Sunday, August 31, 2025
Homeರಾಜ್ಯಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಶೋಕ್‌ ವಾಗ್ದಾಳಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಅಶೋಕ್‌ ವಾಗ್ದಾಳಿ

Ashok lashes out at Congress government

ಬೆಂಗಳೂರು,ಸೆ.30– ಕೇಂದ್ರ ಸರ್ಕಾರ ಸರಕು ಸೇವಾ ತೆರಿಗೆ( ಜಿಎಸ್‌‍ಟಿ) ದರವನ್ನು ಸರಳೀಕರಣಗೊಳಿಸಲು ಹೊರಟಿದ್ದರೆ, ರಾಜ್ಯದ ಆದಾಯ ಖೋತಾವಾಗುತ್ತದೆ ಎಂದು ಕ್ಯಾತೆ ತೆಗೆದು ಜನಪರವಾದ ಜಿಎಸ್ಟಿ ಸುಧಾರಣೆಗೆ ಕಲ್ಲು ಹಾಕಲು ಜನವಿರೋಧಿ ಕಾಂಗ್ರೆಸ್‌‍ ಸರ್ಕಾರ ಹೊರಟಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಆಹಾರ ಪದಾರ್ಥಗಳು, ಜವಳಿ ಉತ್ಪನ್ನಗಳು, ಟಿವಿ, ರೆಪ್ರಿಜರೇಟರ್‌, ಆರೋಗ್ಯ ವಿಮೆ, ಸಿಮೆಂಟ್‌ ಸೇರಿದಂತೆ ಜನಸಾಮಾನ್ಯರು ಬಳಸುವ ಅನೇಕ ದಿನನಿತ್ಯ ಹಾಗೂ ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊರಟಿದ್ದರೆ ಅದಕ್ಕೆ ಕಾಂಗ್ರೆಸ್‌‍ ಸರ್ಕಾರ ಅಡ್ಡಗಾಲು ಹಾಕಿದೆ ಎಂದು ಕಿಡಿಕಾರಿದ್ದಾರೆ.

ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಮತ್ತೊಮೆ ಸೆಡ್ಡು ಹೊಡೆದ ಸಿಎಂ ಸಿದ್ದರಾಮಯ್ಯ ಬಣ,ಕೇಂದ್ರ ಸರ್ಕಾರ ಜಿಎಸ್ಟಿ ದರಗಳನ್ನು ಸರಳೀಕರಣ ಮಾಡಲು ಹೊರಟಿದ್ದರೆ ರಾಜ್ಯದ ಆದಾಯ ಖೋತಾ ಆಗುತ್ತದೆ ಎನ್ನುವ ಕ್ಯಾತೆ ತೆಗೆದು ಜನಪರವಾದ ಜಿಎಸ್ಟಿ ಸುಧಾರಣೆಗೆ ಕಲ್ಲು ಹಾಕಲು ಹೊರಟಿದೆ ಈ ಜನವಿರೋಧಿ ಸರ್ಕಾರ ಎಂದು ತಾರಟೆಗೆತೆಗೆದುಕೊಂಡಿದೆ.

