Sunday, August 31, 2025
Homeರಾಜ್ಯನೋಂದಣಿ ಶುಲ್ಕ ಏರಿಕೆ ಮಾಡಿದ ಜನಪೀಡಕ ಕಾಂಗ್ರೆಸ್‌‍ ಸರ್ಕಾರ : ಬಿವೈವಿ ಕಿಡಿ

ನೋಂದಣಿ ಶುಲ್ಕ ಏರಿಕೆ ಮಾಡಿದ ಜನಪೀಡಕ ಕಾಂಗ್ರೆಸ್‌‍ ಸರ್ಕಾರ : ಬಿವೈವಿ ಕಿಡಿ

BYV lashes out at Congress government for raising registration fees

ಬೆಂಗಳೂರು,ಆ.30- ರಾಜ್ಯದ ಇತಿಹಾಸದಲ್ಲೇ ಈಗಿನ ಕಾಂಗ್ರೆಸ್‌‍ ಸರ್ಕಾರದಷ್ಟು ಜನಪೀಡಕ ಸರ್ಕಾರವನ್ನು ಕರ್ನಾಟಕದ ಜನತೆ ನೋಡೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್‌್ಸ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆಲೆ ಏರಿಕೆ, ಭ್ರಷ್ಟಾಚಾರ ಕಾಂಗ್ರೆಸ್‌‍ ಸರ್ಕಾರದ ನಿತ್ಯ ಗ್ಯಾರಂಟಿಯಾಗಿದೆ. ರಾತ್ರಿ ಮಲಗಿ ಬೆಳಗೆದ್ದರೆ ಯಾವುದರ ಬೆಲೆ ಏರಿಕೆಯಾಗುವುದೋ ಎಂಬ ಆತಂಕದ ಗ್ಯಾರಂಟಿ ಜನಸಾಮಾನ್ಯರಲ್ಲಿ ಮನೆಮಾಡಿದೆ. ರಾಜ್ಯದ ಆರ್ಥಿಕ ಸ್ಥಿತಿಯನ್ನು ಸಮತೋಲನಕ್ಕೆ ತರಲು ಸಾಧ್ಯವಾಗದ ಪರಿಸ್ಥಿತಿಗೆ ತಲುಪಿ ದಿವಾಳಿ ಸ್ಥಿತಿ ಅನುಭವಿಸುತ್ತಿರುವ ರಾಜ್ಯ ಸರ್ಕಾರ ಬೆಲೆ ಏರಿಕೆಯ ಅಸ್ತ್ರವನ್ನು ಪ್ರಯೋಗಿಸುವುದೊಂದೇ ತನಗುಳಿದಿರುವ ದಾರಿ ಎಂದು ನಿರ್ಧರಿಸಿದೆ. ಆ ಮೂಲಕ ಜನರ ಬದುಕನ್ನು ಹಿಂಡುತ್ತಿದೆ ಎಂದು ವಾಗ್ದಳಿ ನಡೆಸಿದ್ದಾರೆ.

ಈ ಹಿಂದೆಯೇ ಮುದ್ರಾಂಕ ಶುಲ್ಕವನ್ನು ವಿಪರಿತ ಹೆಚ್ಚಿಸುವ ಮೂಲಕ ಜನರ ಸೂರು ಹೊಂದುವ ಕನಸನ್ನು ಭಗ್ನಗೊಳಿಸಿದ್ದ ಸರ್ಕಾರ ಮತ್ತೆ ನೋಂದಣಿ ಶುಲ್ಕವನ್ನು ಶೇ.1ರಿಂದ 2ಕ್ಕೆ ಹೆಚ್ಚಿಸುವ ಮೂಲಕ ಅಕ್ಷರಶಃ ನೋಂದಣಿ ದರೋಡೆಗಿಳಿದಿದೆ, ಸರ್ಕಾರದ ಈ ಕ್ರಮವನ್ನು ಅತ್ಯುಗ್ರವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ.

