Wednesday, September 3, 2025
Homeಇದೀಗ ಬಂದ ಸುದ್ದಿಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ

ಶಾಸಕ ಪಪ್ಪಿ ಮನೆ ಮೇಲೆ ಮತ್ತೆ ಇಡಿ ದಾಳಿ

ED raids MLA Veerendra Pappi's house again

ಬೆಂಗಳೂರು,ಸೆ.2– ಆನ್‌ಲೈನ್‌ ಬೆಟ್ಟಿಂಗ್‌ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಸ್ತುತ ಜಾರಿ ನಿರ್ದೇಶನಾಲಯ(ಇಡಿ) ವಶದಲ್ಲಿರುವ ಕಾಂಗ್ರೆಸ್‌‍ ಶಾಸಕ ವೀರೇಂದ್ರ ಪಪ್ಪಿ ಅವರ ಮನೆಗಳ ಮೇಲೆ ಮತ್ತೆ ದಾಳಿ ನಡೆಸಲಾಗಿದೆ.

ಚಿತ್ರದುರ್ಗ ಹಾಗೂ ಚಳ್ಳಕೆರೆಯಲ್ಲಿರುವ ಸಹೋದರರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳು ಪ್ರಕರಣ ಸಂಬಂಧ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ವೀರೇಂದ್ರ ಪಪ್ಪಿಗೆ ಸೇರಿರುವ ಬೆಲೆ ಬಾಳುವ ನಾಲ್ಕು ಐಷರಾಮಿ ಕಾರುಗಳ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆಂದು ತಿಳಿದುಬಂದಿದೆ.
ಸಿಐಎಸ್‌‍ಎಫ್‌ ಭದ್ರತೆಯೊಂದಿಗೆ ಏಕಕಾಲಕ್ಕೆ ಎರಡು ಕಡೆ ದಾಳಿ ನಡೆಸಿರುವ ಅಧಿಕಾರಿಗಳು ಕೋಟ್ಯಂತರ ರೂ. ಬೆಲೆ ಬಾಳುವ ಕಾರುಗಳು ಎಲ್ಲಿಂದ ಬಂದಿದ್ದವು? ಯಾವ ವರ್ಷದಲ್ಲಿ ಖರೀದಿಸಲಾಗಿತ್ತು? ತೆರಿಗೆ ಕಟ್ಟಲಾಗಿತ್ತೇ? ಎಂಬುದರ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ಪ್ರಸ್ತುತ ಇ.ಡಿ ವಶದಲ್ಲಿರುವ ಈ ನಾಲ್ಕು ಕಾರುಗಳನ್ನು ಯಾವುದೇ ಕ್ಷಣದಲ್ಲಿ ಜಪ್ತಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಳೆದ ಆ.22ರಂದು ಚಿತ್ರದುರ್ಗ, ಚಳ್ಳಕೆರೆ, ಬೆಂಗಳೂರು, ಗೋವಾ, ಜೋಧ್‌ಪುರ ಸೇರಿದಂತೆ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ವೀರೇಂದ್ರ ಪಪ್ಪಿಗೆ ಸೇರಿದ ಕಚೇರಿ ಮತ್ತು ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.

ದಾಳಿಯ ವೇಳೆ 12 ಕೋಟಿ ನಗದು, 6 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ, 10 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿದ್ದರೆ, ಕೆ.ಸಿ.ವೀರೇಂದ್ರ ಪಪ್ಪಿ ಅವರ 17 ಬ್ಯಾಂಕ್‌ ಖಾತೆಗಳು ಮತ್ತು 2 ಬ್ಯಾಂಕ್‌ ಲಾಕರ್‌ಗಳನ್ನು ಸ್ಥಗಿತಗೊಳಿಸಲಾಗಿದೆ.

ದಾಳಿ ನಡೆಸಿದ ಸಂದರ್ಭದಲ್ಲಿ ವೀರೇಂದ್ರ ಪಪ್ಪಿ ಸಿಕ್ಕಿಂ ರಾಜಧಾನಿ ಗ್ಯಾಂಗ್ಟಕ್‌ ತೆರೆಳಿದ್ದರು. ಕೋಲ್ಕತ್ತಾ ಇ.ಡಿ ಅಧಿಕಾರಿಗಳ ಒಂದು ತಂಡ ಅಲ್ಲಿಗೆ ತೆರಳಿ ಬಂಧಿಸಿ ಬೆಂಗಳೂರಿಗೆ ಕರೆತಂದಿತ್ತು. ಪ್ರಸ್ತುತ ಅವರು ಇಡಿ ವಶದಲ್ಲಿದ್ದಾರೆ.

ವೀರೇಂದ್ರ ಪಪ್ಪಿ ಅವರ ಸಹೋದರ ಕೆ. ಸಿ. ನಾಗರಾಜ್‌ ಮತ್ತು ಅವರ ಮಗ ಪೃಥ್ವಿ.ಎನ್‌ ರಾಜ್‌ ಅವರ ಮನೆಗಳಿಂದ ಆಸ್ತಿಗೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಸಹಚರರಾದ ಸಹೋದರ ಕೆ. ಸಿ. ತಿಪ್ಪೇಸ್ವಾಮಿ ಮತ್ತು ಪೃಥ್ವಿ ಎನ್‌. ರಾಜ್‌ ಅವರು ದುಬೈಯಿಂದ ಆನ್‌ಲೈನ್‌ ಗೇಮಿಂಗ್‌ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ದಾಳಿಯ ವೇಳೆ ಭಾರೀ ಪ್ರಮಾಣದ ಹಣ ಹಾಗೂ ಚಿನ್ನಾಭರಣಗಳು ಪತ್ತೆಯಾಗಿರುವುದು ಪ್ರಕರಣದ ತೀವ್ರತೆಯನ್ನು ಸೂಚಿಸುತ್ತಿದೆ. ಬೆಟ್ಟಿಂಗ್‌ ದಂಧೆಯಿಂದ ಸಂಪಾದಿಸಿದ ಆದಾಯವನ್ನು ಮತ್ತಷ್ಟು ಗುರುತಿಸಲು ವೀರೇಂದ್ರನನ್ನು ಬಂಧಿಸಲಾಗಿತ್ತು.

RELATED ARTICLES

Latest News