ವಾಷಿಂಗ್ಟನ್,ಸೆ.2- ಬಾಡಿ ಬಿಲ್ಡರ್ ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕರ್ನಾಟಕದ ಕೋಲಾರದ ಸುರೇಶ್ ಬಾಬು ಎಂಬುವರು ಅಮೆರಿಕದ ಫ್ಲೋರಿಡಾದಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕಳೆದ ಒಂದು ವಾರದ ಹಿಂದೆ ಫ್ಲೋರಿಡಾದಲ್ಲಿ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಈ ಹಿಂದೆ ಉಪ್ಪಿ ಮತ್ತು ಉಪ್ಪಿಟ್ಟು ಸೇರಿದಂತೆ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಅವರು ದೈಹಿಕ ಆಕರ್ಷಣೆ ಮತ್ತು ಶಿಸ್ತಿನ ವ್ಯಕ್ತಿತ್ವದಿಂದ ಅತಿ ಚಿಕ್ಕವಯಸ್ಸಿನಲ್ಲೇ ಎತ್ತರಕ್ಕೆ ಬೆಳೆದಿದ್ದರು.
ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರಿಗೆ ಫಿಟ್ನೆಸ್ ತರಬೇತುದಾರರಾಗಿದ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಬೆಂಗಳೂರಿನ ಕೆಲವು ಕಡೆ ಫಿಟ್ನೆಸ್ ಕೇಂದ್ರಗಳನ್ನು ತೆರೆದು ಯುವಕ ಮತ್ತು ಯುವತಿಯರಿಗೆ ತರಬೇತಿಯನ್ನು ಕೊಡುತ್ತಿದ್ದರು. ಕರ್ನಾಟಕದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದ ಅವರು ದೂರದ ಅಮೆರಿಕಾದಲ್ಲಿ ಫೆಟ್ನೆಸ್ ತರಬೇತಿಯನ್ನು ಪ್ರಾರಂಭಿಸಿದ್ದರು. ಅಲ್ಲಿ ನೆಲೆಸಿರುವ ಕರ್ನಾಟಕದವರಿಗೂ ತರಬೇತಿಯನ್ನು ನೀಡುತ್ತಿದ್ದರು.
ಅಪಘಾತಕ್ಕೆ ನಿಖರವಾದ ಕಾರಣ ಏನೆಂಬುದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ.
ಸುರೇಶ್ ಬಾಬುರವರ ಸಾವಿನ ಸುದ್ದಿಯು ಕೋಲಾರದ ಗಾಂಧಿನಗರದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ. ಅವರ ಸಾಧನೆಯು ಕೋಲಾರದ ಯುವಕರಿಗೆ ಸ್ಫೂರ್ತಿಯಾಗಿತ್ತು. ಬಡತನದಿಂದ ಹೊರಬಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಅವರ ಜೀವನವು ಮಾದರಿಯಾಗಿದೆ ಎಂದಿದ್ದಾರೆ.
ಸುರೇಶ್ ಬಾಬು ಅವರು ಕರ್ನಾಟಕದ ಬಾಡಿಬಿಲ್ಡಿಂಗ್ ಸಮುದಾಯಕ್ಕೆ ಗಣನೀಯ ಕೊಡುಗೆ ನೀಡಿದ್ದರು. ರಾಜ್ಯ ಮಟ್ಟದ ಸ್ಪರ್ಧೆಗಳಿಂದ ಹಿಡಿದು ಏಷಿಯನ್ ಬಾಡಿಬಿಲ್ಡಿಂಗ್ ಚಾಂಪಿಯನ್ಶಿಪ್ನಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪದಕಗಳನ್ನು ಗೆದ್ದಿದ್ದರು. ಬಾಡಿಬಿಲ್ಡಿಂಗ್ ಕ್ಷೇತ್ರದಲ್ಲಿ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಮಿಸ್ಟರ್ ಕರ್ನಾಟಕ ಮತ್ತು ಮಿಸ್ಟರ್ ಇಂಡಿಯಾ ಶ್ರೀರ್ಷಿಕೆಗಳನ್ನು ಗೆದ್ದಿದ್ದ ಅವರು, ದೇಹದಾರ್ಢ್ಯ ಕ್ಷೇತ್ರದಲ್ಲಿ ಯುವಕರಿಗೆ ಸ್ಫೂರ್ತಿಯಾಗಿದ್ದರು.
ಅವರ ಫಿಟ್ನೆಸ್ ತರಬೇತಿಯು ಕೇವಲ ಕ್ರೀಡಾಪಟುಗಳಿಗೆ ಮಾತ್ರವಲ್ಲ, ಸಾಮಾನ್ಯ ಜನರಿಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಸ್ಫೂರ್ತಿದಾಯಕ. ಬಾಡಿಬಿಲ್ಡಿಂಗ್ ಜೊತೆಗೆ, ಸಿನಿಮಾ ಮತ್ತು ಮಾಡಲಿಂಗ್ ಕ್ಷೇತ್ರದಲ್ಲೂ ಅವರು ತಮ ಛಾಪು ಮೂಡಿಸಿದ್ದರು. ಇದೀಗ ಸುರೇಶ್ಬಾಬುರವರ ನಿಧನ ಅವರ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಆಘಾತ ಉಂಟು ಮಾಡಿದೆ.
- ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್
- ಟಿ20 ಕ್ರಿಕೆಟ್ಗೆ ಮಿಚೆಲ್ ಸ್ಟಾರ್ಕ್ ವಿದಾಯ
- ಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ
- ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ
- ಉದ್ಯಮಿ ಅಪಹರಿಸಿ ಜೀವ ಬೆದರಿಕೆ ಹಾಕಿ 3 ಲಕ್ಷ ರೂ. ಪಡೆದಿದ್ದ ನಾಲ್ವರು ರೌಡಿ ಸೇರಿ 6 ಮಂದಿ ಅರೆಸ್ಟ್