೇಶ ಹೊರಡಿಸಿದ್ದಾರೆ.

ಕಳಸ, ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ ತಾಲ್ಲೂಕುಗಳ ಜೊತೆಗೆ ಚಿಕ್ಕಮಗಳೂರು ತಾಲ್ಲೂಕಿನ ಜಾಗರಖಾಂಡ್ಯ, ಆಲೂರು, ಕಸಬಾ, ಹಂಬಳೆ, ವಸ್ತಾರೆ, ಆವತಿ ಹಾಗೂ ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಮತ್ತು ಲಿಂಗದಹಳ್ಳಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಉತ್ತರಕನ್ನಡ :
ಉತ್ತರಕನ್ನಡ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಜೋರಾಗಿದ್ದು, ಹೊನ್ನಾವರ ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಎಲ್ಲೋ ಅಲರ್ಟ್‌ ಘೋರ್ಷಿಸಲಾಗಿದೆ.

ಮಳೆ ನಿಂತರೂ ತಗ್ಗದ ನೀರು :
ಬೀದರ್‌ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಸಹ ಪ್ರವಾಹ ತಗ್ಗಿಲ್ಲ. ಬ್ಯಾಲಳ್ಳಿ ಸಮೀಪದ ಕಾರಂಜ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಮುಂಜಾಗ್ರತಾ ಕ್ರಮವಾಗಿ ನದಿಗೆ ಹರಿಬಿಡಲಾಗಿದೆ. ಮತ್ತೊಂದೆಡೆ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದರಿಂದ ಮಾಂಜ್ರಾದಲ್ಲಿ ಜಲಮಟ್ಟ ಕ್ರಮೇಣ ಹೆಚ್ಚಾಗುತ್ತಿದ್ದು, ಪ್ರವಾಹ ಭೀತಿ ಆವರಿಸಿದೆ.

ಜಿಲ್ಲೆಯಾದ್ಯಂತ ಕೃಷಿ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿವೆ. ಅಬ್ಜಲ್‌ಪುರ ತಾಲ್ಲೂಕಿನ ಮಣ್ಣೂರು-ಕರಜಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದ ರಸ್ತೆ ನೀರಿನಿಂದ ಮುಳುಗಡೆಯಾಗಿದ್ದು, ಸಂಚಾರ ಸ್ತಬ್ದಗೊಂಡಿದೆ.

ಲಿಂಗನಮಕ್ಕಿ ಅಣೆಕಟ್ಟು ಭರ್ತಿಯಾಗುವ ಹಂತಕ್ಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದ್ದು, ಗೇರುಸೊಪ್ಪ ಅಣೆಕಟ್ಟಿನಲ್ಲಿ ವಿದ್ಯುತ್‌ ಉತ್ಪಾದಿಸಿ ಮತ್ತು ತೂಗುಗೇಟುಗಳ ಮೂಲಕ ಒಟ್ಟು 88,500 ಕ್ಯೂಸೆಕ್‌್ಸ ನೀರನ್ನು ನದಿಗೆ ಬಿಡಲಾಗಿದೆ.

ಇದರಿಂದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ನೀರು ನುಗ್ಗಿದೆ. ಭಟ್ಕಳ, ಕುಮಟ, ಗೋಕರ್ಣ, ಅಂಕೋಲ, ಕಾರವಾರ ಭಾಗದಲ್ಲಿ ಹಳ್ಳಕೊಳ್ಳಗಳು, ನದಿಗಳು ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕೃಷ್ಣಾ ನದಿಗೆ 74 ಸಾವಿರ ಕ್ಯೂಸೆಕ್‌್ಸ ನೀರು ಹರಿದುಬರುತ್ತಿದೆ.

ಘಟಪ್ರಭ ಹಾಗೂ ಮಲಪ್ರಭ ಅಣೆಕಟ್ಟುಗಳಲ್ಲೂ ಸಹ ಒಳಹರಿವು ಹೆಚ್ಚಳವಾಗಿದೆ. ಕೇರಳದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹೆಚ್‌.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ಸ್ ಗೂ ಹೆಚ್ಚು ನೀರು ಹರಿದುಬರುತ್ತಿದ್ದು, ಬೀಚನಹಳ್ಳಿ-ಬೀದರಹಳ್ಳಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮುಳುಗಡೆಯಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಉತ್ತರಕರ್ನಾಟಕ ಭಾಗದ ಬೀದರ್‌, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಜಮೀನುಗಳಿಗೆ ನೀರು ನುಗ್ಗಿ ಹೆಸರು, ಉದ್ದು, ಜೋಳ, ಕಬ್ಬು, ಭತ್ತ ಸೇರಿದಂತೆ ಮತ್ತಿತರ ಬೆಳೆಗಳು ಜಲಾವೃತವಾಗಿ ಭಾರೀ ನಷ್ಟ ಸಂಭವಿಸಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

RELATED ARTICLES

Latest News