ಹೈದರಾಬಾದ್,ಸೆ.5– ಆಂಧ್ರಪ್ರದೇಶದ 36 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳನ್ನು ಕೊಂದು, ಅವರ ದೇಹಗಳಿಗೆ ಬೆಂಕಿ ಹಚ್ಚಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕಾಶಂ ಜಿಲ್ಲೆಯ ಪೆದ್ದಬೋಯಪಲ್ಲಿ ಗ್ರಾಮದ ರಸಗೊಬ್ಬರ ಅಂಗಡಿ ಮಾಲೀಕ ಗುಟ್ಟ ವೆಂಕಟೇಶ್ವರಲು ಎಂದು ಗುರುತಿಸಲಾದ ಆರೋಪಿ ತನ್ನ ಪತ್ನಿ ದೀಪಿಕಾ ಜೊತೆ ಜಗಳವಾಡಿದ್ದ.
ಇದರಿಂದ ನೊಂದು ತಮ ಮೂವರು ಮಕ್ಕಳಾದ 8 ವರ್ಷದ ಮೋಕ್ಷಿತಾ, 6 ವರ್ಷದ ವರ್ಷಿಣಿ ಮತ್ತು 4 ವರ್ಷದ ಶಿವಧರ್ಮ ಅವರೊಂದಿಗೆ ಶ್ರೀಶೈಲಂ ಕಡೆಗೆ ತನ್ನ ಮೋಟಾರ್ ಸೈಕಲ್‌ನಲ್ಲಿ ಪರಾರಿಯಾಗಿದ್ದಾನೆ. ಅದೇ ರಾತ್ರಿ ವೆಂಕಟೇಶ್ವರಲು ತನ್ನ ಇಬ್ಬರು ಕಿರಿಯ ಮಕ್ಕಳಾದ ವರ್ಷಿಣಿ ಮತ್ತು ಶಿವಧರ್ಮ ಅವರನ್ನು ಉಪ್ಪನುತಲ ಮಂಡಲದ ಸೂರ್ಯತಾಂಡ ಬಳಿ ಬೆಂಕಿ ಹಚ್ಚಿದ್ದಾನೆ.
ನಂತರ ತೆಲಂಗಾಣದ ಅಚಂಪೇಟ್ ಬಳಿಯ ತಂದ್ರಾದಲ್ಲಿ ತನ್ನ ಹಿರಿಯ ಮಗಳು ಮೋಕ್ಷಿತಾಳನ್ನು ಕೊಂದಿದ್ದಾನೆ. ಕೊಲೆಗಳ ನಂತರ, ಅಚಂಪೇಟ್‌ನಲ್ಲಿ ಖರೀದಿಸಿದ್ದ ಕೀಟನಾಶಕವನ್ನು ಸೇವಿಸಿದ್ದಾನೆ. ಅವನ ಶವ ವೆಲ್ದಂಡ ಮಂಡಲದ ಬುರಕುಂಟಾದಲ್ಲಿ ಪತ್ತೆಯಾಗಿದೆ.
ಹೈದರಾಬಾದ್-ಶ್ರೀಶೈಲಂ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನದಲ್ಲಿ ಆ ವ್ಯಕ್ತಿ ತನ್ನ ಮಕ್ಕಳೊಂದಿಗೆ ಪ್ರಯಾಣಿಸುತ್ತಿರುವುದನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿವೆ. ಪೊಲೀಸರು ಮತ್ತು ಶೋಧ ತಂಡಗಳು ಮಾರ್ಗದುದ್ದಕ್ಕೂ ವಿವಿಧ ಸ್ಥಳಗಳಿಂದ ಮಕ್ಕಳ ಸುಟ್ಟ ಅವಶೇಷಗಳನ್ನು ವಶಪಡಿಸಿಕೊಂಡಿದ್ದಾರೆ.
ಕೌಟುಂಬಿಕ ಕಲಹ ಮತ್ತು ಭಾವನಾತಕ ಯಾತನೆಯೇ ಈ ಅಪರಾಧದ ಮೂಲ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ವೆಂಕಟೇಶ್ವರಲು ಅವರ ಸಹೋದರ ಮಲ್ಲಿಕಾರ್ಜುನ ರಾವ್ ನೀಡಿದ ದೂರಿನ ಮೇರೆಗೆ ವೆಲ್ದಂಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಾವಿಗೆ ನಿಖರವಾದ ಕಾರಣಗಳನ್ನು ಸ್ಥಾಪಿಸಲು ಮತ್ತು ಕೃತ್ಯಕ್ಕೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು ಹೆಚ್ಚಿನ ತನಿಖೆ, ಶವಪರೀಕ್ಷೆ ಮತ್ತು ವಿಧಿವಿಜ್ಞಾನ ವಿಶ್ಲೇಷಣೆ ನಡೆಯುತ್ತಿದೆ.