ಬೆಂಗಳೂರು,ಸೆ.5-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ವಿದ್ಯುನಾನ ಮತಯಂತ್ರದ ಬದಲು ಮತಪತ್ರ ಬಳಕೆ ಮಾಡಲು ಸಚಿವ ಸಂಪುಟ ತೆಗೆದುಕೊಂಡಿರುವ ತೀರ್ಮಾನವನ್ನು ಸಮರ್ಥಿಸಿಕೊಂಡ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಇದರಿಂದ ಪಾರದರ್ಶಕತೆ ಬರಲಿದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವಿಎಂ ಮೇಲೆ ಸಾಕಷ್ಟು ಅನುಮಾನಗಳಿವೆ. ಅಮೆರಿಕದಲ್ಲಿ ಇವಿಎಂ ಬದಲು ಮತಪತ್ರ ಬಳಸಲಾಗುತ್ತದೆ. ಅದಕ್ಕಾಗಿ ನಾವು ಇವಿಎಂ ಬೇಡ ಎನ್ನುತ್ತಿದ್ದೇವೆ. ಸದುದ್ದೇಶದಿಂದ ಮತಪತ್ರವನ್ನು ಬಳಕೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಚುನಾವಣೆಯಲ್ಲಿ ಮತಪತ್ರ ಬಳಕೆ ತರುವ ಅಧಿಕಾರ ರಾಜ್ಯಕ್ಕಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಹಿನ್ನಡೆಯಾಯಿತು ಎಂದು ಉದಾಹರಿಸಿದರು.
ಸರ್ಕಾರದ ಹಸ್ತಕ್ಷೇಪವಿಲ್ಲ
ಧರ್ಮಸ್ಥಳದ ಪ್ರಕರಣದಲ್ಲಿ ಎಸ್‌ಐಟಿ ಒಳ್ಳೆಯ ಕೆಲಸ ಮಾಡುತ್ತಿದೆ. ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ. ಆದರೆ ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೊದಲು ಎಸ್‌ಐಟಿಯನ್ನು ಸ್ವಾಗತಿಸಿದ್ದರು ಎಂದರು.
ಮೂಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಯಾವ ಪಾತ್ರವೂ ಇರಲಿಲ್ಲ. ಹೀಗಾಗಿ ಕ್ಲೀನ್‌ಚಿಟ್ ಸಿಕ್ಕಿದೆ. ವಿನಾಕಾರಣ ಈ ಪ್ರಕರಣದಲ್ಲಿ ಕಳಂಕ ತರುವ ಕೆಲಸವಾಯಿತು. ಅಧಿಕಾರಿಗಳ ತಪ್ಪಿದ್ದರೆ ಕ್ರಮ ಆಗಲಿದೆ ಎಂದು ಹೇಳಿದರು.