ಸುಳ್ಳು ಭರವಸೆಗಳು ಹಾಗೂ ಯೋಜನೆಗಳನ್ನು ಪೂರೈಸಲಾಗದೇ ರಾಜ್ಯದ ಖಜಾನೆಯನ್ನು ಬರಿದು ಮಾಡಿಕೊಂಡು ನಿತ್ಯವೂ ಒಂದಿಲ್ಲೊಂದು ದರ ಏರಿಸಿ ರಾಜ್ಯದ ಜನತೆಯನ್ನು ಸಂಕಷ್ಟಕ್ಕೆ ತಳ್ಳುವ ಕಾರ್ಯವನ್ನು ಕಾಂಗ್ರೆಸ್‌‍ ಮತ್ತೆ ಮುಂದುವರೆಸಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಸಾಮಾನ್ಯವಾಗಿ ಸ್ಥಿರಾಸ್ತಿಗಳ ಕ್ರಯಪತ್ರ ಮತ್ತು ಜಿಪಿಎ ನೋಂದಣಿ, ಜಂಟಿ ಅಭಿವೃದ್ಧಿ ಕರಾರುಪತ್ರ, ಸ್ವಾಧೀನ ರಹಿತ ಕರಾರು ಪತ್ರ, ಭೋಗ್ಯ ನೋಂದಣಿ ಮಾಡುವವರು ಶೇ.2 ರಷ್ಟು ಪಾವತಿ ಮಾಡಲೇ ಬೇಕಾದ ಸ್ಥಿತಿಗೆ ತಲುಪಿದ್ದಾರೆ. ಈ ಸರ್ಕಾರದ ಬೆಲೆ ಏರಿಕೆ ಬರೆಯಿಂದಾಗಿ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ಕೂಡಲೇ ನೋಂದಣಿ ಶುಲ್ಕದ ಹೇರಿಕೆಯನ್ನು ವಾಪಾಸ್‌‍ ತೆಗೆದುಕೊಳ್ಳಲಿ, ಇಲ್ಲದಿದ್ದರೆ ಜನಾಕ್ರೋಶ ಎದುರಿಸಲು ಸಿದ್ದವಾಗಲಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಕನ್ನಡದ ಪ್ರತಿಭಾವಂತ ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್‌ ಅವರ ಸಮಾಧಿ ಕುರಿತು ಉಲ್ಲೇಖಿಸಿರುವ ವಿಜಯೇಂದ್ರ, ಡಾ.ವಿಷ್ಣುವರ್ಧನ್‌ ಸಮಾಧಿ ವಿವಾದದಲ್ಲಿ ಸಿಲುಕಿಕೊಂಡಿದ್ದು ನಿಜಕ್ಕೂ ಬೇಸರದ ಸಂಗತಿ. ವಿಷ್ಣು ಅವರ ಹಾಗೂ ಹಿರಿಯ ನಟ ಟಿ.ಎನ್‌.ಬಾಲಕೃಷ್ಣ ಅವರ ಸಮಾಧಿ ಸ್ಥಳಗಳು ಸಾರಕಗಳಾಗಿ ಅಭಿಮಾನ್‌ ಸ್ಟುಡಿಯೋ ಆವರಣದಲ್ಲಿ ಶೀಘ್ರ ನಿರ್ಮಾಣವಾಗಲಿ.

ಅರಣ್ಯ ಭೂಮಿ ಎಂದು ಸದ್ಯ ಅಭಿಮಾನ್‌ ಸ್ಟುಡಿಯೋ ಜಾಗವನ್ನು ವಶಪಡಿಸಿಕೊಳ್ಳಲು ಹೊರಟಿರುವ ಸರ್ಕಾರದ ನಿರ್ಧಾರ ವಿಷ್ಣು ಸಾರಕ ನಿರ್ಮಾಣಕ್ಕೆ ಮತ್ತೊಂದು ಗೊಂದಲವಾಗಿ ಮಾರ್ಪಡದಿರಲಿ. ಅಭಿಮಾನಿಗಳ ಮನಸ್ಸನ್ನು ಘಾಸಿಗೊಳಿಸದಂತೆ ಸರ್ಕಾರ ನಡೆದುಕೊಳ್ಳಲಿ ಎಂದು ಅವರು ಸಲಹೆ ಮಾಡಿದ್ದಾರೆ.

RELATED ARTICLES

Latest News