ಬೆಂಗಳೂರು, ಆ.30-ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಷಡ್ಯಂತ್ರ ಹಾಗೂ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಈ ಬಗ್ಗೆ ಎನ್‌ಐಎ ತನಿಖೆಗೆ ಒತ್ತಾಯಿಸಿ ನಾಳೆ ಧರ್ಮಸ್ಥಳ ಸತ್ಯಯಾತ್ರೆಯನ್ನು ಕೈಗೊಳ್ಳಲಿದೆ.
ಯಾತ್ರೆಗೆ ಸಕಲ ಸಿದ್ಧತೆ ಮಾಡಿಕೊಂಡಿರುವ ಜೆಡಿಎಸ್, ನಾಳೆ ಹಾಸನದಿಂದ ಧರ್ಮಸ್ಥಳಕ್ಕೆ ಈ ಯಾತ್ರೆ ಕೈಗೊಳ್ಳಲಾಗುತ್ತದೆ. ಜೆಡಿಎಸ್ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಸಂಸದರು, ಮಾಜಿ ಸಚಿವರು, ಮಾಜಿ ಶಾಸಕರು, ಕಾರ್ಯಕರ್ತರು, ಭಕ್ತರು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಹಾಸನದ ಕಂದಲಿಯಲ್ಲಿ ನಾಳೆ ಬೆಳಿಗ್ಗೆ 7ರಿಂದ 10 ಗಂಟೆಯವರೆಗೆ ಸಮಾವೇಶಗೊಳ್ಳಲಿದ್ದಾರೆ. ಅಲ್ಲಿ ಉಪಹಾರ ಸೇವಿಸಿದ ನಂತರ ಯಾತ್ರೆ ಆರಂಭಿಸಲಿದ್ದಾರೆ.
ಯಾತ್ರೆ ಹಿನ್ನಲೆಯಲ್ಲಿ ವಸ್ತ್ರ ಸಂಹಿತೆ ಹಾಗೂ ಯಾತ್ರೆಯ ಮಾರ್ಗದ ಬಗ್ಗೆ ಮಾಹಿತಿ ನೀಡಲಾಗಿದೆ. ತುರ್ತು ಸೇವೆಗಳಿಗೆ ಪಕ್ಷದ ಮುಖಂಡರನ್ನು ನಿಯೋಜಿಸಲಾಗಿದೆ. ಹಾಸನದಿಂದ ಶಿರಾಡಿಘಾಟ್ ಮೂಲಕ ಯಾತ್ರೆ ಧರ್ಮಸ್ಥಳವನ್ನು ಸೇರುವ ಕಾರ್ಯಕ್ರಮವಿದೆ.
ಕೊಟ್ಟಿಗೆಹಾರ, ಸಂಪಾಜೆಘಾಟ್,ಆಗುಂಬೆ ಹಾಗೂ ಚಾರ್ಮಾಡಿ ಘಾಟ್ ಮೂಲಕ ಬರುವವರಿಗೆ ನಾಳೆ ಮಧ್ಯಾಹ್ನ ಒಂದು ಗಂಟೆಯೊಳಗೆ ನೇತ್ರಾವತಿ ನದಿ ಬಳಿಯ ಪಾರ್ಕಿಂಗ್ ಸ್ಥಳ ತಲುಪುವಂತೆ ಜೆಡಿಎಸ್ ಕೋರಿದೆ.
ಎಲ್ಲರಿಗೂ ಗುರುತಿನ ಚೀಟಿ ವಿತರಿಸಿ ನೇತ್ರಾವತಿ ನದಿ ಬಳಿಯ ಪಾರ್ಕಿಂಗ್ ಸ್ಥಳದಿಂದ ಧರ್ಮಸ್ಥಳದವರೆಗೆ ಒಂದು ಕಿ.ಮೀ.ಪಾದಯಾತ್ರೆ ಮಾಡಲು ಉದ್ದೇಶಿಸಲಾಗಿದೆ. ಬಳಿಕ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅನಂತರ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ತಮ ತಮ ಊರುಗಳಿಗೆ ಮರಳುವ ಕಾರ್ಯಕ್ರಮವಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಪಕ್ಷದ ನಾಯಕರು, ಮುಖಂಡರು ಭೇಟಿ ಮಾಡಿ ಬೆಂಬಲ ಸೂಚಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.