ಬೆಳ್ತಂಗಡಿ,ಸೆ.5– ಗಿರೀಶ್ ಮಟ್ಟಣ್ಣನವರ್‌ರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.ಇಂದು ಬೆಳಿಗ್ಗೆ ಎಸ್‌ಐಟಿ ಕಚೇರಿಗೆ ಹಾಜರಾದ ಗಿರೀಶ್ ಅವರನ್ನು ಎಸ್‌ಐಟಿ ಅಧಿಕಾರಿಗಳು ಬುರುಡೆ ಪ್ರಕರಣ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಿ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ಬುರುಡೆ ಚಿನ್ನಯ್ಯ ವಿಚಾರಣೆ ಸಂದರ್ಭದಲ್ಲಿ ಆತ ಹೇಳಿರುವ ಕೆಲವು ಸೂಕ್ಷ್ಮ ವಿಷಯಗಳ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಗಿರೀಶ್ ಹಾಜರಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ.
ಗಿರೀಶ್ ಮಟ್ಟಣ್ಣನವರ್ ಹಾಗೂ ಮತ್ತಿತರರು ಚಿನ್ನಯ್ಯನನ್ನು ತಮಿಳುನಾಡಿನಲ್ಲಿ ಸಂಪರ್ಕಿಸಿ ಅವರನ್ನು ಕರೆತಂದು ಆಶ್ರಯ ನೀಡಿ ತಾವು ಹೇಳಿದ ಹಾಗೆ ನಡೆದುಕೊಳ್ಳಬೇಕೆಂದು ಒತ್ತಡ ಹಾಕಿದ್ದರೆಂಬುದು ತನಿಖೆ ವೇಳೆ ಗೊತ್ತಾಗಿದೆ.
ಪ್ರಕರಣ ಸಂಬಂಧ ಬ್ರಹಾವರ ಠಾಣೆ ಪೊಲೀಸರು ಉಜಿರೆಯ ಮಹೇಶ್‌ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಲು ಅವರ ಮನೆಗೆ ಹೋದಾಗ ಪೊಲೀಸ್ ಕರ್ತವ್ಯಕ್ಕೆ ಗಿರೀಶ್ ಮಟ್ಟಣ್ಣನವರ್ ಅಡ್ಡಿಪಡಿಸಿದ್ದರು. ಹಾಗಾಗಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ ಮುಂತಾದವರು ಧರ್ಮಸ್ಥಳದ ವಿರುದ್ಧ ಪಿತೂರಿ ಮಾಡಿದ್ದಾರೆಂದು ಕೆಲವರು ಆರೋಪಿಸಿದ್ದರು. ಈ ಬಗ್ಗೆ ತನಿಖೆ ಪ್ರಗತಿಯಲ್ಲಿದೆ.ಸೌಜನ್ಯ ಪರ ಹೋರಾಟ ಹಾಗೂ ಪ್ರತಿಭಟನೆ ಸಂದರ್ಭದಲ್ಲಿ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರುದ್ಧ ಗಿರೀಶ್ ಮಟ್ಟಣ್ಣನವರ್ ಹಲವು ಆರೋಪ ಮಾಡಿದ್ದರು.