ಬೆಂಗಳೂರು, ಸೆ.3- ಕಳೆದ ಹದಿನೈದು ದಿನಗಳಿಂದ ಚೇತರಿಸಿಕೊಂಡಿದ್ದ ಟೊಮ್ಯಾಟೋ ದರ ದಿಢೀರನೆ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.ಮಳೆ, ಮೋಡ ಕವಿದ ವಾತಾವರಣ, ರೋಗಬಾಧೆಯಿಂದ ಟೊಮ್ಯಾಟೋ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ.
ಕಳೆದ 15 ದಿನಗಳಿಂದ ನಿಧಾನಗತಿಯಲ್ಲಿ ಏರುತ್ತಿದ್ದ ಟೊಮ್ಯಾಟೋ ಬೆಲೆ ಈಗ ದಿಢೀರನೆ ಕುಸಿದಿದೆ.ಕಳೆದ ಒಂದು ವಾರದ ಹಿಂದೆ ಏಷ್ಯಾದಲ್ಲೇ ಎರಡನೆ ಅತಿ ದೊಡ್ಡ ಮಾರುಕಟ್ಟೆಯಾದ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ತೂಕದ ಒಂದು ಬಾಕ್ಸ್ ಟೊಮ್ಯಾಟೋ ಬೆಲೆ 750ರೂ.ಗೆ ಮಾರಾಟವಾಗುತ್ತಿತ್ತು. ಇಂದು 250 ರಿಂದ 300ರೂ.ಗೆ ಇಳಿದಿದೆ.
ಇದರಿಂದ ಟೊಮ್ಯಾಟೋ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವಾರ ಚಿಲ್ಲರೆಯಾಗಿ ಒಂದು ಕೆಜಿ ಟೊಮ್ಯಾಟೋ 40 ರಿಂದ 50ರೂ.ಗೆ ಮಾರಾಟವಾಗುತ್ತಿತ್ತು. ಆದರೆ, ಈಗ 15 ರಿಂದ 20ರೂ.ಗೆ ಕುಸಿದಿದೆ.ಮಳೆ ಹಾಗೂ ಸಾಲುಸಾಲು ಹಬ್ಬ , ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ಲಾಭದ ಖುಷಿಯಲ್ಲಿದ್ದ ಬೆಳೆಗಾರರಿಗೆ ಬೆಲೆ ಕುಸಿತ ಬರ ಸಿಡಿಲಿನಂತೆ ಬಡಿದಿದೆ.
ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ರಾಜ್ಯಗಳಲ್ಲಿ ಟೊಮ್ಯಾಟೋಗೆ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಟೊಮ್ಯಾಟೋ ಖರೀದಿಸಿ ಸರಬರಾಜು ಮಾಡಿದರೆ ಗುಣಮಟ್ಟವಿಲ್ಲದೆ ಹಣ್ಣು ಬೇಗ ಹಾಳಾಗುತ್ತಿದ್ದು, ನಷ್ಟವಾಗುತ್ತಿದೆ. ಇದರಿಂದ ವರ್ತಕರು ಖರೀದಿಗೆ ಹಿಂದೇಟು ಹಾಕುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ ಎಂದು ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯ, ರೋಗಬಾಧೆ ಹಾಗೂ ಮಳೆಯಿಂದ ಬೆಳೆ ನಾಶವಾಗಿದ್ದು, ಟೊಮ್ಯಾಟೋ ಬೆಲೆ ಹೆಚ್ಚಳವಾಗಬೇಕಾಗಿತ್ತು. ಆದರೆ, ಬೆಲೆ ಕುಸಿತವಾಗಿದೆ. ಇದಕ್ಕೆ ಟೊಮ್ಯಾಟೋ ಒಂದು ರೀತಿಯ ಲಾಟರಿ ಬೆಳೆಯಾಗಿದ್ದು, ಯಾವಾಗ ಬೆಲೆ ಬರುತ್ತೋ, ಕುಸಿಯುತ್ತೋ ಎಂಬುದನ್ನು ಯಾರೂ ಕೂಡ ಅಂದಾಜು ಮಾಡಲಾಗುವುದಿಲ್ಲ.ಏರಿದರೆ ಒಮೆಲೆ ಶತಕ ಬಾರಿಸುತ್ತದೆ, ಮತ್ತೊಮೆ ಪಾತಾಳ ತಲುಪಿ ಕೆಜಿಗೆ 10ರೂ., 5ರೂ.ಗೆ ಮಾರಾಟವಾಗುತ್ತದೆ. ಏನೇ ಆದರೂ ನಷ್ಟ ಅನುಭವಿಸುವುದು ಮಾತ್ರ ರೈತರು.
- ಪಿಎಂಎಫ್ಎಂಇ ಯೋಜನೆಯಲ್ಲಿ ಕರ್ನಾಟಕದ ಅಭೂತಪೂರ್ವ ಪ್ರಗತಿ: ಸಚಿವ ಚಲುವರಾಯಸ್ವಾಮಿ
- ಸಮೀರ್ ನಿವಾಸದ ಮೇಲೆ ಬೆಳ್ತಂಗಡಿ ಪೊಲೀಸರ ದಾಳಿ
- ವಿದೇಶಿ ಪ್ರಜೆಗಳ ಮನೆಗಳ ಮೇಲೆ ದಾಳಿ: 600 ಗ್ರಾಂ ಕೊಕೈನ್ ವಶ
- ಕಾಂಗ್ರೆಸ್ ಪಕ್ಷದ ಕಚೇರಿಗಳಿಗೆ ಸರ್ಕಾರಿ ನಿವೇಶನ: ಸಂಪುಟದಲ್ಲಿ ಚರ್ಚೆ
- ಸರ್ಕಾರದಿಂದ ಪರಿಶಿಷ್ಟರ ಹಣ ದುರ್ಬಳಕೆ : ಅಶೋಕ್ ವಾಗ್ದಾಳಿ