ಬೆಂಗಳೂರು,ಸೆ.5- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ಮಾಡುವ ಬಗ್ಗೆ ಬಿಜೆಪಿಯವರಿಗೆ ಏಕೆ ಆತಂಕ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ಜಾರಿಗೆ ತರಲು ರಾಜ್ಯಸರ್ಕಾರಕ್ಕೆ ಅವಕಾಶವಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಮಾಡಿರುವ ಕಾನೂನಿನಲ್ಲಿ ಮತಪತ್ರ ಅಥವಾ ಇವಿಎಂ ಬಳಕೆ ಎಂಬುದಿದೆ. ಹೀಗಾಗಿ ನಾವು ಮತಪತ್ರ ಬಳಕೆಗೆ ತೀರ್ಮಾನಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಮತಪತ್ರ ಬಳಕೆ ಕುರಿತಂತೆ ಬಿಜೆಪಿಯವರಿಗೆ ಗಾಬರಿ ಏಕೆ? ಕಳ್ಳನ ಮನಸ್ಸು ಹುಳ್ಳಗೆ ಎಂದ ಹಾಗೆ ಆಗಿದೆ. ಕೇಂದ್ರ ಸರ್ಕಾರ ಲೋಕಸಭೆ, ವಿಧಾನಸಭೆ ಚುನಾವಣೆ ಬಗ್ಗೆ ತೀರ್ಮಾನ ಮಾಡುತ್ತಾರೆ. ಚುನಾವಣಾ ಆಯೋಗವು ಆ ಬಗ್ಗೆ ತೀರ್ಮಾನ ಮಾಡುತ್ತದೆ. ನಮದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಸೀಮಿತವಾಗಿದೆ ಎಂದರು.
ರಾಮನಗರದ ರೈತರು ನಮ ಜನರು. ಅವರ ಬಗ್ಗೆ ಮಾತನಾಡಲು ನನಗೆ ಹಕ್ಕಿದೆ. ಶೇ.82 ರಷ್ಟು ರೈತರು ಜಮೀನು ಕೊಡಲು ಒಪ್ಪಿದ್ದಾರೆ. ಶೇ. 18 ರಷ್ಟು ಜನರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಒಳ್ಳೆಯ ಬೆಲೆ ಕೊಟ್ಟಿದ್ದು ದೇಶಕ್ಕೆ ಮಾದರಿಯಾಗುವ ಯೋಜನೆ ಮಾಡಲು ಉದ್ದೇಶಿಸಿದ್ದೇವೆ ಎಂದು ಹೇಳಿದರು.
ಈಗ ಟೀಕೆ ಮಾಡುವವರು ಅವರ ಆಡಳಿತಾವಧಿಯಲ್ಲಿ ಯೋಜನೆ ಏಕೆ ಮಾಡಿಲ್ಲ? ಅವರ ಅವಧಿಯಲ್ಲೇ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರತಿಭಟಿಸುವವರಲ್ಲಿ ಯಾವ ಪಾರ್ಟಿಗೆ ಸೇರಿದ್ದರು, ಯಾವ ಶಾಲು ಹಾಕಿದ್ದರು ಎಂಬುದು ನನಗೆ ಗೊತ್ತಿದೆ ಎಂದು ಅವರು ತಿಳಿಸಿದರು.ನೈಸ್ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಇದ್ದು, ಅಲ್ಲಿ ತೀರ್ಮಾನವಾಗುವವರೆಗೂ ಏನೂ ಮಾಡಲು ಆಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಕೇವಲ ನಮ ಬೆಂಬಲಿಗರ ಕೇಸುಗಳನ್ನಷ್ಟೇ ವಾಪಸ್ಸು ಪಡೆದಿಲ್ಲ. ಬಿಜೆಪಿಯವರ ಕೇಸುಗಳನ್ನೂ ವಾಪಸ್ಸು ಪಡೆಯಲು ತೀರ್ಮಾನ ಮಾಡಲಾಗಿದೆ. ಇ.ಡಿ. ಬಂಧನದ ಸಂದರ್ಭದಲ್ಲಿ ಏನೂ ಮಾಡಲಿಲ್ಲ. ಆದರೂ ನಮ ಕಾರ್ಯಕರ್ತರ ಮೇಲೆ ಬಿಜೆಪಿಯವರು ಕೇಸು ಹಾಕಿಸಿದ್ದರು. ನನ್ನ ಮೇಲೂ ಕೇಸು ಹಾಕಿದ್ದರು.
ನಾವು ನೋಡಿಕೊಂಡು ಕೂರಬೇಕಾ?, ಈಗಾಗಲೇ ನನ್ನನ್ನು ಬಂಧಿಸಿದ ಪ್ರಕರಣ ವಜಾ ಆಗಿದೆ. ನನಗೆ ನ್ಯಾಯ ಕೊಡುವವರು ಯಾರು?, ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಅದು ದೊಡ್ಡ ಸಂಭ್ರಮಾಚರಣೆ ಎಂದು ಯಾರೆಲ್ಲಾ ಟೀಕೆ ಮಾಡಿದ್ದರು?, ಸುಪ್ರೀಂಕೋರ್ಟ್‌ನಲ್ಲಿ ಆ ಕೇಸು ವಜಾ ಆದಾಗ ಏಕೆ ಅಭಿನಂದನೆ ಸಲ್ಲಿಸಲಿಲ್ಲ? ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.