ಬೆಂಗಳೂರು, ಸೆ.2- ಧರ್ಮಸ್ಥಳದ ಪ್ರಕರಣಗಳ ಕುರಿತು ತನಿಖೆ ನಡೆಸುತ್ತಿರುವ ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಇಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.ಇಂದು ಬೆಳಗ್ಗೆ ಸದಾಶಿವನಗರದಲ್ಲಿರುವ ಮನೆಗೆ ಭೇಟಿ ನೀಡಿದ್ದ ಪ್ರಣಬ್ ಮೊಹಾಂತಿ ಈವರೆಗಿನ ತನಿಖೆಯ ಮಾಹಿತಿಗಳನ್ನು ಗೃಹ ಸಚಿವರೊಂದಿಗೆ ಹಂಚಿಕೊಂಡಿದ್ದಾರೆ.
ಬಂಧಿತ ಆರೋಪಿ ಚಿನ್ನಯ್ಯನ ಜೊತೆ ಸಭೆ ನಡೆಸಿರುವವರ ಮಾಹಿತಿ ಹಾಗೂ ಎಲ್ಲೆಲ್ಲಿ ಯಾವ ಯಾವ ರೀತಿಯ ಮಾತುಕತೆಗಳಾಗಿವೆ. ಆರೋಪಿ ಚಿನ್ನಯ್ಯ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾನೆ, ಆತ ರೆಸಾರ್ಟ್ ಹಾಗೂ ಹೋಟೆಲ್‌ಗಳಲ್ಲಿ ಆರ್ಥಿಕ ನೆರವು ನೀಡಿದವರು ಯಾರು? ದೈನಂದಿನ ಖರ್ಚುಗಳನ್ನು ನಿಭಾಯಿಸುತ್ತಿರುವುದು ಹೇಗೆ? ಎಂಬೆಲ್ಲಾ ಮಾಹಿತಿಗಳನ್ನು ಎಸ್‌ಐಟಿ ಕಲೆ ಹಾಕಿದೆ. ಪ್ರಮುಖವಾಗಿ ಪ್ರಕರಣದ ಮೂಲ ಬಿಂದು ಬುರುಡೆಯ ಬಗ್ಗೆ ಎಸ್‌ಐಟಿ ಮಹತ್ವದ ಅಂಶಗಳನ್ನು ಪತ್ತೆ ಹಚ್ಚಿದ್ದು, ಅದನ್ನು ಗೃಹ ಸಚಿವರೊಂದಿಗೆ ಹಂಚಿಕೊಂಡಿರುವುದಾಗಿ ತಿಳಿದು ಬಂದಿದೆ.
ಮುಂದಿನ ದಿನಗಳಲ್ಲಿ ಆರೋಪಿಯನ್ನು ಕೇರಳ, ತಮಿಳುನಾಡು, ದೆಹಲಿ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಕರೆದುಕೊಂಡು ಹೋಗಬೇಕಾಗಿದ್ದು, ಅದಕ್ಕೆ ಸಹಕಾರ ನೀಡುವಂತೆ ಗೃಹ ಸಚಿವರಿಗೆ ಎಸ್‌ಐಟಿ ಮುಖ್ಯಸ್ಥರು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಧರ್ಮಸ್ಥಳದ ವಿಚಾರವಾಗಿ ಆರಂಭದಲ್ಲಿ ಉತ್ಖನನದ ಮೂಲಕ ಕಳೇಬರಗಳ ತನಿಖೆ ನಡೆಸಿದ್ದ ಎಸ್‌ಐಟಿ ಅಲ್ಲಿ ಆರೋಪಿಗಳು ಹೇಳಿದಂತೆ ಅಸ್ಥಿಪಂಜರಗಳು ದೊರೆಯದ ಕಾರಣಕ್ಕೆ ತನಿಖೆ ತಿರುವು ಮುರುವಾಗಿದೆ. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪಿಗಳನ್ನು ಬಂಧಿಸಿ, ವಿಚಾರಣೆಯನ್ನು ಮುಂದುವರೆಸಲಾಗಿದೆ.
ತನಿಖೆ ದಿನೇದಿನೇ ಬೇರೆ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದ್ದು, ಒಂದೆಡೆ ಅಸಹಜ ಸಾವುಗಳ ಕುರಿತ ತನಿಖೆಯೂ ನಡೆಯುತ್ತಿದೆ. ಮತ್ತೊಂದೆಡೆ ಧರ್ಮಸ್ಥಳದ ವಿರುದ್ದ ಷಡ್ಯಂತ್ರಗಳು ಕೂಡಾ ವಿಚಾರಣೆಗೊಳಗಾಗುತ್ತಿವೆ. ಪ್ರಣಬ್ ಮೊಹಾಂತಿ ಅವರು ಇಂದು ಗೃಹ ಸಚಿವರನ್ನು ಭೇಟಿ ಮಾಡಿದ ವೇಳೆ ಈ ಎಲ್ಲಾ ವಿಚಾರಗಳ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್
- ಟಿ20 ಕ್ರಿಕೆಟ್ಗೆ ಮಿಚೆಲ್ ಸ್ಟಾರ್ಕ್ ವಿದಾಯ
- ಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ
- ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ
- ಉದ್ಯಮಿ ಅಪಹರಿಸಿ ಜೀವ ಬೆದರಿಕೆ ಹಾಕಿ 3 ಲಕ್ಷ ರೂ. ಪಡೆದಿದ್ದ ನಾಲ್ವರು ರೌಡಿ ಸೇರಿ 6 ಮಂದಿ ಅರೆಸ್ಟ್