ಪ್ರಧಾನಮಂತ್ರಿ ನರೇಂದ್ರಮೋದಿ ಅವರು ತಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ದೀಪಾವಳಿ ವೇಳೆಗೆ ಜಿಎಸ್‌‍ಟಿ ಸುಧಾರಣೆ ಮಾಡುವ ಬಗ್ಗೆ ಘೋಷಣೆ ಮಾಡಿದಾಗ ಇದಕ್ಕೆ ರಾಹುಲ್‌ ಗಾಂಧಿ ಅವರ ಪ್ರತಿಪಾದನೆಯೇ ಕಾರಣ ಎಂದು ಬೀಗಿ ಪುಕ್ಕಟೆ ಕ್ರೆಡಿಟ್‌ ಪಡೆದುಕೊಳ್ಳುವ ಪ್ರಯತ್ನ ಮಾಡಿದ್ದ ಕಾಂಗ್ರೆಸ್‌‍ ಪಕ್ಷ, ಈಗ ಅದೇ ಜಿಎಸ್‌‍ಟಿ ಸುಧಾರಣೆ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಕ್ಯಾತೆ ತೆಗೆಯುತ್ತಿರುವುದು ಆ ಪಕ್ಷದ ದ್ವಂದ್ವ ನೀತಿ, ಆಷಾಢಭೂತಿತನವನ್ನು ಬಯಲು ಮಾಡಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್‌ ಗಾಂಧಿ ಹೇಳಿದ್ದಕ್ಕೆಲ್ಲ ಉಲ್ಟಾ ಹೊಡೆಯುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ, ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ಮೂಲಕ ಮತಗಳ್ಳತನ ಅರೋಪವನ್ನು ಠುಸ್‌‍ ಮಾಡಿದ ನಂತರ ಈಗ ಜಿಎಸ್‌‍ಟಿ ಸುಧಾರಣೆ ಬಗ್ಗೆ ರಾಹುಲ್‌ ಗಾಂಧಿ ಹೇಳಿಕೆಗೆ ತದ್ವಿರುದ್ಧವಾದ ರಾಗ ತೆಗುವ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರ ಮೂಲಕ ಮತ್ತೊಮೆ ರಾಹುಲ್‌ ಗಾಂಧಿ ಅವರಿಗೆ ಸೆಡ್ಡು ಹೊಡೆಯುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಎರಡು ವರ್ಷಗಳಲ್ಲಿ ನೀರು, ಹಾಲು, ಕರೆಂಟ್‌, ಪೆಟ್ರೋಲ್‌, ಡೀಸೆಲ್‌, ಆಸ್ತಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೀಗೆ ಪ್ರತಿಯೊಂದು ವಸ್ತು, ಸೇವೆಗಳ ಬೆಲೆ ಏರಿಕೆ ಮಾಡಿ, ತೆರಿಗೆ ಹೆಚ್ಚಿಸಿ ಜನಸಾಮಾನ್ಯರ ರಕ್ತ ಹೀರುತ್ತಿದೆ. ಇದು ಸಾಲದೆಂದು ಈಗ ಕೇಂದ್ರ ಸರ್ಕಾರ ಜಿಎಸ್‌‍ ದರಗಳನ್ನು ಕಡಿಮೆ ಮಾಡಲು ಹೊರಟಿದ್ದರೆ ಅದನ್ನೂ ವಿರೋಧ ಮಾಡಲು ಮುಂದಾಗಿದೆ. ಒಟ್ಟಿನಲ್ಲಿ ಜನವಿರೋಧಿ ಕಾಂಗ್ರೆಸ್‌‍ ಸರ್ಕಾರಕ್ಕೆ ತೆರಿಗೆ ಭಾರ ಇಳಿಸುವುದಕ್ಕಿಂತ, ಸರ್ಕಾರದ ಆದಾಯವೇ ಆದ್ಯತೆ ಆಗಿರುವುದು ಕನ್ನಡಿಗರ ದುರದೃಷ್ಟ ಎಂದು ಟೀಕಿಸಿದ್ದಾರೆ.

ಆಸ್ತಿ ನೋಂದಣಿ ಶುಲ್ಕ ಕಡಿಮೆ ಮಾಡಿ:
ಮತ್ತೊಂದು ಪೋಸ್ಟ್‌ ನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಕಾಂಗ್ರೆಸ್‌‍ ಸರ್ಕಾರ ಜನರ ಜೇಬಿಗೆ ಕನ್ನ ಹಾಕದ ದಿನವಿಲ್ಲ.ನೀರು, ಹಾಲು, ಪೆಟ್ರೋಲ್‌, ಡಿಸೇಲ್‌, ಕರೆಂಟು, ಬಸ್ಸು, ಮೆಟ್ರೋ, ಆಸ್ತಿ ತೆರಿಗೆ, ಜನನ ಮರಣ ಪ್ರಮಾಣ ಪತ್ರದ ಶುಲ್ಕ ಸೇರಿ ಎಲ್ಲಾ ವಸ್ತು/ಸೇವೆಗಳ ಬೆಲೆಯನ್ನು ಈಗಾಗಲೇ ಮನಬಂದಂತೆ ಏರಿಸಿರುವ ಕಾಂಗ್ರೆಸ್‌‍ ಸರ್ಕಾರದ ವಕ್ರದೃಷ್ಟಿ ಈಗ ಆಸ್ತಿ ನೋಂದಣಿ ಶುಲ್ಕದ ಮೇಲೆ ಬಿದ್ದಿದೆ ಎಂದು ಗುಡುಗಿದ್ದಾರೆ. ಆಸ್ತಿ ನೋಂದಣಿ ಶುಲ್ಕವನ್ನು ಏಕಾಏಕಿ ಶೇ.100 ರಷ್ಟು ಏರಿಸುವ ಮೂಲಕ ಕಾಂಗ್ರೆಸ್‌‍ ಸರ್ಕಾರ ಮತ್ತೊಮೆ ತನ್ನ ಜನವಿರೋಧಿ ನೀತಿಯನ್ನು ನಿರ್ಲಜ್ಜವಾಗಿ ಪ್ರದರ್ಶಿಸಿದೆ ಎಂದಿದ್ದಾರೆ.

RELATED ARTICLES

Latest News