ಬೆಂಗಳೂರು, ಸೆ.2- ಭೂ ಒಡೆತನ ಯೋಜನೆಯ ಫಲಾನುಭವಿಗಳಿಂದ ಶೇ. 40ರಷ್ಟು ಕಮೀಷನ್ ವಸೂಲಿ ಮಾಡಿದ ಆರೋಪಕ್ಕೆ ಗುರಿಯಾಗಿರುವ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಅವರ ಪದತ್ಯಾಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಭೋವಿ ಅಭಿವೃದ್ಧಿ ನಿಗಮದಿಂದ ಸುಮಾರು 15 ಕೋಟಿ ರೂ.ಗಳ ವೆಚ್ಚದಲ್ಲಿ ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಅದರಲ್ಲಿ 60 ಎಕರೆಯನ್ನು ಖರೀದಿಸಿ, ಫಲಾನುಭವಿಗಳಿಗೆ ಹಂಚಿಕೆ ಮಾಡುವ ಇರಾದೆಯಿತ್ತು. ಈ ಯೋಜನೆಯಲ್ಲಿ ಫಲಾನುಭವಿಗಳಿಂದ ಪ್ರತಿ ಘಟಕ ವೆಚ್ಚಕ್ಕೂ ಶೇ. 40ರಷ್ಟು ಕಮೀಷನ್ ನಿಗದಿ ಮಾಡಿರುವುದಾಗಿ ಆರೋಪಗಳಿವೆ. ಜೊತೆಗೆ ಹಣ ಬಿಡುಗಡೆ ವೇಳೆಯಲ್ಲೂ ಹೆಚ್ಚುವರಿಯಾಗಿ ವಸೂಲಿ ಮಾಡಿರುವುದು ತಿಳಿದು ಬಂದಿದೆ.
ಈಗಾಗಲೇ ಬಿಡುಗಡೆಯಾಗಿರುವ 3 ಕೋಟಿ ರೂ. ಅನುದಾನದಲ್ಲಿ ಕಮೀಷನ್ ಪಡೆದು ಅದನ್ನು ನಿಗಮದ ಅಧ್ಯಕ್ಷರಿಗೆ ಮಧ್ಯವರ್ತಿಯೊಬ್ಬರು ನೀಡುವಾಗ, ನಡೆದ ಚರ್ಚೆಗಳು ರಹಸ್ಯ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸರ್ಕಾರಕ್ಕೆ ತಲೆ ನೋವು ತಂದಿಟ್ಟಿದೆ.
ವಿಡಿಯೋದಲ್ಲಿ ಸೆರೆಯಾಗಿರುವ ಮಾತುಕತೆಯಲ್ಲಿ ನಿಗಮದ ಅಧ್ಯಕ್ಷ ರವಿಕುಮಾರ್ ಸಚಿವರ ಕಡೆಯವರೆಗೂ ಹಣ ತಲುಪಿಸಬೇಕು ಎಂದು ಹೇಳಿರುವುದು ಸೆರೆಯಾಗಿದೆ. ಆ ಸಚಿವರು ಯಾರು ಎಂದು ಇನ್ನೂ ಬಹಿರಂಗಗೊಂಡಿಲ್ಲ. ಸರ್ಕಾರ ಮುಜುಗರದಿಂದ ತಪ್ಪಿಸಿಕೊಳ್ಳಲು ರವಿಕುಮಾರ್ ಅವರು ತಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಒಂದು ವೇಳೆ ರವಿಕುಮಾರ್ ಅವರ ತಲೆದಂಡವಾದರೆ, ಸರ್ಕಾರ ಹಗರಣ ನಡೆದಿರುವುದನ್ನು ಒಪ್ಪಿಕೊಂಡಂತಾಗುತ್ತದೆ. ಸಹಜವಾಗಿಯೇ ಮಹರ್ಷಿ ವಾಲೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ಹಗರಣದ ತನಿಖೆಗೆ ವಿಶೇಷ ತಂಡ ರಚಿಸಿದಂತೆ ಭೋವಿ ಅಭಿವೃದ್ಧಿ ನಿಗಮದ ತನಿಖೆಗೂ ಎಸ್‌ಐಟಿ ರಚಿಸಬೇಕಾಗುತ್ತದೆ.
ಈ ಹಿಂದೆ ಸಚಿವರಾಗಿದ್ದ ನಾಗೇಂದ್ರ ಅವರ ತಲೆದಂಡವಾದಂತೆ ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಲ್ಲಿ ಕಮೀಷನ್‌ನ ಪಾಲುದಾರರಾಗಿರುವ ಸಚಿವರ ತಲೆದಂಡ ಅನಿವಾರ್ಯವಾಗುತ್ತದೆ.
ಸರ್ಕಾರ ಪರಿಶಿಷ್ಟರ ಯೋಜನೆಗಳ ಹಣವನ್ನು ಗ್ಯಾರಂಟಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ದುರುಪಯೋಗ ಪಡಿಸಿಕೊಳ್ಳುವುದು ಒಂದು ಆರೋಪವಾದರೆ, ಬಿಡುಗಡೆಯಾದ ಹಣದಲ್ಲೂ ಶೇ. 40ರಷ್ಟು ಕಮೀಷನ್ ಪಡೆಯುವ ಮೂಲಕ ದಲಿತರ ವಿರೋಧಿಯಾಗಿ ವರ್ತಿಸುತ್ತಿದೆ ಎಂಬ ಆರೋಪಗಳಿವೆ. ಇವು ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಕೊಟ್ಟಂತಾಗಿದೆ.
ಭೋವಿ ಅಭಿವೃದ್ಧಿ ನಿಗಮದ ಹಗರಣದಲ್ಲೂ ಹಣದ ಅಕ್ರಮ ವಹಿವಾಟು ನಡೆದಿದೆ ಎಂಬ ಆರೋಪ ಮಾಡಿ, ಯಾರಾದರೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರೆ, ಕೇಂದ್ರ ತನಿಖಾ ಸಂಸ್ಥೆ ಮಧ್ಯ ಪ್ರವೇಶಿಸುವ ಸಾಧ್ಯತೆಗಳಿವೆ. ಈ ಹಗರಣದಲ್ಲಿ ಕೇಳಿ ಬರುವ ಪ್ರಭಾವಿ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದು, ಸಚಿವರ ಬಂಧನವಾದರೆ ಸರ್ಕಾರಕ್ಕೆ ಮತ್ತಷ್ಟು ಕಳಂಕ ಅಂಟಿಕೊಳ್ಳಲಿದೆ.
- ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ವಹಿಸುವ ಅಗತ್ಯವಿಲ್ಲ : ಪರಮೇಶ್ವರ್
- ಟಿ20 ಕ್ರಿಕೆಟ್ಗೆ ಮಿಚೆಲ್ ಸ್ಟಾರ್ಕ್ ವಿದಾಯ
- ಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ
- ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ
- ಉದ್ಯಮಿ ಅಪಹರಿಸಿ ಜೀವ ಬೆದರಿಕೆ ಹಾಕಿ 3 ಲಕ್ಷ ರೂ. ಪಡೆದಿದ್ದ ನಾಲ್ವರು ರೌಡಿ ಸೇರಿ 6 ಮಂದಿ ಅರೆಸ್ಟ್